ದಾಳಿ ಎಚ್ಚರಿಕೆ: ಪಾಕ್ ಪ್ರವಾಸ ರದ್ದುಗೊಳಿಸಿದ ನ್ಯೂಜಿಲೆಂಡ್; ಪ್ರಧಾನಿ ಜೆಸ್ಸಿಂಡಾಗೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕರೆ

ದಾಳಿ ಎಚ್ಚರಿಕೆ ಹಿನ್ನಲೆಯಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸವನ್ನು ರದ್ದುಗೊಳಿಸಿದ್ದು, ಇದರ ಬೆನ್ನಲ್ಲೇ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ನ್ಯೂಜಿಲೆಂಡ್ ಪ್ರಧಾನಿ ಜೆಸ್ಸಿಂಡಾ ಅವರಿಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ.
ಪಾಕಿಸ್ತಾನ
ಪಾಕಿಸ್ತಾನ

ಲಾಹೋರ್: ದಾಳಿ ಎಚ್ಚರಿಕೆ ಹಿನ್ನಲೆಯಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸವನ್ನು ರದ್ದುಗೊಳಿಸಿದ್ದು, ಇದರ ಬೆನ್ನಲ್ಲೇ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ನ್ಯೂಜಿಲೆಂಡ್ ಪ್ರಧಾನಿ ಜೆಸ್ಸಿಂಡಾ ಅವರಿಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ.

ರಾವಲ್ಪಿಂಡಿಯಲ್ಲಿ ಇಂದು ಆರಂಭವಾಗಬೇಕಿದ್ದ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಸೀಮಿತ ಓವರ್ ಗಳ ಕ್ರಿಕೆಟ್ ಸರಣಿಯನ್ನು "ಭದ್ರತಾ ಎಚ್ಚರಿಕೆ"ಹಿನ್ನಲೆಯಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ಆಡಳಿತ ಮಂಡಳಿ ರದ್ದುಗೊಳಿಸಿದೆ. ತಮಗೆ ಭದ್ರತಾ ಎಚ್ಚರಿಕೆ ನೀಡಲಾಗಿದೆ ಮತ್ತು ಏಕಪಕ್ಷೀಯವಾಗಿ ಸರಣಿಯನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ತಿಳಿಸಿದೆ.

ಈ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡ ಪಾಕಿಸ್ತಾನದ ವಿರುದ್ಧ ಮೂರು ಏಕದಿನ ಮತ್ತು ಐದು ಟಿ 20 ಪಂದ್ಯಗಳನ್ನು ಆಡಬೇಕಿತ್ತು. ರಾವಲ್ಪಿಂಡಿಯಲ್ಲಿ ಇಂದು ಮೊದಲ ಏಕದಿನ ಪಂದ್ಯ ಆಯೋಜನೆಯಾಗಿತ್ತು. ಆದರೆ ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್ ನ ಆದೇಶದ ಹಿನ್ನಲೆಯಲ್ಲಿ ಈ ವರೆಗೂ ನ್ಯೂಜಿಲೆಂಡ್ ಆಟಗಾರರು ತಮ್ಮ ಹೋಟೆಲ್‌ನಿಂದ ಹೊರಬಂದಿಲ್ಲ. ಅಲ್ಲದೆ ಪ್ರೇಕ್ಷಕರಿಗೆ ಕ್ರೀಡಾಂಗಣ ಪ್ರವೇಶಿಸಲೂ ಅವಕಾಶ ನೀಡಿಲ್ಲ.  

