'ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್ಸ್' ಅಭಿಯಾನ: ಮೈದಾನದಲ್ಲಿ ಕೊನೆಗೂ ಮಂಡಿಯೂರಿದ ಕ್ವಿಂಟನ್ ಡಿಕಾಕ್

ಕಪ್ಪು ವರ್ಣೀಯರ ಕುರಿತ ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್ಸ್ ವಿಚಾರವಾಗಿ ತಮ್ಮದೇ ತಂಡದ ಆಡಳಿತ ಮಂಡಳಿಯ ತೀವ್ರ ವಿರೋಧ ಎದುರಿಸಿದ್ದ ದಕ್ಷಿಣ ಆಫ್ರಿಕಾ ಆಟಗಾರ ಕ್ವಿಂಟನ್ ಡಿ ಕಾಕ್ ಕೊನೆಗೂ ಮಂಡಿಯೂರಿದ್ದಾರೆ.
ಮಂಡಿಯೂರಿದ ಕ್ವಿಂಟನ್ ಡಿ ಕಾಕ್
ಮಂಡಿಯೂರಿದ ಕ್ವಿಂಟನ್ ಡಿ ಕಾಕ್

ಶಾರ್ಜಾ: ಕಪ್ಪು ವರ್ಣೀಯರ ಕುರಿತ ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್ಸ್ ವಿಚಾರವಾಗಿ ತಮ್ಮದೇ ತಂಡದ ಆಡಳಿತ ಮಂಡಳಿಯ ತೀವ್ರ ವಿರೋಧ ಎದುರಿಸಿದ್ದ ದಕ್ಷಿಣ ಆಫ್ರಿಕಾ ಆಟಗಾರ ಕ್ವಿಂಟನ್ ಡಿ ಕಾಕ್ ಕೊನೆಗೂ ಮಂಡಿಯೂರಿದ್ದಾರೆ.

ಶನಿವಾರ ಶಾರ್ಜಾದಲ್ಲಿ ನಡೆದ ಶ್ರೀಲಂಕಾ ವಿರುದ್ಧ ಟಿ20 ವಿಶ್ವಕಪ್‌ನ ಸೂಪರ್ 12 ಪಂದ್ಯಕ್ಕಾಗಿ ದಕ್ಷಿಣ ಆಫ್ರಿಕಾ ಪರ ಕಣಕ್ಕಿಳಿದಿದ್ದ ಕ್ವಿಂಟನ್ ಡಿ ಕಾಕ್ ಬ್ಯಾಟಿಂಗ್ ವೇಳೆ 'ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಚಳುವಳಿ'ಯನ್ನು ಬೆಂಬಲಿಸಿ ಮಂಡಿಯೂರಿ ಕುಳಿತರು. ಆ ಮೂಲಕ ತಮ್ಮ ವಿರುದ್ಧ ಎದ್ದಿದ್ದ ಎಲ್ಲ ವಿವಾದಗಳಿಗೂ ಡಿ ಕಾಕ್ ತೆರೆ ಎಳಿದಿದ್ದಾರೆ.

ಈ ಹಿಂದೆ ಟಿ20 ಪಂದ್ಯಾವಳಿಯ ಪ್ರತಿ ಪಂದ್ಯಕ್ಕೂ ಮೊದಲು ಎಲ್ಲಾ ಆಟಗಾರರು ಮೊಣಕಾಲು ಊರಿ ಕುಳಿತುಕೊಳ್ಳುವ ಮೂಲಕ ಕಪ್ಪು ವರ್ಣೀಯರಿಗೆ ಗೌರವ ಸಲ್ಲಿಸಬೇಕು ಎಂದು ಎಂದು ಕ್ರಿಕೆಟ್ ಸೌತ್ ಆಫ್ರಿಕಾ (CSA) ಹಠಾತ್ ನಿರ್ದೇಶನ ನೀಡಿತ್ತು. ಎಲ್ಲ ಆಟಗಾರರೂ ಇದಕ್ಕೆ ಸಮ್ಮತಿಸಿದ್ದರಾದರೂ, ವೆಸ್ಟ್ ಇಂಡೀಸ್ ವಿರುದ್ಧದ ದಕ್ಷಿಣ ಆಫ್ರಿಕಾದ ಪಂದ್ಯದ ವೇಳೆ ಡಿ ಕಾಕ್ ಮಂಡಿಯೂರದೇ ವಿವಾದಕ್ಕೆ ಗ್ರಾಸವಾಗಿದ್ದರು. ಡಿ ಕಾಕ್ ನಡೆ ಆಫ್ರಿಕಾದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. 

