IPL Betting: 2019ರ ಐಪಿಎಲ್ ಫಲಿತಾಂಶ ನಿರ್ಧರವಾಗಿದ್ದು ಪಾಕಿಸ್ತಾನದಲ್ಲಿ..!? ಬೆಟ್ಟಿಂಗ್ ಕರಾಳ ಮುಖ ಬಯಲು ಮಾಡಿದ ಸಿಬಿಐ!!
ಕ್ರಿಕೆಟ್ ಬೆಟ್ಟಿಂಗ್ ಭೂತ ದೇಶದಲ್ಲಿ ಮತ್ತೆ ಸದ್ದು ಮಾಡುತ್ತಿದ್ದು, 2019ರ ಐಪಿಎಲ್ ಟೂರ್ನಿಯಲ್ಲಿ ಬೆಟ್ಟಿಂಗ್ ನಡೆದಿರುವ ಕುರಿತು ಗಂಭೀರ ಅನುಮಾನಗಳು ಮೂಡತೊಡಗಿವೆ.
Published: 15th May 2022 01:09 AM | Last Updated: 15th May 2022 01:09 AM | A+A A-

ಐಪಿಎಲ್ ಟ್ರೋಫಿ
ನವದೆಹಲಿ: ಕ್ರಿಕೆಟ್ ಬೆಟ್ಟಿಂಗ್ ಭೂತ ದೇಶದಲ್ಲಿ ಮತ್ತೆ ಸದ್ದು ಮಾಡುತ್ತಿದ್ದು, 2019ರ ಐಪಿಎಲ್ ಟೂರ್ನಿಯಲ್ಲಿ ಬೆಟ್ಟಿಂಗ್ ನಡೆದಿರುವ ಕುರಿತು ಗಂಭೀರ ಅನುಮಾನಗಳು ಮೂಡತೊಡಗಿವೆ.
ಹೌದು.. ಐಪಿಎಲ್ 2022 ಕುತೂಹಲದ ಘಟ್ಟದಲ್ಲಿ ಸಾಗುತ್ತಿರುವಾಗಲೇ ಐಪಿಎಲ್ ಬೆಟ್ಟಿಂಗ್ ಮತ್ತೆ ಸಂಚಲನ ಮೂಡಿಸಿದ್ದು, 2019 ರಲ್ಲಿ ದೆಹಲಿಯಲ್ಲಿ ನಡೆದ ಐಪಿಎಲ್ ಪಂದ್ಯಗಳಲ್ಲಿ ಭಾಗಿಯಾಗಿರುವ ಬೆಟ್ಟಿಂಗ್ ದಂಧೆಯ ಬಗ್ಗೆ ಸಿಬಿಐ (IPL Betting CBI) ತನಿಖೆ ನಡೆಸಲಿದ್ದು, ಈ ಬೆಟ್ಟಿಂಗ್ ಜಾಲವು ಪಾಕಿಸ್ತಾನದೊಂದಿಗೆ (IPL Betting linked with Pakistan) ಸಂಪರ್ಕ ಹೊಂದಿತ್ತು ಎಂದು ಆರೋಪಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಮೂವರನ್ನು ಬಂಧಿಸಲಾಗಿದ್ದು, ಆರೋಪಿಗಳ ವಿರುದ್ಧ ಎರಡು ಎಫ್ಐಆರ್ಗಳನ್ನು ಕೂಡ ದಾಖಲಿಸಲಾಗಿದೆ. 2019ರ ಐಪಿಎಲ್ ಫಲಿತಾಂಶಗಳ ಮೇಲೆ ಪಾಕಿಸ್ತಾನ ಬೆಟ್ಟಿಂಗ್ ಮೂಲಕ ಪ್ರಭಾವ ಬೀರಿತ್ತು ಎಂದು ಸಿಬಿಐ ತಿಳಿಸಿದೆ.
