ಶ್ರೀಲಂಕಾ ಆಟಗಾರರು ಐಪಿಎಲ್ ತೊರೆದು ತಮ್ಮ ದೇಶದ ಬೆಂಬಲಕ್ಕೆ ನಿಲ್ಲಬೇಕಿದೆ: ಅರ್ಜುನ ರಣತುಂಗಾ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆಡುತ್ತಿರುವ ಎಲ್ಲಾ ಶ್ರೀಲಂಕಾ ಆಟಗಾರರು ನಡೆಯುತ್ತಿರುವ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ತಮ್ಮ ದೇಶದ ಬೆಂಬಲಕ್ಕೆ ಬಂದು ನಿಲ್ಲುವಂತೆ ಮಾಜಿ ಕ್ರಿಕೆಟಿಗ ಮತ್ತು ಸಚಿವ ಅರ್ಜುನ ರಣತುಂಗ ಮಂಗಳವಾರ ಒತ್ತಾಯಿಸಿದ್ದಾರೆ.
Published: 12th April 2022 04:06 PM | Last Updated: 12th April 2022 07:54 PM | A+A A-

ಅರ್ಜುನ್ ರಣತುಂಗಾ
ಕೊಲಂಬೊ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆಡುತ್ತಿರುವ ಎಲ್ಲಾ ಶ್ರೀಲಂಕಾ ಆಟಗಾರರು ನಡೆಯುತ್ತಿರುವ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ತಮ್ಮ ದೇಶದ ಬೆಂಬಲಕ್ಕೆ ಬಂದು ನಿಲ್ಲುವಂತೆ ಮಾಜಿ ಕ್ರಿಕೆಟಿಗ ಮತ್ತು ಸಚಿವ ಅರ್ಜುನ ರಣತುಂಗ ಮಂಗಳವಾರ ಒತ್ತಾಯಿಸಿದ್ದಾರೆ.
ಶ್ರೀಲಂಕಾವು ಆಹಾರ ಮತ್ತು ಇಂಧನ ಕೊರತೆ ಸೇರಿ ತೀವ್ರ ಆರ್ಥಿಕ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿದೆ. ಇದು ದ್ವೀಪ ರಾಷ್ಟ್ರದ ಹೆಚ್ಚಿನ ಸಂಖ್ಯೆಯ ಜನರ ಮೇಲೆ ಪರಿಣಾಮ ಬೀರುತ್ತಿದೆ. ಕೋವಿಡ್ ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಆರ್ಥಿಕತೆಯು ಅಂತಃಪತನದತ್ತ ಸಾಗಿದೆ.
ನನಗೆ ನಿಜವಾಗಿಯೂ ತಿಳಿಯುತ್ತಿಲ್ಲ. ತಮ್ಮ ದೇಶ ಆರ್ಥಿಕ ಸಂಕಷ್ಟಕ್ಕೆ ಸಿಲುಕ್ಕಿದ್ದರೂ ಕೆಲವು ಕ್ರಿಕೆಟಿಗರು ಐಪಿಎಲ್ನಲ್ಲಿ ಆಡುತ್ತಿದ್ದಾರೆ. ತಮ್ಮ ದೇಶದ ಬಗ್ಗೆ ಮಾತನಾಡುತ್ತಿಲ್ಲ. ದುರದೃಷ್ಟವಶಾತ್, ಜನರು ಸರ್ಕಾರದ ವಿರುದ್ಧ ಮಾತನಾಡಲು ಹೆದರುತ್ತಾರೆ. ಈ ಕ್ರಿಕೆಟಿಗರು ಸಹ ಕ್ರಿಕೆಟ್ ಮಂಡಳಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಚಿವಾಲಯ ಮತ್ತು ಅವರು ತಮ್ಮ ಉದ್ಯೋಗವನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಈಗ ಅವರು ಒಂದು ದಿಟ್ಟ ಹೆಜ್ಜೆ ಇಡಬೇಕಾದ ಕಾಲ ಬಂದಿದೆ. ಇನ್ನು ಕೆಲವು ಯುವ ಕ್ರಿಕೆಟಿಗರು ಮುಂದೆ ಬಂದು ಪ್ರತಿಭಟನೆಯನ್ನು ಬೆಂಬಲಿಸಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಅರ್ಜುನ ರಣತುಂಗ ತಿಳಿಸಿದರು.
ಇದನ್ನೂ ಓದಿ: ಸಂಕಷ್ಟದಲ್ಲಿರುವ ಲಂಕಾಗೆ ಭಾರತ ಶಕ್ತಿಮೀರಿ ನೆರವು ನೀಡುತ್ತಿದೆ: ಮಾಜಿ ಪ್ರಧಾನಿ ರನಿಲ್ ವಿಕ್ರಮಸಿಂಘೆ
ಏನಾದರೂ ತಪ್ಪು ನಡೆದಾಗ, ನಿಮ್ಮ ವ್ಯವಹಾರದ ಬಗ್ಗೆ ಯೋಚಿಸದೆ, ಅದರ ವಿರುದ್ಧ ಮಾತನಾಡುವ ಧೈರ್ಯ ಮಾಡಬೇಕು. ಇಲ್ಲದಿದ್ದರೆ ಜನರು ನಮ್ಮನ್ನು ಪ್ರಶ್ನಿಸುತ್ತಾರೆ. ನಾನು ಕಳೆದ 19 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಇನ್ನು ಇದು ರಾಜಕೀಯ ವಿಷಯವಲ್ಲ, ಇಲ್ಲಿಯವರೆಗೆ, ಯಾವುದೇ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ಪ್ರತಿಭಟನೆಗೆ ಇಳಿದಿಲ್ಲ. ಇದು ಈ ದೇಶದ ಜನರ ದೊಡ್ಡ ಶಕ್ತಿಯಾಗಿದೆ ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಶ್ರೀಲಂಕಾದ ಆಟಗಾರರಾದ ವನಿಂದು ಹಸರಂಗ ಮತ್ತು ಭಾನುಕಾ ರಾಜಪಕ್ಸೆ ಅವರು ಆರ್ಥಿಕ ಬಿಕ್ಕಟ್ಟಿನ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳನ್ನು ಬೆಂಬಲಿಸಿದರು. ಐಪಿಎಲ್ನಲ್ಲಿ ಆಡುತ್ತಿರುವ ಆಟಗಾರರು ಯಾರೆಂದು ನಿಮಗೆಲ್ಲರಿಗೂ ತಿಳಿದಿದೆ. ನಾನು ಇಲ್ಲಿ ಉಲ್ಲೇಖಿಸಲು ಬಯಸುವುದಿಲ್ಲ ಆದರೆ ಅವರು ಒಂದು ವಾರದವರೆಗೆ ತಮ್ಮ ಕೆಲಸವನ್ನು ಬಿಟ್ಟು ಪ್ರತಿಭಟನೆಗೆ ಬೆಂಬಲವಾಗಿ ಬರಬೇಕೆಂದು ನಾನು ಬಯಸುತ್ತೇನೆ ಎಂದು ಮಾಜಿ ಕ್ರಿಕೆಟಿಗ ಹೇಳಿದರು.