ಟಿ20 ಕ್ರಿಕೆಟ್: ಕೊಹ್ಲಿ, ರೋಹಿತ್, ಧವನ್ ದಾಖಲೆ ಮುರಿದ ಪಾಕಿಸ್ತಾನದ ಬಾಬರ್ ಅಜಂ, ರಿಜ್ವಾನ್ ಜೋಡಿ
ಇಂಗ್ಲೆಂಡ್ ತಂಡದ ವಿರುದ್ಧ ನಡೆಯುತ್ತಿರುವ ಏಳು ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯ 2ನೇ ಪಂದ್ಯದಲ್ಲಿ, ಭರ್ಜರಿ ಜಯ ಗಳಿಸಿರುವ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಮತ್ತು ಮಹಮದ್ ರಿಜ್ವಾನ್ ದಾಖಲೆ ನಿರ್ಮಿಸಿದ್ದಾರೆ.
Published: 23rd September 2022 12:10 PM | Last Updated: 23rd September 2022 01:33 PM | A+A A-

ಬಾಬರ್ ಆಜಂ-ಮಹಮದ್ ರಿಜ್ವಾನ್ ಜೋಡಿ
ಕರಾಚಿ: ಇಂಗ್ಲೆಂಡ್ ತಂಡದ ವಿರುದ್ಧ ನಡೆಯುತ್ತಿರುವ ಏಳು ಪಂದ್ಯಗಳ ಟಿ20 ಕ್ರಿಕೆಟ್ ಸರಣಿಯ 2ನೇ ಪಂದ್ಯದಲ್ಲಿ, ಭರ್ಜರಿ ಜಯ ಗಳಿಸಿರುವ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಮತ್ತು ಮಹಮದ್ ರಿಜ್ವಾನ್ ದಾಖಲೆ ನಿರ್ಮಿಸಿದ್ದಾರೆ.
ನಾಯಕ ಬಾಬರ್ ಅಜಂ ಹಾಗೂ ಮೊಹಮ್ಮದ್ ರಿಜ್ವಾನ್ ತೋರಿದ ಅಮೋಘ ಬ್ಯಾಟಿಂಗ್ ಪ್ರದರ್ಶನದ ಬಲದಿಂದ ಪಾಕಿಸ್ತಾನ 10 ವಿಕೆಟ್ ಅಂತರದ ಜಯ ದಾಖಲಿಸಿದೆ. ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿತು. ನಾಯಕ ಮೋಯಿನ್ ಅಲಿ (ಅಜೇಯ 55 ರನ್) ಹಾಗೂ ಬೆನ್ ಡಕೆಟ್ (43 ರನ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 199 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಮೊತ್ತದೆದುರು ನಿರಾಯಾಸವಾಗಿ ಬ್ಯಾಟ್ ಬೀಸಿದ ಪಾಕಿಸ್ತಾನದ ಆರಂಭಿಕ ಜೋಡಿ, ಇನ್ನೂ ಮೂರು ಎಸೆತಗಳು ಬಾಕಿ ಇರುವಂತೆಯೇ 203 ರನ್ ಸಿಡಿಸಿತು.
ಇದನ್ನೂ ಓದಿ: ಲಾರೆನ್ಸ್ ಮೈದಾನದಲ್ಲಿ ಅಬ್ಬರಿಸಿದ ಹರ್ಮನ್ಪ್ರೀತ್ ಕೌರ್; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 88 ರನ್ ಗೆಲುವು
ಐಸಿಸಿ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ರಿಜ್ವಾನ್ 51 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 88 ರನ್ ಚಚ್ಚಿದರೆ, ನಾಯಕ ಬಾಬರ್ 66 ಎಸೆತಗಳಲ್ಲಿ 11 ಬೌಂಡರಿ ಮತ್ತು 5 ಸಿಕ್ಸರ್ ಸಹಿತ 110 ರನ್ ಬಾರಿಸಿದರು. ಹೀಗಾಗಿ ಪಾಕ್ 10 ವಿಕೆಟ್ ಜಯ ಗಳಿಸಿ, ಸರಣಿಯಲ್ಲಿ 1–1 ಅಂತರದಿಂದ ಸಮಬಲ ಸಾಧಿಸಿತು. ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಬಾಬರ್ ಆಜಂ ಮತ್ತು ರಿಜ್ವಾನ್ ಜೋಡಿ ಟಿ20 ಕ್ರಿಕೆಟ್ ಮಾದರಿಯಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದೆ.
