ಎಂಎಸ್ ಧೋನಿಗೆ ಸಂಕಷ್ಟ: 15 ದಿನಗಳ ಗಡುವು; ಬಾಕಿ ಪಾವತಿಸದಿದ್ದರೆ ಪ್ಲಾಟ್‌ ಹರಾಜು ಅನಿವಾರ್ಯ!

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಹಲವು ಬ್ರಾಂಡ್‌ಗಳಿಗೆ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಎಂಎಸ್ ಧೋನಿ
ಎಂಎಸ್ ಧೋನಿ

ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಹಲವು ಬ್ರಾಂಡ್‌ಗಳಿಗೆ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಹಿಂದೆ ಆಮ್ರಪಾಲಿ ಹೌಸಿಂಗ್‌ ಯೋಜನೆಗೂ ರಾಯಭಾರಿಯಾಗಿ ಕಾರ್ಯನಿರ್ವಹಿಸಿ ವಿವಾದದಲ್ಲಿ ಸಿಲುಕಿಕೊಂಡಿದ್ದರು. ಈಗ ಈ ವಿವಾದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಧೋನಿಯೊಂದಿಗೆ ಪ್ಲಾಟ್‌ ಗಳ ಬಾಕಿ ಹಣ ಪಾವತಿಸದ ಇನ್ನಷ್ಟು ಮಂದಿಗೆ   ಸುಪ್ರೀಂ ಕೋರ್ಟ್ ಆದೇಶದಂತೆ 15 ದಿನಗಳ ಗಡುವು ನೀಡಿದ್ದಾರೆ. ಇಲ್ಲದಿದ್ದರೆ, ಒಪ್ಪಂದವನ್ನು  ರದ್ದುಗೊಳಿಸುವ ಜೊತೆಗೆ ಪ್ಲಾಟ್‌ಗಳನ್ನು ಹರಾಜು ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

ರಾಷ್ಟ್ರೀಯ ಮಾಧ್ಯಮ ವರದಿಯ ಪ್ರಕಾರ, ಆಮ್ರಪಾಲಿ ವಸತಿ ಯೋಜನೆಯ ಗ್ರಾಹಕರ ದತ್ತಾಂಶದಲ್ಲಿ ಈವರೆಗೆ ಬಾಕಿ ಪಾವತಿಸದ ಮಾಲೀಕರಲ್ಲಿ ಎಂಎಸ್ ಧೋನಿ ಒಬ್ಬರು. ಪ್ರಸ್ತುತ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಯೋಜನೆಯ ನಿರ್ಮಾಣದ ಮೇಲ್ವಿಚಾರಣೆ ನಡೆಸುತ್ತಿರುವ NBCC (ನ್ಯಾಷನಲ್ ಬಿಲ್ಡಿಂಗ್ಸ್ ಕನ್ಸ್ಟ್ರಕ್ಷನ್ ಕಾರ್ಪೊರೇಷನ್ ಲಿಮಿಟೆಡ್), ಧೋನಿ ಸೇರಿದಂತೆ ಒಟ್ಟು 1800 ಮಂದಿಗೆ ನೋಟಿಸ್ ನೀಡಿದೆ. 

ಗಡುವಿನೊಳಗೆ ಬಾಕಿ ಪಾವತಿಸಿ ಯೋಜನೆಗೆ ಸಂಪೂರ್ಣ ಸಹಕಾರ ನೀಡುವಂತೆ ಕೋರಲಾಗಿದೆ. ನ್ಯಾಯಾಲಯದ ಆದೇಶದಂತೆ ಪೂರ್ಣ ಬಾಕಿ ಪಾವತಿ ಮಾಡಲು ಎರಡು ವಾರಗಳ ಕಾಲಾವಕಾಶ ನೀಡಲಾಗಿದೆ. ಇಲ್ಲದಿದ್ದಲ್ಲಿ ಅವರನ್ನು ಡೀಫಾಲ್ಟರ್ ಗಳೆಂದು ಪರಿಗಣಿಸಲಾಗುತ್ತದೆ ಎಂದು ನೋಟಿಸ್ ನಲ್ಲಿ ಹೇಳಲಾಗಿದೆ. ನಂತರ ಪ್ಲಾಟ್‌ಗಳನ್ನು ಮಾರಾಟವಾಗದ ಪಟ್ಟಿಗೆ ಸೇರಿಸಿ, ಮುಂದಿನ ಹಂತದಲ್ಲಿ ಹಂಚಿಕೆ ರದ್ದುಗೊಳಿಸಿ, ಹರಾಜು ಮಾಡಲಾಗುತ್ತದೆ ಎಂದು ಎಚ್ಚರಿಸಿದೆ.

ಆಮ್ರಪಾಲಿ ರಿಯಲ್ ಎಸ್ಟೇಟ್ ಗುಂಪಿಗೆ 2009ರಿಂದ 2016ರವರೆಗೆ ಧೋನಿ ಪ್ರಚಾರಕರಾಗಿದ್ದರು. ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ವಿರುದ್ದ ಆರೋಪಗಳ ಹಿನ್ನೆಲೆಯಲ್ಲಿ ರಂಗ ಪ್ರವೇಶಿಸಿದ ಸುಪ್ರೀಂ ಕೋರ್ಟ್, ಯೋಜನೆಯನ್ನು ಪೂರ್ಣಗೊಳಿಸುವ ಜವಾಬ್ದಾರಿಯನ್ನು ಸರ್ಕಾರದ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುವ NBCCಗೆ ವಹಿಸಿತ್ತು. ಹಲವಾರು ಮಂದಿ ಈಗಾಗಲೇ ತಮ್ಮ ಬಾಕಿ  ಪಾವತಿಗಳನ್ನು ಪೂರ್ಣಗೊಳಿಸಿದ್ದರೆ, ಬಾಕಿ ಪಾವತಿಸದವರಲ್ಲಿ ಧೋನಿ ಕೂಡ ಸೇರಿದ್ದಾರೆ. ಯೋಜನೆಯ ಭಾಗವಾಗಿ ಎರಡು ಫ್ಲಾಟ್‌ಗಳು  ಧೋನಿ ಹೆಸರಿನಲ್ಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com