ವಿಲ್ಲೋಗೆ ಬಿದಿರು ಸ್ಪರ್ಧೆ: ಕ್ರಿಕೆಟ್ ಬ್ಯಾಟ್ ತಯಾರಿಕೆಯಲ್ಲಿ ವಿನೂತನ ತಂತ್ರಜ್ಞಾನ; ಬೆಲೆ ಕಡಿಮೆ, ಸಾಮರ್ಥ್ಯ ಹೆಚ್ಚು!

ಸಾಂಪ್ರದಾಯಿಕ ಶೈಲಿಯ ವಿಲ್ಲೋ ಮರದ ಬ್ಯಾಟ್ ಗಳಿಗೆ ಪ್ರತಿಯಾಗಿ ಇದೀಗ ಬಿದಿರಿನ ಬ್ಯಾಟ್ ಗಳು ಬಂದಿದ್ದು, ಬಿದಿರು ಬಳಕೆ ಮಾಡಿ ತಯಾರಿಸಲಾದ ಬ್ಯಾಟ್‌ನಲ್ಲಿ ಚೆಂಡನ್ನು ಹೆಚ್ಚು ಬಲಿಷ್ಠವಾಗಿ ದಂಡಿಸಬಹುದು ಎಂದು ಬ್ರಿಟನ್‌ನ ವಿಜ್ಞಾನಿಗಳು ಸಾಬೀತು ಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಂಡನ್: ಸಾಂಪ್ರದಾಯಿಕ ಶೈಲಿಯ ವಿಲ್ಲೋ ಮರದ ಬ್ಯಾಟ್ ಗಳಿಗೆ ಪ್ರತಿಯಾಗಿ ಇದೀಗ ಬಿದಿರಿನ ಬ್ಯಾಟ್ ಗಳು ಬಂದಿದ್ದು, ಬಿದಿರು ಬಳಕೆ ಮಾಡಿ ತಯಾರಿಸಲಾದ ಬ್ಯಾಟ್‌ನಲ್ಲಿ ಚೆಂಡನ್ನು ಹೆಚ್ಚು ಬಲಿಷ್ಠವಾಗಿ ದಂಡಿಸಬಹುದು ಎಂದು ಬ್ರಿಟನ್‌ನ ವಿಜ್ಞಾನಿಗಳು ಸಾಬೀತು ಪಡಿಸಿದ್ದಾರೆ.

ಹೌದು ಶತಮಾನಗಳಿಂದಲೂ ಬಳಕೆಯಲ್ಲಿರುವ ವಿಲ್ಲೋ ಮರದ ಬ್ಯಾಟ್ ಗಳಿಗೆ ತೀವ್ರ ಸ್ಪರ್ಧೆಯಾಗಿ ಇದೀಗ ಬಿದಿರಿನ ಬ್ಯಾಟ್ ಗಳು ಬಂದಿದ್ದು, ಇವು ತೂಕದಲ್ಲಿ ವಿಲ್ಲೋ ಮರಕ್ಕಿಂತ ಕಡಿಮೆ ತೂಕ ಮತ್ತು ಹೆಚ್ಚು ಬಲಿಷ್ಠವಾಗಿದೆ ಎಂಬುದನ್ನು ವಿಜ್ಞಾನಿಗಳು ಸಾಬೀತು ಪಡಿಸಿದ್ದಾರೆ.  ಈ ಕುರಿತಂತೆ ಸ್ಪೋರ್ಟ್ಸ್‌  ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಜರ್ನಲ್‌ನಲ್ಲಿ ಪ್ರಕಟವಾಗಿರುವ ವರದಿಯಲ್ಲಿ ತಿಳಿಸಿರುವಂತೆ ಬಿದಿರನ್ನು ಪದರವಾಗಿ ಜೋಡಿಸಿ ಕ್ರಿಕೆಟ್‌ ಬ್ಯಾಟ್ ತಯಾರಿಸಲು ಸಾಧ್ಯ ಎಂದು ವಿವರಿಸಲಾಗಿದೆ. 

