ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್: ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೆಟ್ರೋ ಜೆರ್ಸಿ?

ತೀವ್ರ ಕುತೂಹಲ ಕೆರಳಿಸಿರುವ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಇತ್ತ ಬಿಸಿಸಿಐ ಆಟಗಾರರಿಗೆ ನೂತನ ಜೆರ್ಸಿ ನೀಡುವ ಮೂಲಕ ಮತ್ತಷ್ಟು ಕುತೂಹಲ ಕೆರಳಿಸಿದೆ.
ರೆಟ್ರೋ ಜೆರ್ಸಿ ತೊಟ್ಟ ಜಡೇಜಾ
ರೆಟ್ರೋ ಜೆರ್ಸಿ ತೊಟ್ಟ ಜಡೇಜಾ

ನವದೆಹಲಿ: ತೀವ್ರ ಕುತೂಹಲ ಕೆರಳಿಸಿರುವ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಇತ್ತ ಬಿಸಿಸಿಐ ಆಟಗಾರರಿಗೆ ನೂತನ ಜೆರ್ಸಿ ನೀಡುವ ಮೂಲಕ ಮತ್ತಷ್ಟು ಕುತೂಹಲ ಕೆರಳಿಸಿದೆ.

ಹೌದು.. ಭಾರತದ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಶನಿವಾರ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ ಧರಿಸಲಿರುವ ಜಂಪರ್‌ ಅನ್ನು ಧರಿಸಿ ಫೋಟೋಗೆ ಪೋಸ್ ನೀಡಿದ್ದಾರೆ. 

ಜೂನ್ 18ರಿಂದ 22ರ ವರೆಗೆ ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿ ನಡೆಯಲಿರುವ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ಗಾಗಿ ಭಾರತ ತಂಡ ಮತ್ತು ನ್ಯೂಜಿಲೆಂಡ್ ಸಿದ್ಧವಾಗಿದೆ. ಟೆಸ್ಟ್ ಚಾಂಪಿಯನ್‌ಶಿಪ್‌ ಚೊಚ್ಚಲ ಆವೃತ್ತಿಯ ಫೈನಲ್ ಇದಾಗಿದ್ದು, ಇದೇ ಕಾರಣಕ್ಕೆ ಈ ವಿಶೇಷ ಪಂದ್ಯವನ್ನು ಸ್ಮರಣೀಯವಾಗಿರಿಸಲು  ಟೀಮ್ ಇಂಡಿಯಾ ವಿಶೇಷ ಜಂಪರ್‌ನೊಂದಿಗೆ ಮೈದಾನಕ್ಕಿಳಿಯಲಿದೆ. ಇದೊಂದು ರೆಟ್ರೋ ಶೈಲಿಯ ಜಂಪರ್ ಆಗಿದ್ದು, ಈ ಹಿಂದೆ ಭಾರತ ತಂಡ ಇಂಥದ್ದೇ ಜಂಪರ್‌ ಅನ್ನು ಹಿಂದೆ ಧರಿಸುತ್ತಿತ್ತು. ಇದು 90ರ ದಶಕದಲ್ಲಿ ಭಾರತೀಯ ತಂಡ ಧರಿಸುತ್ತಿದ್ದ ಜಂಪರ್‌ನ ವಿನ್ಯಾಸದ ರೀತಿಯಲ್ಲೇ ಇದೆ. 

ಇದೀಗ ಇದೇ ಜಂಪರ್ ಅನ್ನು ರವೀಂದ್ರ ಜಡೇಜಾ ಧರಿಸಿ ಫೋಟೋ ತೆಗೆಸಿಕೊಂಡಿದ್ದು ಆ ಫೋಟೋವನ್ನು ಶನಿವಾರ ಟ್ವಿಟರ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಲ್ಲದೆ '90s ರಿವೈಂಡ್ (ನೆನಪು)' ಎಂದು ಬರೆದುಕೊಂಡಿದ್ದಾರೆ. ಈ ಸ್ಲೀವ್‌ಲೆಸ್ ಸ್ವೆಟರ್‌ನಲ್ಲಿ ಪ್ರಾಯೋಜಕರ ಲೋಗೋ ಕೂಡ ಇಲ್ಲ. ಯಾಕೆಂದರೆ ವರ್ಲ್ಡ್  ಟೆಸ್ಟ್ ಚಾಂಪಿಯನ್‌ಶಿಪ್‌ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಡೆಸುತ್ತಿರುವ ಪಂದ್ಯವಾಗಿರುವುದರಿಂದ ತಂಡಗಳ ಜಂಪರ್‌ನಲ್ಲಿ ಆಯಾ ತಂಡಗಳ ಪ್ರಾಯೋಜಕರ ಲೋಗೋ ಇರುವುದಿಲ್ಲ. ಜಂಪರ್‌ನ ಎಡ ಎದೆಯ ಭಾಗದಲ್ಲಿ ಬಿಸಿಸಿಐ ಲೋಗೋ ಮಾತ್ರ ಇರಲಿದೆ. ಇನ್ನೊಂದು ಬದಿಯಲ್ಲಿ ಐಸಿಸಿ  WTC ಫೈನಲ್ ಎಂಬ ಲೋಗೋ ಇದೆ. 

