ಕ್ರಿಕೆಟ್: ಏಷ್ಯಾ ಕಪ್ 2022 ಟೂರ್ನಿಗೆ ಡೇಟ್ ಫಿಕ್ಸ್; ಮತ್ತೆ ಭಾರತ-ಪಾಕ್ ಮುಖಾಮುಖಿ
ಬಹು ನಿರೀಕ್ಷಿತ ಏಷ್ಯಾಕಪ್ ಟೂರ್ನಿಯ ವೇಳೆ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಪ್ರತಿಷ್ಠಿತ ಟೂರ್ನಿಯಲ್ಲಿ ಮತ್ತೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ.
Published: 19th March 2022 06:08 PM | Last Updated: 19th March 2022 06:29 PM | A+A A-

ಸಂಗ್ರಹ ಚಿತ್ರ
ನವದೆಹಲಿ: ಬಹು ನಿರೀಕ್ಷಿತ ಏಷ್ಯಾಕಪ್ ಟೂರ್ನಿಯ ವೇಳೆ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಪ್ರತಿಷ್ಠಿತ ಟೂರ್ನಿಯಲ್ಲಿ ಮತ್ತೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ.
ಕೊಲಂಬೊದಲ್ಲಿ ಶನಿವಾರ ನಡೆದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ ಏಷ್ಯಾ ಕಪ್ 2022 (ASIA CUP 2022) ಟೂರ್ನಿ ಡೇಟ್ ಫಿಕ್ಸ್ ಮಾಡಲಾಗಿದೆ. ಈ ಬಾರಿ ಟಿ20 ಮಾದರಿಯಲ್ಲಿ ಏಷ್ಯಾ ಕಪ್ ನಡೆಯಲಿದ್ದು, ಆಗಸ್ಟ್ 27 ರಂದು ಟೂರ್ನಿಗೆ ಚಾಲನೆ ನೀಡಲು ನಿರ್ಧರಿಸಲಾಗಿದ್ದು, ಸೆಪ್ಟಂಬರ್ 11 ರಂದು ಫೈನಲ್ ಪಂದ್ಯ ನಡೆಯಲಿದೆ.
ಇದನ್ನೂ ಓದಿ: ಎಸಿಸಿ ಅಧ್ಯಕ್ಷರಾಗಿ ಜಯ್ ಶಾ ಅಧಿಕಾರವಧಿ ಒಂದು ವರ್ಷಕ್ಕೆ ಅವಿರೋಧ ವಿಸ್ತರಣೆ
ಏಷ್ಯಾಕಪ್ ಅನ್ನು ಈ ಹಿಂದೆ ಏಕದಿನ ಮಾದರಿಯಲ್ಲಿ ಆಡಿಸಲಾಗುತ್ತಿತ್ತು. ಇದೀಗ ಟಿ20 ಸ್ವರೂಪದಲ್ಲಿ ಟೂರ್ನಿ ನಡೆಸಲು ನಿರ್ಧರಿಸಲಾಗಿದೆ. ಈ ಬಾರಿ ಟಿ20 ವಿಶ್ವಕಪ್ನಲ್ಲಿ ಭಾರತ-ಪಾಕಿಸ್ತಾನ್ ಮುಖಾಮುಖಿಯಾಗಲಿದ್ದು, ಅದಕ್ಕೂ ಮುನ್ನ ಉಭಯ ತಂಡಗಳು ಏಷ್ಯಾ ಕಪ್ನಲ್ಲೂ ಸೆಣಸಾಡಲಿದೆ. ಈ ಬಾರಿ ಏಷ್ಯಾ ಕಪ್ನಲ್ಲಿ ಒಟ್ಟು 6 ತಂಡಗಳು ಭಾಗವಹಿಸಲಿದ್ದು, ಈಗಾಗಲೇ 5 ತಂಡಗಳು ಅರ್ಹತೆ ಪಡೆದುಕೊಂಡಿದೆ. ಇನ್ನು ಒಂದು ತಂಡವು ಅಂತಿಮವಾಗಬೇಕಿದೆ.
The Asia Cup 2022 (T20 Format) will be held in Sri Lanka from 27 August - 11 September later this year. The Qualifiers for the same will be played 20 August 2022 onwards.
— AsianCricketCouncil (@ACCMedia1) March 19, 2022
ಶ್ರೀಲಂಕಾದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳು ಅರ್ಹತೆ ಪಡೆದಿವೆ. ಆರನೇ ತಂಡವನ್ನು ಅರ್ಹತಾ ಸುತ್ತಿನಲ್ಲಿ ನಿರ್ಧರಿಸಲಾಗುತ್ತದೆ. ಹಾಂಗ್ ಕಾಂಗ್, ಕುವೈತ್, ಸಿಂಗಾಪುರ ಮತ್ತು ಯುಎಇ ತಂಡಗಳು ಅರ್ಹತಾ ಸುತ್ತಿಗೆ ಪ್ರವೇಶಿಸಿವೆ. ಹೀಗಾಗಿ ಈ ತಂಡಗಳಲ್ಲಿ ಒಂದು ತಂಡವು ಈ ಬಾರಿ ಏಷ್ಯಾ ಕಪ್ನಲ್ಲಿ ಕಾಣಿಸಿಕೊಳ್ಳಲಿದೆ.
ಅಂದಹಾಗೆ ಈ ಬಾರಿ ಆಯೋಜನೆಗೊಳ್ಳುತ್ತಿರುವುದು 15ನೇ ಸೀಸನ್ ಏಷ್ಯಾ ಕಪ್. 1984 ರಲ್ಲಿ ಯುಎಇನಲ್ಲಿ ಶುರುವಾದ ಏಷ್ಯಾ ಕಪ್ಗೆ ಈ ಬಾರಿ ಲಂಕಾ ಕ್ರಿಕೆಟ್ ಮಂಡಳಿ ಆತಿಥ್ಯವಹಿಸಲಿದೆ. ಇನ್ನು ಕಳೆದ ವರ್ಷ ಕೊರೋನಾ ಕಾರಣದಿಂದ ಟೂರ್ನಿಯನ್ನು ನಡೆಸಿರಲಿಲ್ಲ. ಇದೀಗ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೂ ಮುನ್ನ ಟೂರ್ನಿಯನ್ನು ಆಯೋಜಿಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನಿರ್ಧರಿಸಿದೆ.
ಏಷ್ಯಾ ಕಪ್ ದಾಖಲೆ:
ಇನ್ನು ಒಟ್ಟಾರೆ ಏಷ್ಯಾಕಪ್ ದಾಖಲೆಯನ್ನು ನೋಡಿದರೆ ಭಾರತ ತಂಡವೇ ಅತ್ಯಂತ ಯಶಸ್ವಿ ತಂಡವಾಗಿದೆ. ಟೀಮ್ ಇಂಡಿಯಾ 7 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದಲ್ಲದೇ ಶ್ರೀಲಂಕಾ ತಂಡ 5 ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಪಾಕಿಸ್ತಾನ ಎರಡು ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ.