ಭಾರತ ಕ್ರಿಕೆಟ್ ತಂಡದ ಇಂದಿನ ಸುಸ್ಥಿತಿಗೆ ರಾಹುಲ್ ದ್ರಾವಿಡ್ ಕಾರಣ: ಆಸಿಸ್ ಮಾಜಿ ನಾಯಕ ಗ್ರೇಗ್ ಚಾಪೆಲ್

ಇಂದು ಕ್ರಿಕೆಟ್ ಜಗತ್ತಿನಲ್ಲಿ ಟೀಂ ಇಂಡಿಯಾ ಅನಭಿಶಕ್ತ ದೊರೆಯಾಗಿ ಮೆರೆಯುತ್ತಿದೆ ಎಂದರೆ ಅದಕ್ಕೆ ಕಾರಣ ಮಾಜಿ ನಾಯಕ ರಾಹುಲ್ ದ್ರಾವಿಡ್ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಗ್ರೇಗ್ ಚಾಪೆಲ್ ಹೇಳಿದ್ದಾರೆ.
ಗ್ರೇಗ್ ಚಾಪೆಲ್-ರಾಹುಲ್ ದ್ರಾವಿಡ್
ಗ್ರೇಗ್ ಚಾಪೆಲ್-ರಾಹುಲ್ ದ್ರಾವಿಡ್

ಸಿಡ್ನಿ: ಇಂದು ಕ್ರಿಕೆಟ್ ಜಗತ್ತಿನಲ್ಲಿ ಟೀಂ ಇಂಡಿಯಾ ಅನಭಿಶಕ್ತ ದೊರೆಯಾಗಿ ಮೆರೆಯುತ್ತಿದೆ ಎಂದರೆ ಅದಕ್ಕೆ ಕಾರಣ ಮಾಜಿ ನಾಯಕ ರಾಹುಲ್ ದ್ರಾವಿಡ್ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಗ್ರೇಗ್ ಚಾಪೆಲ್ ಹೇಳಿದ್ದಾರೆ.

ಆಸ್ಟ್ರೇಲಿಯಾದ ಕ್ರಿಕೆಟ್ ವೆಬ್ ಸೈಟ್ ನೊಂದಿಗೆ ಸಂದರ್ಶನದಲ್ಲಿ ಮಾತನಾಡಿದ ಗ್ರೇಗ್ ಚಾಪೆಲ್, 'ಆಸ್ಟ್ರೇಲಿಯಾದಲ್ಲಿ ಪ್ರತಿಭೆಗಳಿಗೆ ಕೊರತೆಯೇ ಇಲ್ಲ ಎಂಬ ಮಾತು ಈಗ ಇಲ್ಲವಾಗಿದೆ. ಆದರೆ, ಭಾರತ ತಂಡ ಈಗ ಪ್ರತಿಭೆಯ ಭಂಡಾರವನ್ನೇ ಹೊಂದಿದೆ. ಇದಕ್ಕೆ ರಾಹುಲ್‌ ದ್ರಾವಿಡ್‌ ಕಾರಣ ಎಂದು ಹೇಳಿದ್ದಾರೆ.

'ಆಸ್ಟ್ರೇಲಿಯಾದಲ್ಲಿನ ದೇಶಿ ಕ್ರಿಕೆಟ್‌ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ಭಾರತ ಮತ್ತು ಇಂಗ್ಲೆಂಡ್‌ ತಂಡಗಳು ಇಂದು ಆಸೀಸ್‌ಗಿಂತಲೂ ಒಂದು ಹೆಜ್ಜೆ ಮುಂದಿವೆ. ಅದರಲ್ಲೂ ಭಾರತ ಇದರ ಹೆಚ್ಚು ಲಾಭ ತೆಗೆದುಕೊಂಡಿದ್ದು, ರಾಹುಲ್‌ ದ್ರಾವಿಡ್‌ ನಮ್ಮ ಕಾರ್ಯತಂತ್ರಗಳನ್ನು ಅರ್ಥಮಾಡಿಕೊಂಡ ಪರಿಣಾಮ  ಭಾರತದಲ್ಲಿ ಕ್ರಿಕೆಟ್‌ ಇಷ್ಟು ಅಭಿವೃದ್ಧಿಯಾಗಿದೆ. ನಾವು ಆಸ್ಟ್ರೇಲಿಯಾದಲ್ಲಿ ಏನನ್ನು ಮಾಡುತ್ತಿದ್ದೇವೋ ಅದನ್ನು ಭಾರತದಲ್ಲಿ ಅಳವಡಿಸಿದರು. ಇದರ ಲಾಭ ಇಂದು ಟೀಮ್ ಇಂಡಿಯಾಗೆ ಸಿಗುತ್ತಿದೆ. ಪ್ರತಿಭೆಗಳನ್ನು ಗುರುತಿಸಿ ಪೋಷಿಸುವಲ್ಲಿ ಆಸ್ಟ್ರೇಲಿಯಾ ಮುಂಚೂಣಿಯಲ್ಲಿ ಇದ್ದ ಸ್ಥಾನವನ್ನು ಇಂದು ಕಳೆದುಕೊಂಡಿದೆ.  ಇಂಗ್ಲೆಂಡ್‌ ಈ ವಿಚಾರದಲ್ಲಿ ನಮಗಿಂತಲೂ ಉತ್ತಮ ಕೆಲಸ ಮಾಡುತ್ತಿದೆ. ಭಾರತ ಎಲ್ಲರಿಗಿಂತಲೂ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಚಾಪೆಲ್ ಹೇಳಿದ್ದಾರೆ.

