8 ತಿಂಗಳಿಂದ ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ ವೇತನ ಪಾವತಿ ಇಲ್ಲ ಎಂಬ ವರದಿಗಳ ಅಲ್ಲಗಳೆದ ಬಿಸಿಸಿಐ!

ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ 8 ತಿಂಗಳಿಂದ ವೇತನ ಪಾವತಿ ಮಾಡಿಲ್ಲ ಎಂಬ ವರದಿಗಳನ್ನು ಬಿಸಿಸಿಐ ಅಲ್ಲಗಳೆದಿದ್ದು, ಒಪ್ಪಂದದ ಪ್ರಕಾರ ಪ್ರತೀಯೊಬ್ಬ ಆಟಗಾರ್ತಿಯರಿಗೂ ತಿಂಗಳ ವೇತನ ಪಾವತಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಬಿಸಿಸಿಐ
ಬಿಸಿಸಿಐ

ನವದೆಹಲಿ: ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ 8 ತಿಂಗಳಿಂದ ವೇತನ ಪಾವತಿ ಮಾಡಿಲ್ಲ ಎಂಬ ವರದಿಗಳನ್ನು ಬಿಸಿಸಿಐ ಅಲ್ಲಗಳೆದಿದ್ದು, ಒಪ್ಪಂದದ ಪ್ರಕಾರ ಪ್ರತೀಯೊಬ್ಬ ಆಟಗಾರ್ತಿಯರಿಗೂ ತಿಂಗಳ ವೇತನ ಪಾವತಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಭಾರತ ತಂಡದ ವೇದ ಕೃಷ್ಣಮೂರ್ತಿ, ಏಕ್ತಾ ಬಿಶ್ತ್, ಅನುಜಾ ಪಾಟೀಲ್ ಮತ್ತು ಡಿ. ಹೆಮಲತಾ ಆಟಗಾರ್ತಿಯರಿಗೆ 8 ತಿಂಗಳಿಂದ ವೇತನ ಪಾವತಿಯಾಗಿಲ್ಲ ಎಂಬ ಆಂಗ್ಲ ಪತ್ರಿಕೆಯೊಂದರ ವರದಿ ಕುರಿತು ಸ್ಪಷ್ಟನೆ ನೀಡಿರುವ ಬಿಸಿಸಿಐ ಅಂತಹ ಸುದ್ದಿಗಳಲ್ಲಿ ಹುರುಳಿಲ್ಲ. ಒಪ್ಪಂದದ ಪ್ರಕಾರ ಪ್ರತೀಯೊಬ್ಬ  ಆಟಗಾರ್ತಿಯರಿಗೂ ತಿಂಗಳ ವೇತನ ಪಾವತಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಕಳೆದ ಮೇ19ರಂದು ಬಿಡುಗಡೆ ಮಾಡಲಾಗಿದ್ದ ಆಟಗಾರ್ತಿಯರ ವಾರ್ಷಿಕ ಒಪ್ಪಂದ ಅನ್ವಯ ಉದಯೋನ್ಮಖ ಆಟಗಾರ್ತಿ ರಿಚಾ ಘೋಶ್ ಒಪ್ಪಂದಕ್ಕೆ ಸೇರ್ಪಡೆಯಾಗಿದ್ದರು. ಅಂತೆಯೇ ಶಿಫಾಲಿ ವರ್ಮಾರನ್ನು ಸಿ ಗ್ರೇಡ್ ನಿಂದ ಬಿ ಗ್ರೇಡ್ ಸೇರ್ಪಡೆ ಮಾಡಲಾಗಿತ್ತು. ಆದರೆ ಈ ವಾರ್ಷಿಕ ಒಪ್ಪಂದದಲ್ಲಿ ವೇದ  ಕೃಷ್ಣಮೂರ್ತಿ, ಏಕ್ತಾ ಬಿಶ್ತ್, ಅನುಜಾ ಪಾಟೀಲ್ ಮತ್ತು ಡಿ. ಹೆಮಲತಾ ಅವರ ಹೆಸರುಗಳು ನಾಪತ್ತೆಯಾಗಿದ್ದವು. ಅಲ್ಲದೆ ಈ ನಾಲ್ಕು ಆಟಗಾರರಿಗೆ ಕಳೆದ 8 ತಿಂಗಳಿಂದ ಬಿಸಿಸಿಐ ವೇತನ ಪಾವತಿ ಮಾಡಿಲ್ಲ ಎಂದು ವರದಿಯಲ್ಲಿ ಆರೋಪಿಸಲಾಗಿದೆ.

ಆದರೆ ಈ ಆರೋಪಗಳನ್ನು ಬಿಸಿಸಿಐ ಅಲ್ಲಗಳೆದಿದ್ದು, ಇಂತಹ ಊಹಾತ್ಮಕ ವರದಿಗಳಿಗೆ ಬಿಸಿಸಿಐ ಪ್ರಾಮುಖ್ಯತೆ ನೀಡುವುದಿಲ್ಲ. ಅಲ್ಲದೆ ಈ ವರದಿ ಸುಳ್ಳಾಗಿದ್ದು, ವಾರ್ಷಿಕ ಒಪ್ಪಂದದ ಅನ್ವಯ ಪ್ರತೀಯೊಬ್ಬ ಆಟಗಾರ್ತಿಯರಿಗೂ ವೇತನ ಪಾವತಿ ಮಾಡಲಾಗುತ್ತಿದೆ. ಕಳೆದ 2020ರ ವರ್ಷದ ಒಪ್ಪಂದವು  ಸೆಪ್ಟೆಂಬರ್‌ನಲ್ಲಿ ಕೊನೆಗೊಂಡಿದೆ. ಆ ಒಪ್ಪಂದಕ್ಕೆ ಸಂಬಂಧಿಸಿದಂತೆ ಎಲ್ಲ ಪಾವತಿಗಳನ್ನು ಮಾಡಲಾಗಿದೆ ಎಂದು ಹೇಳಿದರು.

ವಿಶ್ವಕಪ್ ಪ್ರಶಸ್ತಿ ಮೊತ್ತವನ್ನೂ ನೀಡಲಾಗಿದೆ
ಅಂತೆಯೇ 2020 ಟಿ 20 ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ರನ್ನರ್ಸ್ ಅಪ್ ಆಗಿದ್ದ ಭಾರತ ತಂಡದ ಆಟಗಾರ್ತಿಯರಿಗೆ ಪ್ರಶಸ್ತಿ ಮೊತ್ತವನ್ನೂ ನೀಡಲಾಗಿಲ್ಲ ಎಂಬ ಆರೋಪನ್ನೂ ಬಿಸಿಸಿಐ ಅಲ್ಲ ಗಳೆದಿದ್ದು, ಆಟಗಾರ್ತಿಯರ ಹಣಕಾಸಿನ ಸಮಸ್ಯೆಗಳನ್ನು ಬಿಸಿಸಿಐ ಹಣಕಾಸಿನ ಇಲಾಖೆ ನಿವಾರಿಸುತ್ತದೆ ಎಂದು  ಹೇಳಿದೆ.

