ಐಪಿಎಲ್ ಬೆನ್ನಲ್ಲೇ 2ನೇ ಇನ್ನಿಂಗ್ಸ್ ಆರಂಭಿಸಿದ ರುತುರಾಜ್ ಗಾಯಕ್ವಾಡ್, ಮಹಿಳಾ ಕ್ರಿಕೆಟರ್ ಉತ್ಕರ್ಷ ಪವಾರ್ ಜೊತೆ ವಿವಾಹ!
ಚೆನ್ನೈ ಸೂಪರ್ ಕಿಂಗ್ಸ್ ಸ್ಟಾರ್ ಆಟಗಾರ ರುತುರಾಜ್ ಗಾಯಕ್ವಾಡ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಆ ಮೂಲಕ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.
Published: 04th June 2023 10:11 PM | Last Updated: 05th June 2023 06:18 PM | A+A A-

ರುತುರಾಜ್ ಗಾಯಕ್ವಾಡ್ ವಿವಾಹ
ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ಸ್ಟಾರ್ ಆಟಗಾರ ರುತುರಾಜ್ ಗಾಯಕ್ವಾಡ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಆ ಮೂಲಕ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುವ ಆರಂಭಿಕ ಋತುರಾಜ್ ಗಾಯಕ್ವಾಡ್, ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮಹಿಳಾ ಕ್ರಿಕೆಟರ್ ಕೂಡ ಆಗಿರುವ ತಮ್ಮ ಬಹುಕಾಲದ ಗೆಳತಿ ಉತ್ಕರ್ಷ ಪವಾರ್ ಅವರನ್ನು ಜೀವನ ಸಂಗತಿಯಾಗಿ ವರಿಸಿದ್ದಾರೆ.
ಈ ಐಪಿಎಲ್ ನಲ್ಲಿ ಬ್ಯಾಟಿಂಗ್ ನಿಂದ ಸ್ಪೋಟಕ ಆಟವನ್ನಾಡಿದ ರುತುರಾಜ್ ಐಪಿಎಲ್ ಮುಗಿದ ಕೆಲವೇ ದಿನಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ತನ್ನ ಬಹುಕಾಲದ ಗೆಳತಿ ಉತ್ಕರ್ಷ ಪವಾರ್ ಅವರೊಂದಿಗೆ ಶನಿವಾರ (ಜೂ.3 ರಂದು) ಮಹಾಬಲೇಶ್ವರದಲ್ಲಿ ವಿವಾಹವಾಗಿದ್ದಾರೆ.
ಇದನ್ನೂ ಓದಿ: ಡಬ್ಲ್ಯುಟಿಸಿ ಫೈನಲ್ ಬಗ್ಗೆ ಡೇವಿಡ್ ವಾರ್ನರ್ ಅಸಮಾಧಾನ!
ಈ ಕುರಿತು ಇನ್ಸ್ಟಾಗ್ರಾಂನಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದು, ನಮ್ಮಿಬ್ಬರ ಪ್ರಯಾಣ ಆರಂಭ ಎಂದು ಅಡಿಬರಹ ಬರೆದಿದ್ದಾರೆ. ವಿಶೇಷವೆಂದರೆ ರುತ್‌ರಾಜ್ ಅವರ ಪತ್ನಿ ಕೂಡ ಕ್ರಿಕೆಟಿ ಆಟಗಾರ್ತಿ ಆಗಿದ್ದು, 24 ವರ್ಷದ ಉತ್ಕರ್ಷ ದೇಶಿಯ ತಂಡದಲ್ಲಿ ಆಡಿದ್ದಾರೆ. ಮಹಾರಾಷ್ಟ್ರದ ಪರವಾಗಿ ದೇಶಿಯ ಟೂರ್ನಿಯಲ್ಲಿ ಉತ್ಕರ್ಷ ಗುರುತಿಸಿಕೊಂಡಿದ್ದಾರೆ.
