T20I: ಒಂದೇ ಪಂದ್ಯದಲ್ಲಿ ಭಾರತದ ಸೂರ್ಯ ಕುಮಾರ್ ಯಾದವ್ ಎರಡು ವಿಶ್ವ ದಾಖಲೆ

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅಬ್ಬರದ ಅರ್ಧಶತಕ ಸಿಡಿಸಿದ ಟೀಂ ಇಂಡಿಯಾ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಒಂದೇ ಪಂದ್ಯದಲ್ಲಿ ಎರಡೆರಡು ದಾಖಲೆ ಬರೆದಿದ್ದಾರೆ.
ಸೂರ್ಯ ಕುಮಾರ್ ಯಾದವ್
ಸೂರ್ಯ ಕುಮಾರ್ ಯಾದವ್

ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅಬ್ಬರದ ಅರ್ಧಶತಕ ಸಿಡಿಸಿದ ಟೀಂ ಇಂಡಿಯಾ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಒಂದೇ ಪಂದ್ಯದಲ್ಲಿ ಎರಡೆರಡು ದಾಖಲೆ ಬರೆದಿದ್ದಾರೆ.

ಹೌದು..ತಿರುವನಂತಪುರದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಗುರುವಾರ ನಡೆದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಸೂರ್ಯಕುಮಾರ್ ಸ್ಮರಣೀಯ ಸಾಧನೆ ಮಾಡಿದ್ದು, ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕ್ಯಾಲೆಂಡರ್ ವರ್ಷವೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆಗೆ ಭಾಜನರಾಗಿದ್ದಾರೆ. 

ಸೂರ್ಯಕುಮಾರ್ ಅಜೇಯ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದ ಮಹತ್ವದ ಮುನ್ನಡೆ ಕಾಯ್ದುಕೊಂಡಿದೆ. 33 ಎಸೆತಗಳನ್ನು ಎದುರಿಸಿದ ಸೂರ್ಯ ಐದು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 50 ರನ್ ಗಳಿಸಿ ಔಟಾಗದೆ ಉಳಿದರು. ಪ್ರಸಕ್ತ ಸಾಲಿನ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸೂರ್ಯಕುಮಾರ್ ಈವರೆಗೆ ಆಡಿರುವ 21 ಪಂದ್ಯಗಳಲ್ಲಿ 40.66ರ ಸರಾಸರಿಯಲ್ಲಿ 732 ರನ್ ಪೇರಿಸಿದ್ದಾರೆ. ಈ ಮೂಲಕ ಶಿಖರ್ ಧವನ್ ದಾಖಲೆ ಮುರಿದಿದ್ದಾರೆ. 2018ರಲ್ಲಿ ಧವನ್ 18 ಪಂದ್ಯಗಳಲ್ಲಿ 40.52ರ ಸರಾಸರಿಯಲ್ಲಿ 689 ರನ್ ಗಳಿಸಿದ್ದರು.

ಇನ್ನು ಭಾರತೀಯರ ಪೈಕಿ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ 2016ರಲ್ಲಿ 15 ಪಂದ್ಯಗಳಲ್ಲಿ 106.83ರ ಸರಾಸರಿಯಲ್ಲಿ 641 ರನ್ ಗಳಿಸಿದ್ದರು. ನಾಯಕ ರೋಹಿತ್ ಶರ್ಮಾ 2018ರಲ್ಲಿ 19 ಪಂದ್ಯಗಳಲ್ಲಿ 36.87ರ ಸರಾಸರಿಯಲ್ಲಿ 590 ರನ್ ಗಳಿಸಿದ್ದರು.

ಒಟ್ಟಾರೆಯಾಗಿ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್, ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕ್ಯಾಲೆಂಡರ್ ವರ್ಷದಲ್ಲಿ 1,000ಕ್ಕೂ ಹೆಚ್ಚು ರನ್ ಗಳಿಸಿದ ಏಕಮಾತ್ರ ಬ್ಯಾಟರ್ ಎನಿಸಿದ್ದಾರೆ. ರಿಜ್ವಾನ್ 2021ರಲ್ಲಿ 73.66 ಸರಾಸರಿಯಲ್ಲಿ 1,326 ರನ್ ಗಳಿಸಿದ್ದರು. ಪಾಕಿಸ್ತಾನದ ನಾಯಕ ಬಾಬರ್ ಆಜಂ ಕೂಡ ಅದೇ ಸಾಲಿನಲ್ಲಿ 29 ಪಂದ್ಯಗಳಲ್ಲಿ 37.56ರ ಸರಾಸರಿಯಲ್ಲಿ 939 ರನ್ ಗಳಿಸಿದ್ದರು. ಈ ಮೂಲಕ ಸಾರ್ವಕಾಲಿಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಪಾಕ್ ತಾರೆಯನ್ನು ಹಿಂದಿಕ್ಕಿದ ಸೂರ್ಯ ಕುಮಾರ್ ಯಾದವ್
ಇನ್ನು ಪಾಕಿಸ್ತಾನದ ರಿಜ್ವಾನ್ ಹಿಂದಿಕ್ಕಿರುವ ಸೂರ್ಯಕುಮಾರ್, ಕ್ಯಾಲೆಂಡರ್ ವರ್ಷವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್ ಎನಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಸೂರ್ಯ ಈವರೆಗೆ 45 ಸಿಕ್ಸರ್ ಸಿಡಿಸಿದ್ದು, ಅಗ್ರಸ್ಥಾನದಲ್ಲಿದ್ದಾರೆ. ಕಳೆದ ವರ್ಷ ರಿಜ್ವಾನ್, 42 ಸಿಕ್ಸರ್ ಬಾರಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com