ಸಿಬಿಐ ತನ್ನ ವರದಿಯಲ್ಲಿ ಕಳೆದ 2010ರಿಂದಲೂ ತಂಡವೊಂದು ಐಪಿಎಲ್ ಪಂದ್ಯಗಳಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದು, ಇದಕ್ಕಾಗಿ ಸಾರ್ವಜನಿಕರನ್ನು ಸೆಳೆಯುತ್ತಿದೆ. ಆ ಮೂಲಕ ಸಾರ್ವಜನಿಕರ ಬಳಿ ಸಾಕಷ್ಟು ಹಣವನ್ನು ವಂಚಿಸಿದೆ ಎಂದು ಪಾಕಿಸ್ತಾನ ಮಾಹಿತಿ ನೀಡಿದೆ. ಪ್ರಕರಣ ಸಂಬಂಧ ದೆಹಲಿ, ರಾಜಸ್ಥಾನ್ ಹಾಗೂ ಹೈದರಾಬಾದ್ ನಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಆರೋಪಿಗಳು ಬೆಟ್ಟಿಂಗ್ ವ್ಯವಹಾರದಲ್ಲಿ ಹಣವನ್ನು ಪಡೆಯಲು ಹಾಗೂ ವರ್ಗಾಯಿಸಲು ಅಪರಿಚಿತ ಬ್ಯಾಂಕ್ ಅಧಿಕಾರಿಗಳ ನೆರವಿನಿಂದ ನಕಲಿ ದಾಖಲೆಗಳೊಂದಿಗೆ ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಈ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ ವಿಭಿನ್ನ ಜನ್ಮ ದಿನಾಂಕಗಳು ಸೇರಿದಂತೆ ನಕಲಿ ವಿವರಗಳು ಕಂಡು ಬಂದಿದೆ ಎಂದು ಆರೋಪಿಸಲಾಗಿದೆ.
ಹವಾಲ ದಂಧೆ
ಬೆಟ್ಟಿಂಗ್ ಚುಟುವಟಿಕೆಗಳು 2010ರಿಂದಲೂ ನಡೆಯುತ್ತಿದೆ. ಭಾರತದಲ್ಲಿ ಸಾರ್ವಜನಿಕರಿಂದ ಪಡೆಯುವ ಹಣದ ಒಂದು ಭಾಗವನ್ನು ಹವಾಲ ವಹಿವಾಟುಗಳ ಮೂಲಕ ವಿದೇಶದಲ್ಲಿ ನೆಲೆಸಿರುವ ಸಹವರ್ತಿಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಆರೋಪಿಗಳಾದ ದೆಹಲಿ ನಿವಾಸಿ ದಿಲೀಪ್ ಕುಮಾರ್ ಮತ್ತು ಹೈದರಾಬಾದ್ ಮೂಲದ ಗುರ್ರಂ ಸತೀಶ್ ಅವರು ಬೆಟ್ಟಿಂಗ್ ಮೂಲಕ ಕಾನೂನು ಬಾಹಿರ ಹಣಕಾಸು ಚಟುವಟಿಕೆಗಳಲ್ಲಿ ತೊಡಗಿದ್ದಾರೆಂದು ಸಿಬಿಐ ಪತ್ತೆ ಮಾಡಿದೆ. ಈ ಇಬ್ಬರು ತಮ್ಮ ಸಹಚರರೊಂದಿಗೆ ಪಾಕಿಸ್ತಾನ ಮೂಲದ ಶಂಕಿತ ಆರೋಪಿ ವಕಾಸ್ ಮಲಿಕ್ ಜೊತೆ ಪಾಕಿಸ್ತಾನಿ ಫೋನ್ ನಂಬರ್ ಮೂಲಕ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.
ಇದೇ ಮಾದರಿಯ ಮತ್ತೊಂದು ಪ್ರಕರಣ ಸಂಬಂಧ ರಾಜಸ್ಥಾನ್ದ ನಿವಾಸಿಗಳಾದ ಸಜ್ಜನ್ ಸಿಂಗ್, ಪ್ರಭು ಲಾಲ್ ಮೀನಾ, ರಾಮ್ ಅವತಾರ್, ಅಮಿತ್ ಕುಮಾರ್ ಶರ್ಮಾ ಸೇರಿದಂತೆ ಅಪರಿಚಿತ ಬ್ಯಾಂಕ್ ಅಧಿಕಾರಿಗಳು ಮತ್ತು ಇತರ ಅಪರಿಚಿತ ಖಾಸಗಿ ವ್ಯಕ್ತಿಗಳನ್ನು ಕೇಂದ್ರೀಯ ತನಿಖಾ ದಳ(ಸಿಬಿಐ) ಬಂಧಿಸಿ ಎಫ್ಐಆರ್ ದಾಖಲಿಸಿದೆ ಎಂದು ತಿಳಿದುಬಂದಿದೆ.