ಇತ್ತೀಚೆಗೆ ಅವರು ಚೆನ್ನೈ ಐಪಿಎಲ್ ಟ್ರೋಫಿ ಗೆದ್ದ ಬಳಿಕ ಮೈದಾನದಲ್ಲಿ ರುತ್ ರಾಜ್ ಹಾಗೂ ಧೋನಿ ಅವರೊಂದಿಗೆ ಫೋಟೋಗೆ ಪೋಸ್ ಕೊಟ್ಟು ಅದನ್ನು ಪೋಸ್ಟ್ ಮಾಡಿದ್ದರು. ತಮ್ಮ ಮದುವೆಯ ಫೋಟೋಗಳನ್ನು ಹಂಚಿಕೊಂಡಿರುವ ರುತ್‌ರಾಜ್ “From the pitch to the altar, our journey begins!” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಮುಂಬೈ: ಎಂಎಸ್ ಧೋನಿ ಮೊಣಕಾಲಿನ ಶಸ್ತ್ರಚಿಕಿತ್ಸೆ ಯಶಸ್ವಿ
ಇದಕ್ಕೆ ಶಿಖರ್ ಧವನ್, ರಶೀದ್ ಖಾನ್, ಶ್ರೇಯಸ್ ಅಯ್ಯರ್ ಮತ್ತು ಉಮ್ರಾನ್ ಮಲಿಕ್ ಹಾಗೂ ಇತರ ಆಟಗಾರರು ಕಮೆಂಟ್ ಮಾಡಿ ನವ ಜೋಡಿಗೆ ಶುಭ ಹಾರೈಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ನ ಆಟಗಾರರಾದ ಶಿವಂ ದುಬೆ ಮತ್ತು ಪ್ರಶಾಂತ್ ಸೋಲಂಕಿ ಅವರು ಮದುವೆಯಲ್ಲಿ ಭಾಗವಹಿಸಿದ್ದರು. ಮಾಜಿ - ಹಾಲಿ ಕ್ರಿಕೆಟರ್, ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ನವದಂಪತಿಗೆ ಹಾರೈಸಿದ್ದಾರೆ.
ಮಹಾರಾಷ್ಟ್ರದ ಪುಣೆಯವರಾದ ಉತ್ಕರ್ಷ ಪವಾರ್ ಜನಿಸಿದ್ದು, ಅಕ್ಟೋಬರ್ 13, 1998ರಂದು. ದೇಶೀಯ ಕ್ರಿಕೆಟ್ನಲ್ಲಿ ಮಹಾರಾಷ್ಟ್ರ ತಂಡವನ್ನು ಪ್ರತಿನಿಧಿಸಿದ್ದ 24 ವರ್ಷದ ಉತ್ಕರ್ಷ, ಉತ್ತಮ ಆಲ್ರೌಂಡರ್. 18 ತಿಂಗಳುಗಳಿಂದ ಕ್ರಿಕೆಟ್ನಿಂದ ದೂರವಿರುವ ಉತ್ಕರ್ಷ, ಪುಣೆಯ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ಮತ್ತು ಫಿಟ್‌ನೆಸ್ ಸೈನ್ಸಸ್‌ನಲ್ಲಿ (INFS) ಓದುತ್ತಿದ್ದಾರೆ.
ಜೂನ್ 7ರಿಂದ ಶುರುವಾಗುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ಮೀಸಲು ಆಟಗಾರನಾಗಿ ಋತುರಾಜ್ ಗಾಯಕ್ವಾಡ್ ಆಯ್ಕೆಯಾಗಿದ್ದರು. ಆದರೆ ಮದುವೆ ಕಾರಣ, ಪಂದ್ಯದಿಂದ ಹಿಂದೆ ಸರಿದರು. ಆತನ ಬದಲಿಗೆ ಯಶಸ್ವಿ ಜೈಸ್ವಾಲ್ ಆಯ್ಕೆಯಾಗಿದ್ದಾರೆ.