ತಮ್ಮದೇ ದಾಖಲೆ ಮುರಿದ ಬಾಬರ್–ರಿಜ್ವಾನ್
ಇಂಗ್ಲೆಂಡ್ ವಿರುದ್ಧ ರಿಜ್ವಾನ್ ಹಾಗೂ ಬಾಬರ್ ಜೋಡಿ ಮುರಿಯದ ಮೊದಲ ವಿಕೆಟ್ ಜೊತೆಯಾಟದಲ್ಲಿ 203 ರನ್ ಕಲೆಹಾಕಿತು. ಇದು ಟಿ20 ಕ್ರಿಕೆಟ್‌ನಲ್ಲಿ ಗುರಿ ಬೆನ್ನಟ್ಟುವ ವೇಳೆ ಮೊದಲ ವಿಕೆಟ್ ಜೊತೆಯಾಟದಲ್ಲಿ ಮೂಡಿ ಬಂದ ಅತ್ಯುತ್ತಮ ಜೊತೆಯಾಟವಾಗಿದೆ. ಇದೇ ಜೋಡಿ 2021ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 197 ರನ್ ಗಳಿಸಿ ದಾಖಲೆ ಮಾಡಿತ್ತು. ಇದೀಗ ಆ ದಾಖಲೆಯನ್ನು ಮುರಿದಿದೆ.
ಇದನ್ನೂ ಓದಿ: ಭಾರತ-ಆಸ್ಟ್ರೇಲಿಯಾ ಟಿ20 ಪಂದ್ಯ ಟಿಕೆಟ್ ಖರೀದಿಗೆ ನೂಕುನುಗ್ಗಲು; ಕಾಲ್ತುಳಿತದಿಂದ ಹಲವರಿಗೆ ಗಾಯ
ಧವನ್–ರೋಹಿತ್ ದಾಖಲೆ ಹಿಂದಕ್ಕೆ
ಇದುವರೆಗೆ 36 ಇನಿಂಗ್ಸ್‌ಗಳಲ್ಲಿ ಒಟ್ಟಾಗಿ ಬ್ಯಾಟ್ ಬೀಸಿರುವ ಪಾಕಿಸ್ತಾನದ ರಿಜ್ವಾನ್–ಬಾಬರ್ 56.73ರ ಸರಾಸರಿಯಲ್ಲಿ 1929 ರನ್ ಕಲೆಹಾಕಿದ್ದಾರೆ. ಇದರಲ್ಲಿ 7 ಶತಕ ಮತ್ತು 6 ಅರ್ಧಶತಕದ ಜೊತೆಯಾಟಗಳಿವೆ. ಬೇರೆ ಯಾವುದೇ ಜೋಡಿ ಯಾವುದೇ ವಿಕೆಟ್ ಜೊತೆಯಾಟದಲ್ಲಿ ಇಷ್ಟು ರನ್ ಕೆಲಹಾಕಿಲ್ಲ. ಭಾರತದ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಜೋಡಿ ಎರಡನೇ ಸ್ಥಾನದಲ್ಲಿದ್ದು, 52 ಇನಿಂಗ್ಸ್‌ಗಳಿಂದ 33.51ರ ಸರಾಸರಿಯಲ್ಲಿ 1743 ರನ್ ಗಳಿಸಿದೆ.
