ಐಸಿಸಿ ಟಿ20 ವಿಶ್ವಕಪ್: ಭಾರತಕ್ಕೆ ಗೆಲ್ಲಲು 150 ರನ್ ಗಳ ಸವಾಲಿನ ಗುರಿ ನೀಡಿದ ಪಾಕ್ ಮಹಿಳಾ ತಂಡ

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಇಂದಿನ ಹೈ ವೋಲ್ಟೇಜ್ ಪಂದ್ಯದಲ್ಲಿ ಭಾರತಕ್ಕೆ ಪಾಕಿಸ್ತಾನ ಮಹಿಳಾ ತಂಡ ಗೆಲ್ಲಲು ಸವಾಲಿನ ಗುರಿ ನೀಡಿದೆ.
ಭಾರತ vs ಪಾಕಿಸ್ತಾನ ಪಂದ್ಯ
ಭಾರತ vs ಪಾಕಿಸ್ತಾನ ಪಂದ್ಯ

ಕೇಪ್ಟೌನ್: ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಇಂದಿನ ಹೈ ವೋಲ್ಟೇಜ್ ಪಂದ್ಯದಲ್ಲಿ ಭಾರತಕ್ಕೆ ಪಾಕಿಸ್ತಾನ ಮಹಿಳಾ ತಂಡ ಗೆಲ್ಲಲು ಸವಾಲಿನ ಗುರಿ ನೀಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಮಹಿಳಾ ತಂಡ ಆರಂಭಿಕ ಆಘಾತದ ಹೊರತಾಗಿಯೂ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 149ರನ್ ಪೇರಿಸಿ ಭಾರತ ಮಹಿಳಾ ತಂಡಕ್ಕೆ ಗೆಲ್ಲಲು 150ರನ್ ಗಳ ಸವಾಲಿನ ಗುರಿ ನೀಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಪಾಕಿಸ್ತಾನಕ್ಕೆ ಭಾರತ ಬೌಲರ್ ದೀಪ್ತಿ ಶರ್ಮಾ ಆರಂಭಿಕ ಆಘಾತ ನೀಡಿದರು. 8 ರನ್ ಗಳಿಸಿ ಆಗಷ್ಟೇ ಕ್ರೀಸ್ ನಲ್ಲಿ ನೆಲೆಯೂರುವ ಪ್ರಯತ್ನ ಮಾಡುತ್ತಿದ್ದ ಪಾಕಿಸ್ತಾನದ ಆರಂಭಿಕ ಆಟಗಾರ್ತಿ ಜವೇರಿಯಾ ಖಾನ್ ರನ್ನು ಔಟ್ ಮಾಡಿ ಪೆವಿಲಿಯನ್ ಗೆ ಅಟ್ಟಿದರು. ನಂತರ ನಾಯಕಿ ಮಿಸ್ಮಾ ಮರೂಫ್ ಜೊತೆಗೂಡಿದ ಮುನೀಬಾ ಅಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರೂ, 12 ರನ್ ಗಳಿಸಿದ್ದ ಮುನೀಬಾ ಅಲಿ ಭಾರತದ ರಾಧಾ ಯಾದವ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು.

ಇದರ ಬೆನ್ನಲ್ಲೇ ಪಾಕಿಸ್ತಾನದ ಮಧ್ಯಮ ಕ್ರಮಾಂಕದ ಆಟಗಾರ್ತಿ ನಿಡಾ ದಾರ್ ಶೂನ್ಯಕ್ಕೆ ಔಟಾಗಿದ್ದು ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಈ ಹೊಡೆತದಿಂದ ಚೇತರಿಸಿಕೊಳ್ಳುವ ಹೊತ್ತಿನಲ್ಲೇ ರಾಧಾ ಯಾದವ್ ಪಾಕಿಸ್ತಾನಕ್ಕೆ ಮತ್ತೊಂದು ಆಘಾತ ನೀಡಿ ಅಮೀನ್ ರನ್ನು ಔಟ್ ಮಾಡಿದರು. ಆದರೆ ಬಳಿಕ ನಾಯಕಿ ಮಿಸ್ಮಾ ಮರೂಫ್ ಜೊತೆಗೂಡಿದ ಆಯೇಷಾ ನಸೀಮ್ ಯಾವುದೇ ಅಪಾಯಕ್ಕೆ ಎಡೆ ಮಾಡಿಕೊಡದೇ ಉತ್ತಮ ಜೊತೆಯಾಟವಾಡಿದರು. 

ಈ ಜೋಡಿ ಮುರಿಯದ 5ನೇ ವಿಕೆಟ್ ಗೆ 81 ರನ್ ಗಳ ಅಮೋಘ ಜೊತೆಯಾಟವಾಡಿತು. ನಾಯಕಿ ಮಿಸ್ಮಾ ಮರೂಫ್ 55 ಎಸೆತಗಳಲ್ಲಿ ಅಜೇಯ 68 ರನ್ ಗಳಿಸಿದರೆ, ಆಯೇಷಾ ನಸೀಮ್ ಕೇವಲ 25 ಎಸೆತಗಳಲ್ಲಿ ಅಜೇಯ 43 ರನ್ ಗಳಿಸಿದರು. ಅಂತಿಮವಾಗಿ ಪಾಕಿಸ್ತಾನ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 149ರನ್ ಪೇರಿಸಿತು. ಭಾರತದ ಪರ ರಾಧಾ ಯಾದವ್ 2 ವಿಕೆಟ್ ಪಡೆದರೆ, ದೀಪ್ತಿ ಶರ್ಮಾ ಮತ್ತು ಪೂಜಾ ವಸ್ತ್ರಾಕರ್ ತಲಾ 1 ವಿಕೆಟ್ ಪಡೆದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com