1960 ರ ದಶಕದ ಸ್ಟಾರ್​ ಕ್ರಿಕೆಟಿಗ ಸಲೀಂ ದುರಾನಿ ನಿಧನ

1960ರ ದಶಕದಲ್ಲಿ ಭಾರತದ ಸ್ಟಾರ್​ ಕ್ರಿಕೆಟಿಗರಾಗಿದ್ದ ಸಲೀಂ ದುರಾನಿ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.
ಸಲೀಂ ದುರಾನಿ ನಿಧನ
ಸಲೀಂ ದುರಾನಿ ನಿಧನ

ನವದೆಹಲಿ: 1960ರ ದಶಕದಲ್ಲಿ ಭಾರತದ ಸ್ಟಾರ್​ ಕ್ರಿಕೆಟಿಗರಾಗಿದ್ದ ಸಲೀಂ ದುರಾನಿ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.

ದುರಾನಿ ಅವರು  ದೀರ್ಘಕಾಲಿನ ಕಾಯಿಲೆಯಿಂದ ಇಂದು ಬೆಳಗ್ಗೆ ನಿಧನ ಹೊಂದಿದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಆಲ್​ರೌಂಡರ್​ ಕ್ರಿಕೆಟಿಗರಾಗಿದ್ದ ದುರಾನಿ ಅವರು ಬಾಲಿವುಡ್​ ಸಿನಿಮಾದಲ್ಲೂ ನಟಿಸಿದ್ದಾರೆ. 1934ರ ಡಿಸೆಂಬರ್​ 11ರಂದು ಅಫ್ಘಾನಿಸ್ತಾನದ ಕಾಬೂಲ್​ನಲ್ಲಿ ಜನಿಸಿದ್ದ ಸಲೀಂ ದುರಾನಿ, ಈಗ ಗುಜರಾತ್​​ನ ಜಮ್ನಾಗರ್​​ದಲ್ಲಿ ತಮ್ಮ ಸಹೋದರ ಜಹಾಂಗೀರ್​ ದುರಾನಿಯೊಂದಿಗೆ ವಾಸವಾಗಿದ್ದರು. ಈ ವರ್ಷದ ಜನವರಿಯಲ್ಲಿ ಕುಸಿದು ಬಿದ್ದು ತೊಡೆಯ ಮೂಳೆ ಮುರಿತಕ್ಕೆ ಒಳಗಾಗಿದ್ದರು. ಪ್ರಾಕ್ಸಿಮಲ್ ತೊಡೆ ಎಲುಬಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 

ಕಾಬೂಲ್ ಮೂಲದ ದುರಾನಿ ಭಾರತ ತಂಡದಲ್ಲಿ ಬ್ಯಾಟ್​ ಮತ್ತು ಬೌಲಿಂಗ್​ನಿಂದಲೇ ಖ್ಯಾತಿ ಗಳಿಸಿದ್ದರು. ಎಡಗೈ ಬೌಲರ್ ಆಗಿದ್ದ ಸಲೀಂ, ಟೀಂ ಇಂಡಿಯಾ ಪರವಾಗಿ 29 ಟೆಸ್ಟ್‌ಗಳನ್ನು ಆಡಿದ್ದು, 1961- 62 ರಲ್ಲಿ ಇಂಗ್ಲೆಂಡ್​ ವಿರುದ್ಧ ನಡೆದ 5 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಅಂತರದಲ್ಲಿ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಟೆಸ್ಟ್ ಸರಣಿಯ ಐತಿಹಾಸಿಕ ಗೆಲುವಿನಲ್ಲಿ ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ನಡೆದ ಪಂದ್ಯಗಳಲ್ಲಿ ಸಲೀಂ ಕ್ರಮವಾಗಿ 8 ಮತ್ತು 10 ವಿಕೆಟ್‌ಗಳನ್ನು ಪಡೆದಿದ್ದರು. ಇದು ಭಾರತ 2-0 ಅಂತರದಲ್ಲಿ ಇಂಗ್ಲೆಂಡ್ ವಿರುದ್ಧ ಗೆಲ್ಲಲು ಕಾರಣವಾಗಿತ್ತು.

ದೇಶದ ಪರವಾಗಿ ಆಡಿದ 50 ಇನ್ನಿಂಗ್ಸ್‌ ಪೈಕಿ 7 ಅರ್ಧಶತಕ, ಒಂದು ಶತಕ ಬಾರಿಸಿರುವ ಸಲೀಂ ದುರಾನಿ 1,202 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಐತಿಹಾಸಿಕ ವಿಜಯದ ಒಂದು ದಶಕದ ನಂತರ, ಪೋರ್ಟ್ ಆಫ್ ಸ್ಪೇನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಂಡವನ್ನು ಗೆಲ್ಲಿಸುವಲ್ಲಿ ಶ್ರಮ ವಹಿಸಿದ್ದರು. ಅಂದಿನ ದೈತ್ಯ ದಂತಕಥೆಗಳಾದ ಕ್ಲೈವ್ ಲಾಯ್ಡ್ ಮತ್ತು ಸರ್ ಗಾರ್ಫೀಲ್ಡ್ ಸೋಬರ್ಸ್ ಇಬ್ಬರನ್ನೂ ಪಂದ್ಯದಲ್ಲಿ ಔಟ್​​ ಮಾಡಿದ್ದರು. ಇದಲ್ಲದೇ, ಸಲೀಂ ಅವರು ಉತ್ತಮ ಡ್ರೆಸ್ಸಿಂಗ್ ಶೈಲಿ ಮತ್ತು ಭಂಗಿಗೆ ಹೆಸರುವಾಸಿಯಾದ್ದರು. 