ವರದಿಯಲ್ಲಿರುವಂತೆ ವಿಲ್ಲೋ ಬ್ಯಾಟ್‌ಗಿಂತಲೂ ಬ್ಯಾಂಬೂ ಬ್ಯಾಟ್‌ ಅತ್ಯಂತ ಬಲಿಷ್ಟವಾಗಿದ್ದು, ಹೆಚ್ಚಿನ ''ಸ್ವೀಟ್‌ ಸ್ಪಾಟ್‌'' (sweet spot) ಹೊಂದಿದೆ. ಸಾಂಪ್ರದಾಯಿಕ ವಿಲ್ಲೋ ಬ್ಯಾಟ್‌ನಲ್ಲಿ ಮಧ್ಯಭಾಗಕ್ಕೆ ಚೆಂಡು ತಾಗಿದರೆ ಮಾತ್ರ ಹೆಚ್ಚು ವೇಗವಾಗಿ ಹಾರುತ್ತದೆ. ಆದರೆ, ಬ್ಯಾಂಬೂ ಬ್ಯಾಟ್‌ನಲ್ಲಿ ಚೆಂಡು  ಅಡಿಯಿಂದ ಮುಡಿವರೆಗೆ ಎಲ್ಲೇ ತಾಗಿದರು ವೇಗವಾಗಿ ಪುಟಿಯುತ್ತದೆ ಎಂಬುದು ಸಂಶೋಧನೆಯಲ್ಲಿ ತಿಳಿದುಬಂದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕೇಂಬ್ರಿಡ್ಜ್‌ ಯೂನಿವರ್ಸಿಟಿಯ ಯುವ ವಿಜ್ಞಾನಿ ಡಾ. ದರ್ಶಿಲ್ ಶಾ ಅವರು, 'ಶತಮಾನದಿಂದಲೂ ಕ್ರಿಕೆಟ್‌ ಬ್ಯಾಟ್‌ಗಳ ತಯಾರಿಕೆಗೆ ವಿಲ್ಲೋ ಮರದ ತುಂಡುಗಳನ್ನೇ ಬಳಕೆ ಮಾಡಲಾಗುತ್ತಿದೆ. ಇಂಗ್ಲಿಷ್‌ ವಿಲ್ಲೋ ಮರದ ತುಂಡು ಬಹಳಾ ದುಬಾರಿ. ಕ್ರಿಕೆಟ್‌ ಬ್ಯಾಟ್‌ ತಯಾರಿಕೆಗೆ ಈ  ಮರಗಳನ್ನು 15 ವರ್ಷಗಳ ಕಾಲ ಬೆಳೆಸಬೇಕಾಗುತ್ತದೆ. ಇದರಲ್ಲಿ ಶೇ.30 ರಷ್ಟು ಮರದ ತುಂಡುಗಳು ಬ್ಯಾಟ್‌ ತಯಾರಿಸುವಾಗ ಉಪಯೋಗಕ್ಕೆ ಬರುವುದಿಲ್ಲ ಎಂದು ಹೇಳಿದ್ದಾರೆ.

ಬಿದಿರು ಮರವಲ್ಲ. ಇದು ಹುಲ್ಲು, ಆದ ಕಾರಣ ಬಹಳ ಕಡಿಮೆ ದರದಲ್ಲಿ ಲಭ್ಯವಾಗಲಿದೆ. ಬಿದಿರು ಬೇಗನೆ ಬೆಳೆಯುವುದರಿಂದ ಬ್ಯಾಟ್‌ ತಯಾರಿಕೆಗೆ ಸೂಕ್ತವಾದುದ್ದಾಗಿದೆ. ಕೇವಲ 7 ವರ್ಷಗಳಲ್ಲಿ ಬಿದಿರು ಬೆಳೆದು ನಿಂತಿರುತ್ತದೆ. ಚೀನಾ, ಜಪಾನ್ ಮತ್ತು ಸೌತ್ ಅಮೆರಿಕಾದಲ್ಲಿ ಬಿದಿರು ಹೇರಳವಾಗಿ ಸಿಗುತ್ತದೆ. ಬಿದಿರಿನ  ಬಳಕೆ ಮಾಡಿ ಅತ್ಯಂತ ಕಡಿಮೆ ದರದಲ್ಲಿ ಹಾಗೂ ಹೆಚ್ಚು ಬ್ಯಾಟ್‌ ಗಳನ್ನು ತಯಾರಿಸಲು ಸಾಧ್ಯವಾಗಲಿದೆ ಎಂದು ಸ್ವತಃ ಕ್ರಿಕೆಟರ್‌ ಆಗಿ ಥಾಯ್ಲೆಂಡ್‌ನ ಅಂಡರ್‌ 19 ತಂಡದ ಪರ ಆಡಿದ ಅನುಭವ ಹೊಂದಿದ್ದ ಶಾ ಹೇಳಿದ್ದಾರೆ.