ಅಂದಹಾಗೆ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ ಸರಣಿಗಾಗಿ ಭಾರತೀಯ ತಂಡ ಜೂನ್ 2ರಂದು ಭಾರತದಿಂದ ತೆರಳಲಿದೆ. ಫೈನಲ್ ಪಂದ್ಯಕ್ಕೂ ಮುನ್ನ ಭಾರತ ತಂಡ ಕ್ವಾರಂಟೈನ್ ನಲ್ಲಿರಲಿದ್ದು, ಕ್ವಾರಂಟೈನ್ ನಿಂದ ಹೊರಬಂದ ಬಳಿಕ ಜಿಮ್ ನಲ್ಲಿ ಬೆವರು ಹರಿಸಿ  ಆಟಗಾರರುಫಿಟ್ ಆಗಲಿದ್ದಾರೆ. ಇದೇ ವಿಚಾರವಾಗಿ ಮಾಹಿತಿ ನೀಡಿರುವ ಬಿಸಿಸಿಐ, ಬ್ರಿಟನ್ ಆರೋಗ್ಯ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕ್ರಿಕೆಟಿಗರು ತಮ್ಮ ಎರಡನೇ ಡೋಸ್ ಕೋವಿಡ್-19 ಲಸಿಕೆಗಳನ್ನು ಇಂಗ್ಲೆಂಡ್‌ನಲ್ಲಿ ಪಡೆಯುತ್ತಾರೆ. ಈಗಾಗಲೇ ತಂಡದ 18 ಆಟಗಾರರಿಗೆ ಭಾರತದಲ್ಲಿ ಮೊದಲ  ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. ನಿಯಮಗಳ ಪ್ರಕಾರ ಆಟಗಾರರು ಎರಡನೇ ಡೋಸ್ ಪಡೆಯಲು ಅರ್ಹರಾದ ನಂತರ ಬ್ರಿಟನ್ ಆರೋಗ್ಯ ಇಲಾಖೆಯಿಂದ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. 

ಈ ಹಿಂದೆ ಆಟಗಾರರು ಇಂಗ್ಲೆಂಡ್ ಗೆ ತೆರಳುವ ಮುನ್ನ ಮುಂಬೈ ನಲ್ಲಿ 10 ದಿನಗಳ ಕ್ವಾರಂಟೈನ್ ನಲ್ಲಿದ್ದರು. ಅಲ್ಲಿ ಎಲ್ಲ ಆಟಗಾರರು ಮತ್ತು ಸಿಬ್ಬಂದಿಗಳಿಗೆ ಆರ್ ಟಿ ಪಿಸಿಆರ್ ಪರೀಕ್ಷೆ ನಡೆಸಿ ನೆಗೆಟಿವ್ ಬಂದ ಬಳಿಕವೇ ಇಂಗ್ಲೆಂಡ್ ಗೆ ವಿಮಾನದ ಮೂಲಕ ಕಳುಹಿಸಲು ಸಿದ್ಧತೆ ನಡೆಸಲಾಗಿದೆ. ಇಂಗ್ಲೆಂಡ್ ಗೆ  ತೆರಳಿದ ಬಳಿಕವೂ ಆಟಗಾರರು ಕ್ವಾರಂಟೈನ್ ಗೆ ಒಳಗಾಗಲಿದ್ದಾರೆ. ಈ 10 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದ ಬಳಿಕ ಜೂನ್ 18 ರಿಂದ ಸೌತಾಂಪ್ಟನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಡಬ್ಲ್ಯುಟಿಸಿ ಫೈನಲ್‌ಗೆ ತರಬೇತಿ ನೀಡಲು ಮೈದಾನವನ್ನು ತೆಗೆದುಕೊಳ್ಳುವ ಮೊದಲು ಅವರು ಮತ್ತೆ ಮೊದಲು ಕಠಿಣ  ಸಂಪರ್ಕತಡೆಗೆ ಒಳಗಾಗಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com