
ದೆಹಲಿ ತಂಡಕ್ಕೆ ಜಯ
ಮುಂಬೈ: ಐಪಿಎಲ್ 2022ರ ಟೂರ್ನಿಯ ಭಾನುವಾರದ ಪಂದ್ಯದಲ್ಲಿ ಕೋಲ್ಕತಾ ವಿರುದ್ಧ ದೆಹಲಿ 44 ರನ್ ಗಳ ಭರ್ಜರಿ ಜಯ ದಾಖಲಿಸಿದೆ.
ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಮಿಂಚಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 44 ರನ್ ಗಳಿಂದ ಜಯ ಸಾಧಿಸಿತು. 216 ರನ್ ಗಳ ಸವಾಲನ್ನು ಬೆನ್ನಹತ್ತಿದ ಕೆಕೆಆರ್ 19.4 ಓವರ್ ಗಳಲ್ಲಿ 171 ರನ್ ಗಳಿಗೆ ಸರ್ವಪತನ ಕಾಣುವ ಮೂಲಕ 44 ರನ್ ಗಳ ಹೀನಾಯ ಸೋಲು ಕಂಡಿತು.
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಐದು ವಿಕೆಟ್ ನಷ್ಟಕ್ಕೆ 215 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಡೇವಿಡ್ ವಾರ್ನರ್ 61 ಹಾಗೂ ಪೃಥ್ವಿ ಶಾ 51 ರನ್ ಗಳ ಬಿರುಸಿನ ಆಟದಿಂದಾಗಿ ತಂಡ ಬೃಹತ್ ಮೊತ್ತ ಪೇರಿಸಲು ನೆರವಾದರು. ಮೊದಲ ವಿಕೆಟ್ ಗೆ ಈ ಇಬ್ಬರು ಆಟಗಾರರು ಪವರ್ ಪ್ಲೇ ನಲ್ಲಿ 68 ರನ್ ಸೇರಿಸಿದರು. ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಶಾ 27 ಎಸೆತಗಳಲ್ಲಿ ಅರ್ಧಶತಕ ಗಳಿಸುತ್ತಿದ್ದಂತೆ ನಿರ್ಗಮಿಸಿದರು.
ವಾರ್ನರ್ ಜತೆ ಮೊದಲ ವಿಕೆಟ್ ಗೆ 93 ರನ್ ಸೇರಿಸಿದರು. ವಾರ್ನರ್ 35 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. ಪಂತ್ 27, ಠಾಕೂರ್ 29 ಹಾಗೂ ಅಕ್ಷರ್ ಪಟೇಲ್ 22 ರನ್ ಗಳಿಸಿ ತಂಡದ ಮೊತ್ತವನ್ನು 200 ರ ಗಡಿ ದಾಟಿಸಿದರು. ಅಂತಿಮವಾಗಿ ನಿಗದಿತ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 215ರನ್ ಗಳಿಸಿ 216ರನ್ ಗಳ ಬೃಹತ್ ಗುರಿ ನೀಡಿತು.