ಸಲೀಂ ದುರಾನಿ ಅವರು 1960ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದು 1960ರಲ್ಲಿ. 1961-62ರಲ್ಲಿ ಭಾರತ-ಇಂಗ್ಲೆಂಡ್​ ನಡುವೆ ನಡೆದಿದ್ದ ಟೆಸ್ಟ್​ ಮ್ಯಾಚ್​​ನಲ್ಲಿ ಹಿರೋ ಆಗಿ ಹೊರಹೊಮ್ಮಿದ್ದರು. ಕೋಲ್ಕತ್ತದಲ್ಲಿ ನಡೆದ ಪಂದ್ಯದಲ್ಲಿ 8 ವಿಕೆಟ್​ ಮತ್ತು ಚೆನ್ನೈನಲ್ಲಿ ನಡೆದ ಪಂದ್ಯಾವಳಿಯಲ್ಲಿ 10 ವಿಕೆಟ್​ ಪಡೆದಿದ್ದರು. ಭಾರತ ಭರ್ಜರಿಯಾಗಿ ಗೆದ್ದಿತ್ತು. ಅದಾಗಿ ದಶಕಗಳ ನಂತರ ಸ್ಪೇನ್​​ನಲ್ಲಿ, ವೆಸ್ಟ್ ಇಂಡೀಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲೂ ಭಾರತ ಮೊದಲ ಬಾರಿಗೆ ಗೆಲುವು ಸಾಧಿಸುವಲ್ಲಿ ದುರಾನಿ ಪಾತ್ರ ದೊಡ್ಡದಿತ್ತು. ಇವರೊಬ್ಬ ಸ್ಟಾರ್​ ಕ್ರಿಕೆಟರ್ ಎನ್ನಿಸಿಕೊಂಡಿದ್ದರು. 1973 ರಲ್ಲಿ ಬಾಲಿವುಡ್​ನ ಚರಿತ್ರಾ ಸಿನಿಮಾದಲ್ಲಿ ಹೆಸರಾಂತ ನಟ ಪ್ರವೀಣ್ ಬಾಬಿ ಜೊತೆ ನಟಿಸಿದ್ದರು. ಈ ಮೂಲಕ ಬಾಲಿವುಡ್​ಗೂ ಎಂಟ್ರಿ ಕೊಟ್ಟಿದ್ದರು.

ಪ್ರಧಾನಿ ನರೇಂದ್ರ ಮೋದಿ ಸಂತಾಪ
ಸಲೀಂ ದುರಾನಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದು, ಸಲೀಂ ದುರಾನಿಯವರು ಮೊದಲಿನಿಂದಲೂ ಗುಜರಾತ್​ ಜತೆಗೆ ಗಟ್ಟಿಯಾದ ಒಡನಾಟ ಹೊಂದಿದ್ದರು. ಅವರು ಗುಜರಾತ್​ ಮತ್ತು ಸೌರಾಷ್ಟ್ರ ಪರ ಆಟವಾಡಿದ್ದರು. ಬಳಿಕ ಗುಜರಾತ್​​ನಲ್ಲೇ ನೆಲೆಸಿದ್ದರು. ನನಗೂ ಅವರೊಂದಿಗೆ ಮಾತನಾಡುವ ಅವಕಾಶ ಸಿಕ್ಕಿತ್ತು. ಅವರ ಬಹುಮುಖ ವ್ಯಕ್ತಿತ್ವದಿಂದ ನಾನು ಪ್ರಭಾವಿತನಾಗಿದ್ದೇನೆ. ಅವರ ಅಗಲುವಿಕೆ ಕಾಡುತ್ತದೆ. ಸಲೀಂ ದುರಾನಿ ಜೀ ಅವರು ಕ್ರಿಕೆಟ್​​ನ ದಂತಕಥೆ. ಅವರೇ ಒಬ್ಬ ಇನ್​ಸ್ಟಿಟ್ಯೂಶನ್​ ಆಗಿದ್ದರು. ಕ್ರಿಕೆಟ್​ ಜಗತ್ತಿನಲ್ಲಿ ಭಾರತ ಬೆಳೆಯಲು ಮಹತ್ವದ ಕೊಡುಗೆ ಕೊಟ್ಟಿದ್ದಾರೆ. ಇನ್ನು ಕ್ರಿಕೆಟ್​ ಫೀಲ್ಡ್​ನಲ್ಲಿ ಇರಬಹುದು, ಆಚೆಗೆ ಇರಬಹುದು ತಮ್ಮದೇ ಆದ ಒಂದು ಸ್ಟೈಲ್​ ಹೊಂದಿದ್ದರು. ಅವರ ಸಾವು ನೋವು ತಂದಿದೆ. ಸಲೀಂ ದುರಾನಿ ಆತ್ಮ ಶಾಂತಿಯಲ್ಲಿ ನೆಲೆಸಲಿ ಎಂದು ಟ್ವೀಟ್ ಮಾಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com