ನೂತನ ಬ್ಯಾಂಬೂ ಬ್ಯಾಟ್‌ ತಯಾರಿಕೆಯಲ್ಲಿ ಶಾ ಕೂಡ ಸಹ ಭಾಗೀದಾರರಾಗಿದ್ದು, ಬೆನ್ ಟಿಂಕ್ಲರ್-ಡೇವಿಸ್ ಬ್ಯಾಟ್ ಸಂಶೋಧನೆಯ ಭಾಗವಾಗಿದ್ದಾರೆ. ಈ ಅಧ್ಯಯನದ ಪ್ರಕಾರ. "ಬಿದಿರಿನ ಬ್ಯಾಟ್‌ನಲ್ಲಿರುವ ಸಿಹಿ ತಾಣವು ಆರಂಭಿಕರಿಗಾಗಿ ಯಾರ್ಕರ್‌ನಿಂದ ನಾಲ್ಕು ಬೌಂಡರಿಗಳನ್ನು ಹೊಡೆಯುವುದನ್ನು  ಸುಲಭಗೊಳಿಸುತ್ತದೆ, ಆದರೆ ಇದು ಎಲ್ಲಾ ರೀತಿಯ ಸ್ಟ್ರೋಕ್‌ಗಳಿಗೆ ರೋಮಾಂಚನಕಾರಿಯಾಗಿರುತ್ತದೆ. ವಿಲ್ಲೋ ಬ್ಯಾಟ್‌ ನೀಡುವ ಎಲ್ಲಾ ಸವಲತ್ತನ್ನು ಬ್ಯಾಂಬೂ ಬ್ಯಾಟ್‌ ನೀಡುತ್ತದೆ. ಚೆಂಡನ್ನು ಬಡಿದಾಗ ವಿಲ್ಲೋ ಬ್ಯಾಟ್‌ ರೀತಿಯಲ್ಲೇ ಶಬ್ಧ ಬರುತ್ತದೆ. ಆದರೆ, ಬ್ಯಾಂಬೂ ಬ್ಯಾಟ್‌ ಕೊಂಚ ಭಾರವಿದೆ. ಭಾರ ತಗ್ಗಿಸಲು  ಮತ್ತಷ್ಟು ಸಂಶೋಧನೆ ನಡೆಸಲಾಗುತ್ತಿದೆ ಎಂದು ಶಾ ಹೇಳಿದ್ದಾರೆ.

ವಿಲ್ಲೋ ಬ್ಯಾಟ್ ದರ ದುಬಾರಿ
ಅತ್ಯುತ್ತಮ ಗುಣಮಟ್ಟದ ಇಂಗ್ಲಿಷ್ ವಿಲ್ಲೋ ಬ್ಯಾಟ್‌ನ ಬೆಲೆ 50 ಸಾವಿರ ರೂ.ಗಳಿಂದ 75 ಸಾವಿರ ರೂ.ಗಳ ವರೆಗೆ ಇದೆ. ಟೀಮ್ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಬಳಕೆ ಮಾಡುವ ಬ್ಯಾಟ್‌ನ ಬೆಲೆ 40-70 ಸಾವಿರ ರೂ. ಮೌಲ್ಯದ್ದಾಗಿದೆ.

ಬ್ಯಾಂಬೂ ಬ್ಯಾಟ್‌ ಬಳಕೆ ಬಗ್ಗೆ ಎಂಸಿಸಿಯಲ್ಲಿ ಚರ್ಚೆ
ಈ ಕುತೂಹಲಕಾರಿ ಸಂಶೋಧನೆ ಮೆರಿಲಿಬೋನ್ ಕ್ರಿಕೆಟ್‌ ಕ್ಲಬ್‌ (ಎಂಸಿಸಿ) ಗಮನ ಸೆಳೆದಿದೆ. ಕ್ರಿಕೆಟ್ ಆಟದ ನೀತಿ ನಿಯಮಗಳನ್ನು ತರುವ ಹಾಗೂ ಬದಲಾವಣೆ ಮಾಡುವ ಹಕ್ಕನ್ನು ಹೊಂದಿರುವ ಎಂಸಿಸಿ ತನ್ನ ಮುಂದಿನ ಸಭೆಯಲ್ಲಿ ಬ್ಯಾಂಬೂ ಬ್ಯಾಟ್‌ ಬಳಕೆ ಕುರಿತಾಗಿ ಚರ್ಚೆ ನಡೆಸಲಿದೆ ಎನ್ನಲಾಗಿದೆ. ಸದ್ಯ  ಎಂಸಿಸಿ ನಿಯಮಾನುಸಾರ ಕ್ರಿಕೆಟ್‌ ಬ್ಯಾಟ್‌ ಒಂದೇ ಮರದ ತುಂಡಿನಿಂದ ಮಾಡಿರಬೇಕಾಗುತ್ತದೆ. ಆದರೆ ಬ್ಯಾಂಬೂ ಮರವಲ್ಲ. ಒಂದು ಪ್ರಬೇಧದ ಹುಲ್ಲು. ಹೀಗಾಗಿ ಹಲವು ಬ್ಯಾಂಬೂಗಳನ್ನು ಪದರಗಳ ರೀತಿ ಜೋಡಿಸಿ ಬ್ಯಾಟ್‌ ರೀತಿ ವಿನ್ಯಾಸ ಮಾಡಲಾಗುತ್ತದೆ. ಹೀಗಾಗಿ ಇದರ ಬಳಕೆ  ಕಾನೂನಾತ್ಮಕವಾಗಬೇಕಾದರೆ ಎಂಸಿಸಿ ನಿಯಮಗಳಲ್ಲಿ ಬದಲಾವಣೆ ಆಗಬೇಕಿದೆ. ಈ ಬಗ್ಗೆ ಎಂಸಿಸಿ ಚರ್ಚೆ ನಡೆಸಲಿದ್ದು, ಯಾವ ತೀರ್ಮಾನಕ್ಕೆ ಬರಲಿದೆ ಎಂಬುದು ಕುತೂಹಲ ಕೆರಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com