ಸಾರ್ವಜನಿಕರನ್ನು ಬೆಟ್ಟಿಂಗ್ಗೆ ಪ್ರೇರೇಪಿಸುತ್ತಿದ್ದರು
ಸಂಸ್ಥೆಯು ತನ್ನ ಎಫ್ಐಆರ್ನಲ್ಲಿ ದೆಹಲಿಯ ರೋಹಿಣಿ ಮೂಲದ ದಿಲೀಪ್ ಕುಮಾರ್ ಮತ್ತು ಹೈದರಾಬಾದ್ನ ಗುರ್ರಂ ವಾಸು ಮತ್ತು ಗುರ್ರಂ ಸತೀಶ್ ಅವರನ್ನು ಆರೋಪಿಗಳೆಂದು ಪಟ್ಟಿ ಮಾಡಿದೆ. 2013 ರಿಂದ ಕಾರ್ಯನಿರ್ವಹಿಸುತ್ತಿರುವ ಈ ಬೆಟ್ಟಿಂಗ್ ಜಾಲ ಸಾರ್ವಜನಿಕರನ್ನು ಬೆಟ್ಟಿಂಗ್ಗೆ ಪ್ರೇರೇಪಿಸುವ ಮೂಲಕ ವಂಚನೆ ನಡೆಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ಮೊದಲಲ್ಲ!
ಐಪಿಎಲ್ ಲೀಗ್ನೊಂದಿಗೆ ಬುಕ್ಕಿಗಳು ಈ ರೀತಿ ಶಾಮೀಲಾಗಿರುವುದು ಬೆಳಕಿಗೆ ಬಂದಿರುವುದು ಇದೇ ಮೊದಲಲ್ಲ. ಕಳೆದ ತಿಂಗಳ ಆರಂಭದಲ್ಲಿ ಹೈದರಾಬಾದ್ ಪೊಲೀಸರು ಆನ್ಲೈನ್ ಕ್ರಿಕೆಟ್ ಬೆಟ್ಟಿಂಗ್ ರಾಕೆಟ್ ಅನ್ನು ಭೇದಿಸಿದ್ದರು. ಏಪ್ರಿಲ್ 5 ರಂದು ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ ವೇಳೆ ಬೆಟ್ಟಿಂಗ್ ನಡೆಸುತ್ತಿದ್ದ ಮಾಹಿತಿ ತಿಳಿದು ದಾಳಿ ನಡೆಸಿ ಏಳು ಜನರನ್ನು ಬಂಧಿಸಿದ್ದರು. ಅದೇ ರೀತಿ ಕಳೆದ ವರ್ಷ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ನ ಎನ್ಕೌಂಟರ್ ಸಂದರ್ಭದಲ್ಲಿ ಬೆಟ್ಟಿಂಗ್ನಲ್ಲಿ ಭಾಗಿಯಾಗಿದ್ದ ಇಬ್ಬರು ಭ್ರಷ್ಟಾಚಾರಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಇಬ್ಬರು ಬುಕ್ಕಿಗಳು ಅನುಮಾನಾಸ್ಪದ ವರ್ತನೆಯಿಂದಾಗಿ ಅಧಿಕಾರಿಗಳ ಕೈಗೆ ಸಿಕ್ಕಿಬೀಳುವ ಮೊದಲು ಕ್ರೀಡಾಂಗಣಕ್ಕೆ ಪ್ರವೇಶಿಸಲು ನಕಲಿ ಮಾನ್ಯತೆ ಕಾರ್ಡ್ಗಳನ್ನು ಬಳಸಿದ್ದರು.