
ಸುನಿಲ್ ಗವಾಸ್ಕರ್
ಮುಂಬೈ: ಬ್ಯಾಟಿಂಗ್ ಲೆಜೆಂಡ್ ಸುನಿಲ್ ಗವಾಸ್ಕರ್, ಐಪಿಎಲ್ ನಲ್ಲಿ ಈ ವರೆಗಿನ ಅತ್ಯುತ್ತಮ ನಾಯಕನ ಬಗ್ಗೆ ಮಾತನಾಡಿದ್ದಾರೆ. ಅವರಂತಹ ನಾಯಕ ಈ ಹಿಂದೆ ಇರಲಿಲ್ಲ. ಮುಂದೆಯೂ ಇರುವುದಕ್ಕೆ ಸಾಧ್ಯವಿಲ್ಲ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಸಿಎಸ್ ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಸುನಿಲ್ ಗವಾಸ್ಕರ್ ಮಾತನಾಡಿದ್ದು, ಎಂಎಸ್ ಧೋನಿ ಅವರಂತಹ ನಾಯಕ ಐಪಿಎಲ್ ಇತಿಹಾಸ ಹಾಗೂ ಭವಿಷ್ಯದಲ್ಲಿ ಯಾರೂ ಇಲ್ಲ ಎಂದು ಬಣ್ಣಿಸಿದ್ದಾರೆ. ಏಪ್ರಿಲ್ 12 ರಂದು ಚೆನ್ನೈ ನಲ್ಲಿ ನಡೆದ ರಾಜಸ್ಥಾನ ರಾಯಲ್ಸ್- ಸಿಎಸ್ ಕೆ ಪಂದ್ಯದ ಮೂಲಕ ಧೋನಿ ನಾಯಕನಾಗಿ 200ನೇ ಪಂದ್ಯ ಪೂರ್ಣಗೊಳಿಸಿದ್ದರು.
ಐಪಿಎಲ್ ಇತಿಹಾಸದಲ್ಲಿ ಇಂತಹ ಸಾಧನೆ ಮಾಡಿದ ಮೊದಲ ಕ್ರಿಕೆಟ್ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಪಾತ್ರರಾಗಿದ್ದಾರೆ.
ಸಿಎಸ್ ಕೆಗೆ ಸವಾಲಿನ ಪರಿಸ್ಥಿತಿಗಳಿಂದ ಹೇಗೆ ಹೊರಬರಬೇಕೆಂಬುದು ತಿಳಿದಿದೆ. ಇದು ಸಾಧ್ಯವಾಗಿದ್ದು ಎಂಎಸ್ ಧೋನಿ ನಾಯಕತ್ವದಲ್ಲಿ. 200 ಪಂದ್ಯಗಳ ನಾಯಕತ್ವ ವಹಿಸುವುದು ಸವಾಲಿನ ಸಂಗತಿ. ಹಲವಾರು ಪಂದ್ಯಗಳ ನಾಯಕತ್ವವನ್ನು ನಿಭಾಯಿಸುವುದು ಒಂದು ಹೊರೆಯಾಗಿದೆ ಮತ್ತು ಇದು ಅವರ ಪ್ರದರ್ಶನದ ಮೇಲೂ ಪರಿಣಾಮ ಬೀರಬಹುದು, ಆದರೆ ಮಹೇಂದ್ರ ಸಿಂಗ್ ಧೋನಿ ವಿಭಿನ್ನ ನಾಯಕ. ಅವರಂತಹ ನಾಯಕ ಹಿಂದೆ ಇರಲಿಲ್ಲ. ಮುಂದೆ ಬರುವುದಕ್ಕೂ ಸಾಧ್ಯವಿಲ್ಲ ಎಂದು ಸ್ವತಃ ಭಾರತದ ಮಾಜಿ ನಾಯಕ ಗವಾಸ್ಕರ್ ಹೇಳಿದ್ದಾರೆ.
ಇದನ್ನೂ ಓದಿ: ಸೌರವ್ ಗಂಗೂಲಿ ವಿರಾಟ್ ಕೊಹ್ಲಿಗೆ 'ಕೈ'ಕೊಡಲು ನಿರಾಕರಿಸಿದ್ರಾ? ವಿಡಿಯೋ ನೋಡಿ!
ಐಪಿಎಲ್ ಪ್ರಾರಂಭದ ದಿನಗಳಿಂದಲೂ (2016-17) ಹೊರತುಪಡಿಸಿ ಸಿಎಸ್ ಕೆಗೆ ಧೋನಿ ನಾಯಕತ್ವ ವಹಿಸಿದ್ದರು. 2016 ರಲ್ಲಿ 14 ಪಂದ್ಯಗಳಲ್ಲಿ ಧೋನಿ ನಾಯಕತ್ವ ಪುಣೆ ತಂಡಕ್ಕೆ ಲಭಿಸಿತ್ತು. ಇದನ್ನೂ ಪರಿಗಣಿಸಿದರೆ ಧೋನಿ ನಾಯಕತ್ವ ವಹಿಸಿದ ಪಂದ್ಯಗಳು 214 ಆಗಲಿವೆ.
ಧೋನಿ ನಾಯಕತ್ವದಲ್ಲಿ ಸಿಎಸ್ ಕೆ 4 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರೆ, 120 ಪಂದ್ಯಗಳನ್ನು ಗೆದ್ದಿದ್ದು 79 ರಲ್ಲಿ ಸೋಲು ಕಂಡಿದೆ. ಗವಾಸ್ಕರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಬಗ್ಗೆಯೂ ಮಾತನಾಡಿದ್ದು, ಈ ಐಪಿಎಲ್ ಸೀಸನ್ ನ ಇದುವರೆಗಿನ ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಉತ್ತಮ ಆರಂಭವನ್ನು ನೀಡಿದ್ದಕ್ಕಾಗಿ ಕೊಹ್ಲಿಯನ್ನು ಹೊಗಳಿದ್ದಾರೆ.
"ವಿರಾಟ್ ಕೊಹ್ಲಿ ಇನ್ನಿಂಗ್ಸ್‌ನ ಆರಂಭದಲ್ಲಿ ಆರ್‌ಸಿಬಿಗೆ ಅತ್ಯುತ್ತಮ ಆರಂಭವನ್ನು ನೀಡುತ್ತಿದ್ದಾರೆ ಇದು ಆರ್‌ಸಿಬಿಗೆ ಉತ್ತಮ ಸಂಕೇತವಾಗಿದೆ" ಎಂದು ಹೇಳಿದ್ದಾರೆ.