ಅಂತೆಯೇ, 'ಇತಿಹಾಸವನ್ನು ಗಮನಿಸಿದರೆ ಕೇವಲ ಆಸ್ಟ್ರೇಲಿಯಾದಲ್ಲಿ ಮಾತ್ರ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಪೋಷಿಸುವ ಕೆಲಸ ಮಾಡಲಾಗುತ್ತಿತ್ತು. ಆದರೆ, ಕಳೆದ ಕೆಲ ವರ್ಷಗಳಲ್ಲಿ ಎಲ್ಲವೂ ಬದಲಾಗಿದೆ. ಇಂದು ಆಸ್ಟ್ರೇಲಿಯಾದಲ್ಲಿ ಪ್ರತಿಭಾನ್ವಿತ ಆಟಗಾರರು ಕಳೆದುಹೋಗುತ್ತಿದ್ದಾರೆ. ಆಟಗಾರರನ್ನು ಈ  ರೀತಿ ಕಳೆದುಕೊಳ್ಳುವುದು ಸರಿಯಲ್ಲ

ಗ್ರೇಗ್‌ ಚಾಪೆಲ್‌ 2005ರಿಂದ 2007ರವರೆಗೆ ಭಾರತ ತಂಡದ ಕೋಚ್‌ ಆಗಿ ಕೆಲಸ ಮಾಡಿದ್ದರು. 2007ರಲ್ಲಿ ದ್ರಾವಿಡ್‌ ಭಾರತ ತಂಡದ ನಾಯಕರಾಗಿದ್ದಾಗ ನಡೆದ ಒಡಿಐ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ ಲೀಗ್ ಹಂತದಲ್ಲೇ ಸ್ಪರ್ಧೆಯಿಂದ ಹೊರಬಿದ್ದಿತ್ತು. ಬಳಿಕ ಚಾಪೆಲ್ ತಲೆದಂಡವಾಗಿ, ದ್ರಾವಿಡ್‌  ನಾಯಕತ್ವದಿಂದ ಕೆಳಗಿಳಿದಿದ್ದರು ಎಂದು 72 ವರ್ಷದ ಮಾಜಿ ಕ್ರಿಕೆಟಿಗ ಹೇಳಿದ್ದಾರೆ.

ಇನ್ನು ರಾಹುಲ್‌ ದ್ರಾವಿಡ್‌, ಭಾರತ 'ಎ' ತಂಡದ ಕೋಚ್‌ ಆಗಿ ಮತ್ತು ಭಾರತ ಕಿರಿಯರ ತಂಡದ ಕೋಚ್‌ ಆಗಿ ಭವಿಷ್ಯದ ಆಟಗಾರರನ್ನು ಕಟ್ಟುವ ಕೆಲಸವನ್ನು ಮಾಡಿದ್ದಾರೆ. ಇಂದು ಭಾರತ ತಂಡದಲ್ಲಿ ಮಿಂಚುತ್ತಿರುವ ಪ್ರತಿಯೊಬ್ಬ ಯುವ ಆಟಗಾರನೂ ರಾಹುಲ್‌ ದ್ರಾವಿಡ್‌ ಗರಡಿಯಲ್ಲಿ ಪಳಗಿದವರು ಎಂಬುದು  ವಿಶೇಷ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥರಾಗಿ ಕೆಲಸ ಮಾಡುತ್ತಿರುವ ದ್ರಾವಿಡ್‌, ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳುವ ಟೀಮ್ ಇಂಡಿಯಾ ಆಟಗಾರರಿಗೆ ಅಗತ್ಯದ ಮಾರ್ಗದರ್ಶನ ನೀಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com