ವಿವಾದದ ಬೆನ್ನಲ್ಲೇ ಸ್ಪಷ್ಟನೆ
ಇನ್ನು ಇದು ವಿವಾದವಾಗಿ ವ್ಯಾಪಕ ಆಕ್ರೋಶಕ್ಕೆ ತುತ್ತಾದ ಬೆನ್ನಲ್ಲೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಡಿ ಕಾಕ್, 'ನಿಮ್ಮಲ್ಲಿ ಬೇಸರ, ಗೊಂದಲ ಹಾಗೂ ಕೋಪ ಮೂಡುವಂತೆ ಮಾಡಿದ್ದಕ್ಕೆ ನಾನು ಅಂತರಾಳದಿಂದ ಕ್ಷಮೆಯಾಚಿಸುತ್ತೇನೆ. ಈವರೆಗೂ ಈ ಪ್ರಮುಖ ವಿಚಾರದ ಕುರಿತು ನಾನು ಮೌನ ವಹಿಸಿದ್ದೆ. ಆದರೆ, ಒಂದಿಷ್ಟಾದರೂ ನಾನು ನಿಮಗೆ ವಿವರಿಸಬೇಕು ಎಂದೆನಿಸಿದೆ. ವಿಶ್ವಕಪ್‌ ಟೂರ್ನಿಗೆ ಬಂದಾಗಲೆಲ್ಲ ಒಂದಿಲ್ಲೊಂದು ನಾಟಕೀಯ ಬೆಳವಣಿಗಳು ನಡೆಯುವಂತೆ ತೋರುತ್ತದೆ. ಅದು ಅಷ್ಟೇನು ಸರಿಯಾದುದಲ್ಲ. ನನಗೆ ಬೆಂಬಲ ನೀಡಿದ ತಂಡದ ಸದಸ್ಯರು ಹಾಗೂ ಮುಖ್ಯವಾಗಿ ನನ್ನ ನಾಯಕನಿಗೆ (ತೆಂಬಾ ಬವುಮಾ) ಧನ್ಯವಾದ ತಿಳಿಸಬೇಕು. ಜನರು ಗುರುತಿಸದಿರಬಹುದು, ಆದರೆ ಆತ ಅತ್ಯುತ್ತಮ ನಾಯಕ. ಅವರು ಮತ್ತು ತಂಡ ಹಾಗೂ ದಕ್ಷಿಣ ಆಫ್ರಿಕಾ ನನ್ನನ್ನು ಪರಿಗಣಿಸುವುದಾದರೆ, ನನ್ನ ದೇಶಕ್ಕಾಗಿ ನಾನು ಮತ್ತೆ ಕ್ರಿಕೆಟ್‌ ಆಡುವುದಕ್ಕಿಂತಲೂ ಹೆಚ್ಚಿನದು ಮತ್ತೊಂದು ಇರದು ಎಂದು ಪ್ರಕಟಣೆಯಲ್ಲಿ ಹೇಳಿದ್ದರು.

ಅಂತೆಯೇ 'ನಾನು ಮಂಡಿಯೂರುವುದರಿಂದ ಇತರರಿಗೆ ತಿಳಿವಳಿಕೆ ಮೂಡಲು ಸಹಕಾರಿಯಾಗುತ್ತದೆ ಹಾಗೂ ಇತರರ ಬದುಕು ಉತ್ತಮಗೊಳ್ಳುತ್ತದೆ ಎಂದಾದರೆ; ನಾನು ಅದನ್ನು ಮಾಡಲು ಸಂತುಷ್ಟನಾಗಿರುವೆ ಎಂದು ಹೇಳಿದ್ದರು. ಅದರಂತೆ ಇಂದು ಶ್ರೀಲಂಕಾ ವಿರುದ್ಧ ಮಂಡಿಯೂರಿ ಕಪ್ಪು ವರ್ಣೀಯರಿಗೆ ಗೌರವ ಸಲ್ಲಿಕೆ ಮಾಡಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com