ವಿಂಡೀಸ್ ಸರಣಿಗೆ ಹಿಟ್ ಮ್ಯಾನ್ ಸಾರಥ್ಯ; ಫಿಟ್ನೆಸ್ ಟೆಸ್ಟ್ ನಲ್ಲಿ ರೋಹಿತ್ ಶರ್ಮಾ ಪಾಸ್!
ಗಾಯದ ಸಮಸ್ಯೆಯಿಂದಾಗಿ ದಕ್ಷಿಣ ಆಫ್ರಿಕಾ ಸರಣಿ ಮಿಸ್ ಮಾಡಿಕೊಂಡಿದ್ದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಇದೀಗ ಸಂಪೂರ್ಣ ಫಿಟ್ ಆಗಿದ್ದು, ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಲಭ್ಯರಾಗುವ ಸಾಧ್ಯತೆ ಇದೆ.
Published: 26th January 2022 08:19 PM | Last Updated: 27th January 2022 01:28 PM | A+A A-

ಕೆಎಲ್ ರಾಹುಲ್-ರೋಹಿತ್
ಬೆಂಗಳೂರು: ಗಾಯದ ಸಮಸ್ಯೆಯಿಂದಾಗಿ ದಕ್ಷಿಣ ಆಫ್ರಿಕಾ ಸರಣಿ ಮಿಸ್ ಮಾಡಿಕೊಂಡಿದ್ದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಇದೀಗ ಸಂಪೂರ್ಣ ಫಿಟ್ ಆಗಿದ್ದು, ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಲಭ್ಯರಾಗುವ ಸಾಧ್ಯತೆ ಇದೆ.
ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಹಾಗೂ ಏಕದಿನ ಸರಣಿ ಸೋತ ಟೀಂ ಇಂಡಿಯಾ ತನ್ನ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು. 3ನೇ ಏಕದಿನ ಪಂದ್ಯದಲ್ಲಿ ಗೆಲ್ಲುವ ಚಿನ್ನದಂತಹ ಅವಕಾಶವಿದ್ದರೂ ಭಾರತ ಸುಲಭವಾಗಿ ಕೈ ಚೆಲ್ಲಿತು. ಆದರೆ ವೈಟ್ ವಾಶ್ ಸೋಲಿನ ಬೇಸರದಲ್ಲಿರುವ ಟೀಂ ಇಂಡಿಯಾ ಅಭಿಮಾನಿಗಳಿಗೆ ಸಂತಸದ ಸುದ್ದಿ ಇಲ್ಲಿದ್ದು, ಟೀಂ ಇಂಡಿಯಾದ ಹಿಟ್ಮ್ಯಾನ್ ಕ್ಯಾಪ್ಟನ್ ರೋಹಿತ್ ಶರ್ಮಾ ಗಾಯದಿಂದ ಚೇತರಿಸಿಕೊಂಡಿದ್ದು, ಫಿಟ್ನೆಸ್ ಟೆಸ್ಟ್ ನಲ್ಲಿ ಕೂಡ ಪಾಸ್ ಆಗಿದ್ದಾರೆ.
ಬೆಂಗಳೂರಿನ ಎನ್ಸಿಎ ಅಕಾಡೆಮಿಯಲ್ಲಿ ಗಾಯದಿಂದ ಚೇತರಿಸಿಕೊಂಡಿರುವ ನಾಯಕ ರೋಹಿತ್ ಶರ್ಮಾ ಇಂದು ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಇದರೊಂದಿಗೆ ತವರಿನಲ್ಲಿ ನಡೆಯಲಿರುವ ವಿಂಡೀಸ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗೆ ಹಿಟ್ ಮ್ಯಾನ್ ಲಭ್ಯವಾಗಲಿದ್ದಾರೆ. ಬೆಂಗಳೂರಿನ ಎನ್ಸಿಎ ಅಕಾಡೆಮಿಯಲ್ಲಿ ಇಂದು ರೋಹಿತ್ ಶರ್ಮಾ ಫಿಟ್ನೆಸ್ ಪರೀಕ್ಷೆಗೆ ಒಳಗಾದರು. ಈ ಟೆಸ್ಟ್ ಗಳಲ್ಲಿ ಮಿಂಚಿದ ರೋಹಿತ್ ಫಿಟ್ನೆಸ್ ಸಾಬೀತು ಪಡಿಸಿದರು. ನಿಗದಿತ ಸಮಯದಲ್ಲಿ ನೀಡಿದ್ದ ಫಿಟ್ನೆಸ್ ಪರೀಕ್ಷೆಗಳನ್ನ ರೋಹಿತ್ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಹೀಗಾಗಿ ಅಧಿಕಾರಿಗಳು ರೋಹಿತ್ ಶರ್ಮಾಗೆ ಫಿಟ್ನೆಸ್ ಕ್ಲಿಯರೆನ್ಸ್ ಪ್ರಮಾಣಪತ್ರವನ್ನೂ ನೀಡಿದ್ದಾರೆ. ಸಂಪೂರ್ಣವಾಗಿ ಚೇತರಿಸಿಕೊಂಡಿರುವುದರಿಂದ ರೋಹಿತ್ ತವರಿನಲ್ಲಿ ನಡೆಯಲಿರುವ ಏಕದಿನ ಮತ್ತು ಟಿ20 ಸರಣಿಗೆ ಲಭ್ಯವಾಗಲಿದ್ದಾರೆ.
ಇದನ್ನೂ ಓದಿ: ವೆಸ್ಟ್ ಇಂಡೀಸ್ ಸರಣಿಗೆ ಟೀಂ ಇಂಡಿಯಾ ಪ್ರಕಟ: ಹಿಟ್ ಮ್ಯಾನ್ ರೋಹಿತ್ ಶರ್ಮಾಗೆ ಸಾರಥ್ಯ, ದೀಪಕ್ ಹೂಡಾ, ಆವೇಶ್ ಖಾನ್ ಅಚ್ಚರಿ ಆಯ್ಕೆ
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತಯಾರಿ ನಡೆಸುತ್ತಿದ್ದ ವೇಳೆ ರೋಹಿತ್ ಶರ್ಮಾ ಗಾಯಗೊಂಡಿದ್ದರು. ಹ್ಯಾಮ್ಸ್ಟ್ರಿಂಗ್ ಸಮಸ್ಯೆಯಿಂದ ಬಳಲುತ್ತಿದ್ದ ರೋಹಿತ್ ಆರಂಭದಲ್ಲಿ ಟೆಸ್ಟ್ ಸರಣಿಯಿಂದ ಹೊರಬಿದ್ದರು. ಏಕದಿನ ಸರಣಿಗೆ ಚೇತರಿಸಿಕೊಳ್ಳಬಹುದೆಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಹಿಟ್ಮ್ಯಾನ್ ಗಾಯದ ಚೇತರಿಕೆ ವಿಳಂಭವಾದ ಪರಿಣಾಮ ರೋಹಿತ್ ಏಕದಿನ ಸರಣಿಯಲ್ಲೂ ಆಡಿರಲಿಲ್ಲ.