'ಇವು ಕಷ್ಟದ ಸಮಯ. ನಾವು ಬಹಳ ಕಷ್ಟಕರವಾದ ಪರಿಸ್ಥಿತಿಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಆದರೆ ಸಮಸ್ಯೆಗಳಿಗೆ ನಾನು ಸಮರ್ಥನೆ ಮಾಡಿಕೊಳ್ಳುತ್ತಿದ್ದೇನೆ ಎಂದು ಅರ್ಥವಲ್ಲ. ಬಹುಶಃ ತಪ್ಪುಗಳಾಗಿರಬಹುದು. ಆದರೆ ಭವಿಷ್ಯದಲ್ಲಿ ಯಾವುದೇ ದೋಷಗಳಿರುವುದಿಲ್ಲ ಎಂದು ವಿಶ್ವಾಸ ನೀಡುತ್ತೇನೆ. ವ್ಯವಸ್ಥೆಯನ್ನು  ಮತ್ತಷ್ಟು ಬಿಗಿಗೊಳಿಸುವುದು ನಮ್ಮ ಪ್ರಯತ್ನವಾಗಿದೆ, ಅದನ್ನು ನಾವು ಈಗಲೂ ಮಾಡಿದ್ದೇವೆ. ಆಟಗಾರರು ಎತ್ತುವ ಎಲ್ಲ ಸಮಸ್ಯೆಗಳನ್ನು ಹಣಕಾಸು ಇಲಾಖೆ ಶೀಘ್ರವಾಗಿ ಪರಿಹರಿಸುತ್ತದೆ. ಒಪ್ಪಂದವನ್ನು ಕಳೆದುಕೊಳ್ಳುವ ಸಂಕಟವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಇದು ಎಲ್ಲರಿಗೂ ಕಷ್ಟಕರ ಸಮಯವಾದ್ದರಿಂದ ಈ ಸಂಕಷ್ಟದಿಂದ ನಾವು ಶೀಘ್ರ ಹೊರಬರಲಿದ್ದೇವೆ ಎಂದು ಅವರು ಹೇಳಿದರು.

'ಮಹಿಳಾ ಕ್ರಿಕೆಟ್ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಬಿಸಿಸಿಐ ಮುಂದಾಗಿದ್ದು, ಹಗಲು ರಾತ್ರಿ ಟೆಸ್ಟ್ ಆಯೋಜನೆ, ಮಹಿಳಾ ಕ್ರಿಕೆಟ್ ಟೂರ್ನಿಗಳ ಹೆಚ್ಚಳ ದಂತಹ ಕ್ರಮಗಳ ನಡುವೆಯೂ ಇಂತಹ ಟೀಕೆಗಳು ನೋವುಂಟುಮಾಡುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮಲ್ಲಿ ಯಾವುದೇ ನಕಾರಾತ್ಮಕತೆ ಇಲ್ಲ. ಕ್ರಿಕೆಟ್ ಅಭಿವೃದ್ಧಿ ನಿಟ್ಟಿನಲ್ಲಿ ಯಾರೇ ಯಾವುದೇ ರೀತಿಯ ಸಲಹೆ ಅಥವಾ ಟೀಕೆ ಮಾಡಿದರೂ ಸ್ವಾಗತಾರ್ಹ ಎಂದು ಹೇಳಿದರು.  

ಅಂತೆಯೇ ಈ ಸಮಸ್ಯೆಗಳಿ ಕಾರಣರಾದ ಜನರಲ್ ಮ್ಯಾನೇಜರ್ ಇನ್ನು ಮುಂದೆ ನಮ್ಮೊಂದಿಗೆ ಕೆಲಸ ಮಾಡುವುದಿಲ್ಲ. ಬಹುಶಃ ಅವರು ಸಮಸ್ಯೆಗಳನ್ನು ಲಘುವಾಗಿ ಪರಿಗಣಿಸಿದ್ದರು. ಹೀಗಾಗಿ ಕಳೆದ 8 ತಿಂಗಳುಗಳಿಂದ ಸಮಸ್ಯೆಯಾಗಿರಬಹುದು. ಆದರೆ ಸಾಂಸ್ಥಿಕ ದೃಷ್ಟಿಕೋನದಿಂದ ಇಂತಹ ಸಮಸ್ಯೆಗಳು ಇನ್ನು ಮುಂದೆ ಇರಲಾರದು ಎಂಬ ವಿಶ್ವಾಸ ತಮಗಿದೆ ಎಂದು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com