ಭಾರತ- ನ್ಯೂಜಿಲೆಂಡ್ ಮೊದಲ ಟಿ 20 ಪಂದ್ಯ ಮಳೆಯಿಂದಾಗಿ ರದ್ದು; ಅಭಿಮಾನಿಗಳಿಗೆ ನಿರಾಸೆ!

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಸರಣಿಯ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. 
ಕೇನ್ ವಿಲಿಯಮ್ಸನ್-ಹಾರ್ದಿಕ್ ಪಾಂಡ್ಯ
ಕೇನ್ ವಿಲಿಯಮ್ಸನ್-ಹಾರ್ದಿಕ್ ಪಾಂಡ್ಯ

ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಸರಣಿಯ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. 

ಮಳೆಯಿಂದಾಗಿ ಟಾಸ್ ಕೂಡ ಸಾಧ್ಯವಾಗಲಿಲ್ಲ. ಸರಣಿಯ ಮುಂದಿನ ಟಿ20 ಪಂದ್ಯ ಭಾನುವಾರ ಮೌಂಟ್ ಮೌಂಗನುಯಿಯಲ್ಲಿ ನಡೆಯಲಿದೆ. ಈ ಪ್ರವಾಸದಲ್ಲಿ ಭಾರತ ಈಗ ಇನ್ನೂ ಎರಡು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಬೇಕಿದೆ. ಆಸ್ಟ್ರೇಲಿಯಾದಲ್ಲಿ ನಡೆದ T20 ವಿಶ್ವಕಪ್‌ನಿಂದ ಇತ್ತೀಚಿನ ಸೆಮಿಫೈನಲ್ ನಿರ್ಗಮನದ ನಂತರ ಎರಡೂ ತಂಡಗಳು ಈ ಸರಣಿಯಲ್ಲಿ ಹೊಸ ಆರಂಭವನ್ನು ಮಾಡಲು ಬಯಸುತ್ತಿವೆ.

ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಸೋಲು ಅನುಭವಿಸಬೇಕಾಯಿತು. ನ್ಯೂಜಿಲೆಂಡ್ ತಂಡವನ್ನು ರನ್ನರ್ ಅಪ್ ಪಾಕಿಸ್ತಾನ ತಂಡ ಸೋಲಿಸಿತು. ನಿಯಮಿತ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಅನುಭವಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಭಾರತ ಟಿ20 ತಂಡವನ್ನು ಮುನ್ನಡೆಸುತ್ತಿದ್ದರೆ, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಉಪನಾಯಕರಾಗಿದ್ದಾರೆ.

ಈ ಪ್ರವಾಸದಲ್ಲಿ ರೋಹಿತ್ ಹೊರತಾಗಿ, ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ಆರಂಭಿಕ ಆಟಗಾರ ಕೆಎಲ್ ರಾಹುಲ್‌ಗೆ ವಿಶ್ರಾಂತಿ ನೀಡಲಾಗಿದೆ. ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಶುಭಮನ್ ಗಿಲ್, ಉಮ್ರಾನ್ ಮಲಿಕ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್ ಅವರಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ಟಿ20 ವಿಶ್ವಕಪ್ ಬಳಿಕ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಇಡೀ ಕೋಚಿಂಗ್ ಸಿಬ್ಬಂದಿಗೂ ವಿಶ್ರಾಂತಿ ನೀಡಲಾಗಿದೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ಮತ್ತು ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಅವರನ್ನು ಈ ಪ್ರವಾಸಕ್ಕೆ ತಂಡದ ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ.

2024ರ ವಿಶ್ವಕಪ್‌ಗೆ ಭಾರತ ತಂಡ ತಯಾರಿ
2022ರ ಟಿ20 ವಿಶ್ವಕಪ್‌ನಲ್ಲಿ ನಿರಾಶಾದಾಯಕ ಪ್ರದರ್ಶನದ ನಂತರ, ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಇದೀಗ ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಮುಂದಿನ ವಿಶ್ವಕಪ್‌ಗೆ ತಯಾರಿ ಆರಂಭಿಸಿವೆ. ಎರಡು ವರ್ಷಗಳ ನಂತರ ಟೀಂ ಇಂಡಿಯಾದ ಅನೇಕ ಹಿರಿಯ ಅನುಭವಿ ಆಟಗಾರರು ಟಿ20 ತಂಡದಿಂದ ಹೊರಗುಳಿಯಬಹುದು. ಅಂತಹ ಪರಿಸ್ಥಿತಿಯಲ್ಲಿ, ಈಗ ತಂಡದ ಆಡಳಿತ ಮಂಡಳಿ ಮುಂದಿನ ವಿಶ್ವಕಪ್‌ಗೆ ಈಗಿನಿಂದಲೇ ಸಿದ್ಧತೆಯನ್ನು ಪ್ರಾರಂಭಿಸಲು ಪ್ರಯತ್ನಿಸುತ್ತದೆ.

ಅದಕ್ಕೂ ಮುನ್ನ ಮುಂದಿನ ವರ್ಷವೇ ಭಾರತದಲ್ಲಿ ಏಕದಿನ ವಿಶ್ವಕಪ್‌ ನಡೆಯಲಿದೆ. ಆ ಸಂದರ್ಭದಲ್ಲೂ ಟೀಂ ಇಂಡಿಯಾ ತನ್ನ ಸಿದ್ಧತೆಯನ್ನು ಇನ್ನಷ್ಟು ಬಲಿಷ್ಠ ಮಾಡಲು ಬಯಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com