ಆಟಗಾರರಿಗೆ ಸಂಪೂರ್ಣ ಭದ್ರತೆಯ ಭರವಸೆ ನೀಡಿದ ಪಿಸಿಬಿ
ಇನ್ನು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯ ದಿಢೀರ್ ನಿರ್ಧಾರದಿಂದಾಗಿ ಆಘಾತಕ್ಕೊಳಗಾಗಿರುವ ಪಿಸಿಬಿ ನ್ಯೂಜಿಲೆಂಡ್ ಎಲ್ಲ ಆಟಗಾರರಿಗೆ ಸಂಪೂರ್ಣ ಭರವಸೆ ನೀಡುವುದಾಗಿ ಹೇಳಿದೆ. ಈಗಾಗಲೇ ಆಟಗಾರರಿಗೆ ಫೂಲ್‌ಪ್ರೂಫ್ ಭದ್ರತಾ ವ್ಯವಸ್ಥೆಯನ್ನು ಮಾಡಿದೆ ಎಂದು ಹೇಳಿದೆ.

ನ್ಯೂಜಿಲೆಂಡ್ ಪ್ರಧಾನಿಗೆ ಕರೆ ಮಾಡಿದ ಇಮ್ರಾನ್ ಖಾನ್
ಇನ್ನು ಇತ್ತ ನ್ಯೂಜಿಲೆಂಡ್ ತಂಡ ಟೂರ್ನಿ ರದ್ದು ಮಾಡುತ್ತಿದ್ದಂತೆಯೇ ಅತ್ತ ಪಾಕ್ ಪ್ರಧಾನಿ ಇಮ್ರಾನ್ ಖಾನ್ ನ್ಯೂಜಿಲೆಂಡ್ ಪ್ರಧಾನಿ ಜೆಸ್ಸಿಂಡಾ ಅವರಿಗೆ ದೂರವಾಣಿ ಕರೆ ಮಾಡಿದ್ದಾರೆ ಎನ್ನಲಾಗಿದೆ. ಯಾವುದೇ ಕಾರಣಕ್ಕೂ ಟೂರ್ನಿ ರದ್ದು ಮಾಡುವುದು ಬೇಡ. ತಂಡಕ್ಕೆ ಸಂಪೂರ್ಣ ಭದ್ರತೆ ನೀಡಲು ತಮ್ಮ ಸರ್ಕಾರ ಸಿದ್ಧವಿದೆ. ನಮ್ಮಲ್ಲಿ ವಿಶ್ವದ ಅತ್ಯುತ್ತಮ ಗುಪ್ತಚರ ವ್ಯವಸ್ಥೆ ಇದೆ ಮತ್ತು ಭೇಟಿ ನೀಡುವ ತಂಡಕ್ಕೆ ಯಾವುದೇ ರೀತಿಯ ಭದ್ರತಾ ಬೆದರಿಕೆ ಇಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. 

ಇದೇ ವಿಚಾರವಾಗಿ ಪಿಸಿಪಿ ಕೂಡ ಟ್ವೀಟ್ ಮಾಡಿದ್ದು, ನ್ಯೂಜಿಲೆಂಡ್ ಆಟಗಾರರು ತಂಡದ ಜೊತೆಗಿನ ಭದ್ರತಾ ಅಧಿಕಾರಿಗಳ ಕರ್ತವ್ಯ ನಿರ್ವಹಣೆ, ಭದ್ರತಾ ವ್ಯವಸ್ಥೆಗಳಿಂದ ತೃಪ್ತಿ ಹೊಂದಿದ್ದಾರೆ. ಪಿಸಿಬಿ ನಿಗದಿತ ಪಂದ್ಯಗಳನ್ನು ಮುಂದುವರಿಸಲು ಸಿದ್ಧವಾಗಿದೆ. ಆದಾಗ್ಯೂ, ಪಾಕಿಸ್ತಾನ ಮತ್ತು ಪ್ರಪಂಚದಾದ್ಯಂತದ ಕ್ರಿಕೆಟ್ ಪ್ರೇಮಿಗಳು ಈ ಕೊನೆಯ ಕ್ಷಣದಲ್ಲಿ ಹಿಂತೆಗೆದುಕೊಳ್ಳುವಿಕೆಯಿಂದ ನಿರಾಶೆಗೊಳ್ಳುತ್ತಾರೆ ಎಂದು ಪಿಸಿಬಿ ಟ್ವೀಟ್ ಮಾಡಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com