1st T20I: ವಿಂಡೀಸ್ ವಿರುದ್ಧ ಭರ್ಜರಿ ಬ್ಯಾಟಿಂಗ್, ಕೊಹ್ಲಿ ದಾಖಲೆ ಮುರಿದ ರೋಹಿತ್ ಶರ್ಮಾ, ಒಂದೇ ಪಂದ್ಯದಲ್ಲಿ 2 ದಾಖಲೆ!

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಟೀಂ ಇಂಡಿಯಾ ರನ್ ಮೆಷಿನ್ ವಿರಾಟ್ ಕೊಹ್ಲಿಯ ದಾಖಲೆಯನ್ನು ಹಿಂದಿಕ್ಕಿದ್ದು ಮಾತ್ರವಲ್ಲದೇ ಒಂದೇ ಪಂದ್ಯದಲ್ಲಿ 2 ದಾಖಲೆಗಳನ್ನು ನಿರ್ಮಿಸಿದ್ದಾರೆ.
ರೋಹಿತ್ ಶರ್ಮಾ
ರೋಹಿತ್ ಶರ್ಮಾ

ಟ್ರಿನಿಡಾಡ್: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಟೀಂ ಇಂಡಿಯಾ ರನ್ ಮೆಷಿನ್ ವಿರಾಟ್ ಕೊಹ್ಲಿಯ ದಾಖಲೆಯನ್ನು ಹಿಂದಿಕ್ಕಿದ್ದು ಮಾತ್ರವಲ್ಲದೇ ಒಂದೇ ಪಂದ್ಯದಲ್ಲಿ 2 ದಾಖಲೆಗಳನ್ನು ನಿರ್ಮಿಸಿದ್ದಾರೆ.

ಹೌದು.. ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿಯಲ್ಲಿ ಐದು ಪಂದ್ಯಗಳ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಭಾರತವು ವೆಸ್ಟ್ ಇಂಡೀಸ್ ವಿರುದ್ಧ 68 ರನ್‌ಗಳ ಅಂತರದ ಸುಲಭ ಜಯ ಸಾಧಿಸುವುದರ ಮೂಲಕ ಭಾರತ ತಂಡ ಶುಭಾರಂಭ ಮಾಡಿದ್ದು, ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಆತಿಥೇಯ ತಂಡದ ವಿರುದ್ಧ ಉತ್ತಮ ಮೊತ್ತ ಕಲೆಹಾಕಿತ್ತು. ನಾಯಕ ರೋಹಿತ್ ಶರ್ಮಾ, ದಿನೇಶ್ ಕಾರ್ತಿಕ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಭಾರತ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿ, ಎದುರಾಳಿ ತಂಡಕ್ಕೆ 191 ರನ್‌ಗಳ ಬೃಹತ್ ಗುರಿ ನೀಡಿತ್ತು.

ರೋಹಿತ್ ಶರ್ಮಾ ದಾಖಲೆಯ ಅರ್ಧಶತಕ
ಇನ್ನು ಭಾರತದ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಆರಂಭದಿಂದಲೂ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ವಿಂಡೀಸ್ ಬೌಲರ್ ಗಳನ್ನು ಮನಸೋ ಇಚ್ಛೆ ದಂಡಿಸಿದ ರೋಹಿತ್ ಶರ್ಮಾ ಕೇವಲ 44 ಎಸೆತಗಳಲ್ಲಿ 2 ಭರ್ಜರಿ ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ 64 ರನ್ ಗಳನ್ನು ಸಿಡಿಸಿದರು. ಇದು ಅವರ ಟಿ20ಐ ವೃತ್ತಿಜೀವನದಲ್ಲಿ 31ನೇ ಬಾರಿ 50+ (27 ಅರ್ಧಶತಕ+4 ಶತಕ) ರನ್ ಗಳಿಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಆ ಮೂಲಕ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಈ ದಾಖಲೆಯನ್ನು ರೋಹಿತ್ ಹಿಂದಿಕ್ಕಿದ್ದಾರೆ. ವಿರಾಟ್ ಕೊಹ್ಲಿ ಟಿ20ಐ ವೃತ್ತಿಜೀವನದಲ್ಲಿ 30ನೇ ಬಾರಿ 50+ (30 ಅರ್ಧಶತಕ+0 ಶತಕ) ರನ್ ಗಳಿಸಿದ್ದಾರೆ.

ಒಂದೇ ಪಂದ್ಯದಲ್ಲಿ 2 ದಾಖಲೆ
ಇನ್ನು ಇದೇ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತೊಂದು ದಾಖಲೆ ನಿರ್ಮಿಸಿದ್ದು, ಈ ಪಂದ್ಯದ 64 ರನ್ ಗಳ ಮೂಲಕ ಹಿಟ್ ಮ್ಯಾನ್ ತಮ್ಮ ಟಿ20ಐ ರನ್ ಗಳಿಕೆಯನ್ನು 3443 ಕ್ಕೆ ಏರಿಕೆ ಮಾಡಿಕೊಂಡರು. ಆ ಮೂಲಕ ಟಿ20ಐ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾದರು. ಆಲ್ಲದೆ ಇಷ್ಟು ದಿನ ಈ ದಾಖಲೆ ಹೊಂದಿದ್ದ ನ್ಯೂಜಿಲೆಂಡ್ ತಂಡದ ಮಾರ್ಟಿನ್ ಗಪ್ಟಿಲ್ (3399)ರನ್ನು ಎರಡನೇ ಸ್ಥಾನಕ್ಕೆ ತಳ್ಳಿದ್ದಾರೆ. ಮೂರನೇ ಸ್ಥಾನದಲ್ಲಿ ಭಾರತದ ವಿರಾಟ್ ಕೊಹ್ಲಿ ಇದ್ದು, ಇವರು 3308ರನ್ ಗಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com