ಜೋಶ್ ಇರೋವರೆಗೂ ದೇಶಕ್ಕಾಗಿ ಆಡುವೆ: ನಾಯಕತ್ವದ ಕೊನೆಯ ಪಂದ್ಯ ಗೆಲುವಿನ ಬಳಿಕ ವಿರಾಟ್ ಕೊಹ್ಲಿ ಮಾತು
ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಇಷ್ಟು ಬೇಗ ಹೊರಗೆ ಬೀಳುತ್ತೆ ಯಾರೂ ಕೂಡ ಊಹೆ ಮಾಡಿರಲಿಲ್ಲ. ತಂಡದ ಪ್ರದರ್ಶನ ಹಾಗೂ ಇತರ ತಂಡಗಳ ಸಾಮರ್ಥ್ಯ ಭಾರತವನ್ನು ವಿಶ್ವಕಪ್ ನ ಹೊಡಿಬಡಿ ಟೂರ್ನಿಯಿಂದ ಹೊರದಬ್ಬಿವೆ.
Published: 09th November 2021 03:33 PM | Last Updated: 09th November 2021 03:33 PM | A+A A-

ಕೊಹ್ಲಿ
ದುಬೈ: ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಇಷ್ಟು ಬೇಗ ಹೊರಗೆ ಬೀಳುತ್ತೆ ಯಾರೂ ಕೂಡ ಊಹೆ ಮಾಡಿರಲಿಲ್ಲ. ತಂಡದ ಪ್ರದರ್ಶನ ಹಾಗೂ ಇತರ ತಂಡಗಳ ಸಾಮರ್ಥ್ಯ ಭಾರತವನ್ನು ವಿಶ್ವಕಪ್ ನ ಹೊಡಿಬಡಿ ಟೂರ್ನಿಯಿಂದ ಹೊರದಬ್ಬಿವೆ.
ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ನಾಯಕನಾಗಿ ಇನ್ಮುಂದೆ ಕಾಣಿಸಿಕೊಳ್ಳುವುದಿಲ್ಲ. ನಮೀಬಿಯಾ ವಿರುದ್ಧ ನಡೆದ ಪಂದ್ಯ ವಿರಾಟ್ ಕೊಹ್ಲಿಗೆ ಕೊನೆ ಪಂದ್ಯವಾಗಿತ್ತು. ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿ, ನಾಯಕನಾಗಿ ತಮ್ಮ ಜವಾಬ್ದಾರಿ ಹಾಗೂ ತಂಡದ ಪ್ರದರ್ಶನದ ಕುರಿತು ಮಾತಾಡಿದರು.
ಟಿ-20 ನಾಯಕತ್ವ ತ್ಯಜಿಸಿದ ನಂತರ ನಿಮ್ಗೆ ಏನು ಅನ್ನಿಸುತ್ತಿದೆ?
ವಿರಾಟ್ ಕೊಹ್ಲಿ: ಈ ಕ್ಷಣ ನನಗೆ ಹೆಮ್ಮೆ ತರುವಂತೆ ಮಾಡಿದೆ. ಮನಸ್ಸಿಗೆ ಸಮಾಧಾನ ಸಹ ಆಗಿದೆ. ಒತ್ತಡದಲ್ಲಿ ಕಾರ್ಯ ನಿರ್ವಹಿಸಲು ಅತ್ಯುತ್ತಮ ಸಮಯ ಇದಾಗಿತ್ತು. ಇದನ್ನು ಕಳೆದ ಆರೇಳು ವರ್ಷಗಳಿಂದ ನಡೆಸಿಕೊಂಡು ಬಂದಿದ್ದೇನೆ. ಒಂದು ತಂಡವಾಗಿ ಉತ್ತಮ ಆಟ ಪ್ರದರ್ಶಿಸಿದ್ದೇವೆ. ಆದರೆ, ಈ ವಿಶ್ವಕಪ್ ನಲ್ಲಿ ಅಂದುಕೊಂಡಂತೆ ನಡೆಯಲಿಲ್ಲ. ಮೊದಲೆರಡು ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ್ದರೆ ಫಲಿತಾಂಶ ವಿಭಿನ್ನವಾಗಿರುತ್ತಿತ್ತು. ಆದರೆ ಬಾಕಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಉತ್ತಮ ರಿಸಲ್ಟ್ ನೀಡಿದ್ದೇವೆ ಅಂತಾ ವಿರಾಟ್ ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾಯಕನಂತೆ ಈಗಲೂ ಮೈದಾನದಲ್ಲಿ ಕಾಣಿಸಿಕೊಳ್ಳುತ್ತೀರಾ?