ವೇಗವಾಗಿ 8 ಸಾವಿರ; ಕೊಹ್ಲಿ ಹಿಂದಿಕ್ಕಿದ ಬಾಬರ್
27 ವರ್ಷದ ಬಾಬರ್ ಅಜಂ ಚುಟುಕು ಕ್ರಿಕೆಟ್‌ನಲ್ಲಿ ಇದುವರೆಗೆ 218 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿದ್ದು, 8 ಸಾವಿರ ರನ್ ಕೆಲಹಾಕಿದ್ದಾರೆ. ಇದರೊಂದಿಗೆ ವೇಗವಾಗಿ 8 ಸಾವಿರ ರನ್ ಕಲೆಹಾಕಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಭಾರತ ಕ್ರಿಕೆಟ್ ತಂಡದ ರನ್ ಯಂತ್ರ ವಿರಾಟ್ ಕೊಹ್ಲಿ ಇಷ್ಟು ರನ್ ಗಳಿಸಲು 243 ಇನಿಂಗ್ಸ್ ಆಡಿದ್ದರು. ಈ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ (213 ಇನಿಂಗ್ಸ್) ಮೊದಲ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ಮೊದಲ ಟಿ20 ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾಗೆ ಭರ್ಜರಿ ಜಯ
ಕೊಹ್ಲಿಯ ಮತ್ತೊಂದು ದಾಖಲೆ ಮೇಲೆ ಬಾಬರ್ ಕಣ್ಣು
ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 3 ಸಾವಿರ ರನ್ ಗಳಿಸಿದ ದಾಖಲೆ ಸದ್ಯ ವಿರಾಟ್ ಹೆಸರಿನಲ್ಲಿದೆ. ಕೊಹ್ಲಿ ತಮ್ಮ 87 ಪಂದ್ಯಗಳ 81 ಇನಿಂಗ್ಸ್‌ಗಳಲ್ಲಿ 3,000 ರನ್ ಗಳಿಸಿದ್ದರು. ಬಾಬರ್ ಅಜಂ ಒಟ್ಟು 82 ಪಂದ್ಯಗಳ 77 ಇನಿಂಗ್ಸ್‌ಗಳಲ್ಲಿ 2,895 ರನ್ ಗಳಿಸಿದ್ದಾರೆ. ಹೀಗಾಗಿ ಅವರು ತಾವಾಡುವ ಮುಂದಿನ ನಾಲ್ಕು ಪಂದ್ಯಗಳಲ್ಲಿ 105 ರನ್ ಗಳಿಸಿದರೆ, ಕೊಹ್ಲಿ ದಾಖಲೆಯನ್ನು ಮುರಿಯಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಇನ್ನೂ ಐದು ಪಂದ್ಯಗಳು ಬಾಕಿ ಇವೆ. ಮೂರು ಮತ್ತು ನಾಲ್ಕನೇ ಪಂದ್ಯ ಕರಾಚಿಯಲ್ಲಿ ಹಾಗೂ ಉಳಿದ ಪಂದ್ಯಗಳು ಲಾಹೋರ್‌ನಲ್ಲಿ ನಡೆಯಲಿವೆ.
ಟಿ20ಯಲ್ಲಿ ಅತಿ ಹೆಚ್ಚು ರನ್; ಐದನೇ ಸ್ಥಾನಕ್ಕೆ ಬಾಬರ್
ಚುಟುಕು ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರನ್ ಫಿಂಚ್ ಅವರನ್ನು ಹಿಂದಿಕ್ಕಿ ಬಾಬರ್ ಅಜಂ 5ನೇ ಸ್ಥಾನಕ್ಕೇರಿದ್ದಾರೆ. ಫಿಂಚ್ 93 ಪಂದ್ಯಗಳಲ್ಲಿ 2,877 ರನ್ ಗಳಿಸಿದ್ದಾರೆ. ಭಾರತದವರಾದ ರೋಹಿತ್ ಶರ್ಮಾ (3,631), ವಿರಾಟ್ ಕೊಹ್ಲಿ (3,586), ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ (3,497) ಮತ್ತು ಐರ್ಲೆಂಡ್‌ನ ಪೌಲ್ ಸ್ಟರ್ಲಿಂಗ್ (3,011) ಕ್ರಮವಾಗಿ ಮೊದಲ ನಾಲ್ಕು ಸ್ಥಾನಗಳಲ್ಲಿ ಇದ್ದಾರೆ.
ರಿಜ್ವಾನ್ 2 ಸಾವಿರ ರನ್
ಇಂಗ್ಲೆಂಡ್ ವಿರುದ್ಧ ಅಮೋಘ ಅರ್ಧಶತಕ ಸಿಡಿಸಿದ ಮೊಹಮ್ಮದ್ ರಿಜ್ವಾನ್ ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 2 ಸಾವಿರ ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ತಮ್ಮದೇ ತಂಡದ ನಾಯಕ ಬಾಬರ್ ಅಜಂ ಜೊತೆ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ. ಈ ಇಬ್ಬರೂ ತಲಾ 52 ಇನಿಂಗ್ಸ್‌ಗಳಲ್ಲಿ ಎರಡು ಸಹಸ್ರ ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಭಾರತದ ಕೊಹ್ಲಿ ಮತ್ತು ಕೆ.ಎಲ್.ರಾಹುಲ್ ನಂತರದ ಸ್ಥಾನಗಳಲ್ಲಿ ಇದ್ದಾರೆ. ಕೊಹ್ಲಿ 52 ಇನಿಂಗ್ಸ್‌ಗಳಲ್ಲಿ ಮತ್ತು ರಾಹುಲ್ 56 ಇನಿಂಗ್ಸ್‌ಗಳಲ್ಲಿ ಎರಡು ಸಾವಿರ ರನ್ ಗಳಿಸಿದ್ದರು.