ವಿರಾಟ್ ಕೊಹ್ಲಿ : ನಾನು ಯಾವುದೇ ಕಾರಣಕ್ಕೂ ಬದಲಾಗುವವನಲ್ಲ. ಒಂದು ವೇಳೆ ನನ್ನಲ್ಲಿನ ಜೋಶ್ ಕಡಿಮೆಯಾಗಿದೆ ಅಂತಾ ನನಗೆ ಅನ್ನಿಸಿದರೆ ಸಂಪೂರ್ಣ ಕ್ರಿಕೆಟ್ ಗೆ ವಿದಾಯ ಹೇಳುತ್ತೇನೆ. ಭಾರತ ತಂಡದ ನಾಯಕತ್ವದ ಜವಾಬ್ದಾರಿ ಇಲ್ಲದಿದ್ದರೂ ಸಹ ನಾನು ಹುರುಪು-ಹುಮ್ಮಸ್ಸಿನಿಂದಲೇ ದೇಶಕ್ಕಾಗಿ ಆಡುತ್ತೇನೆ.
ಕೊನೆ ಪಂದ್ಯದಲ್ಲಿ ನೀವು ಏಕೆ ಬ್ಯಾಟಿಂಗ್ ಮಾಡಲಿಲ್ಲ?
ವಿರಾಟ್ ಕೊಹ್ಲಿ : ಉತ್ಸಾಹಿ ಹಾಗೂ ಯುವ ಆಟಗಾರ ಸೂರ್ಯಕುಮಾರ್ ಯಾದವ್ ಗೆ ಈ ಟೂರ್ನಿಯಲ್ಲಿ ಬ್ಯಾಟಿಂಗ್ ಆಡಲು ಹೆಚ್ಚು ಅವಕಾಶ ಸಿಗಲಿಲ್ಲ. ಹೀಗಾಗಿ, ಯಾವುದೇ ಒಬ್ಬ ಆಟಗಾರ ಸಹ ಅತ್ಯುತ್ತಮ ಪ್ರದರ್ಶನದೊಂದಿಗೆ ಪಂದ್ಯ ಪೂರ್ಣಗೊಳಿಸಬೇಕೆಂದು ಬಯಸುತ್ತಾನೆ. ಹೀಗಾಗಿ ಸೂರ್ಯ ಕುಮಾರ್ ಗೆ ಅವಕಾಶ ನೀಡುವುದು ಉತ್ತಮ ಅಂತಾ ನನಗೆ ಅನ್ನಿಸಿತು. ಈ ಕಾರಣದಿಂದ ಕೊನೆಯ ಪಂದ್ಯದಲ್ಲಿ ನಾನು ಕ್ರೀಜ್ ಗೆ ಇಳಿಯಲಿಲ್ಲ ಅಂತಾ ವಿರಾಟ್ ಕೊಹ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.
ಟಿ20 ಫ್ಲ್ಯಾಟ್ ಫಾರ್ಮ್ ನ ಭಾರತೀಯ ತಂಡದ ಕ್ಯಾಪ್ಟನ್ ಆಗಿ ವಿರಾಟ್ ಕೊಹ್ಲಿ 50 ಪಂದ್ಯಗಳನ್ನು ಆಡಿದ್ದಾರೆ. ಈ ವಿಶ್ವಕಪ್ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ, ನನ್ನ ಪಾಲಿಗೆ ಈ ಟೂರ್ನಿ ಕೊನೆ ಟಿ-20 ವಿಶ್ವಕಪ್ ಅಂತಾ ಘೋಷಣೆ ಮಾಡಿದ್ದರು. ವಿರಾಟ್ ಕೊಹ್ಲಿ ನಾಯಕತ್ವಕ್ಕೆ ವಿದಾಯ ಹೇಳಿದ ನಂತರ ರೋಹಿತ್ ಶರ್ಮಾ ಭಾರತ ಟಿ20 ತಂಡದ ನಾಯಕರಾಗುವ ಸಾಧ್ಯತೆ ಇದೆ.