ಐಪಿಎಲ್ 2023: ಟಾಸ್‌ ಬಳಿಕವೂ ಪ್ಲೇಯಿಂಗ್‌ XI ಬದಲಾವಣೆಗೆ ಅವಕಾಶ; BCCI ನಿಂದ 3 ಪ್ರಮುಖ ಮಾರ್ಪಾಡು

ಹಾಲಿ ವರ್ಷದ ಐಪಿಎಲ್ ಟೂರ್ನಿಗೆ ದಿನಗಣನೆ ಆರಂಭವಾಗಿರುವಂತೆಯೇ ಟೂರ್ನಿಯ ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದಾಗಿದೆ.
ಐಪಿಎಲ್ ಟ್ರೋಫಿ
ಐಪಿಎಲ್ ಟ್ರೋಫಿ

ಮುಂಬೈ: ಹಾಲಿ ವರ್ಷದ ಐಪಿಎಲ್ ಟೂರ್ನಿಗೆ ದಿನಗಣನೆ ಆರಂಭವಾಗಿರುವಂತೆಯೇ ಟೂರ್ನಿಯ ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದಾಗಿದೆ.

ಹೌದು.. 2023ರ ಐಪಿಎಲ್‌ ಆರಂಭಕ್ಕೂ ಮುನ್ನ ಬಿಸಿಸಿಐ ಕೆಲವು ಹೊಸ ನಿಯಮಗಳನ್ನು ಬಿಡುಗಡೆ ಮಾಡಿದ್ದು, ಪ್ರಮುಖವಾಗಿ ಮೂರು ನಿಯಮಗಳ ಬದಲಾವಣೆ ಮಾಡಲಾಗಿದೆ. ಈ ಪೈಕಿ ಟಾಸ್ ಬಳಿಕವೂ ಪ್ಲೇಯಿಂಗ್‌ XI ಬದಲಾಯಿಸುವ ಅವಕಾಶವನ್ನು ಕಲ್ಪಿಸಲಾಗಿದೆ.

ಈ ಹೊಸ ನಿಯಮದ ಅನುಸಾರ, ಟಾಸ್ ಬಳಿಕ ತಂಡಗಳ ನಾಯಕರು ಆಡುವ XI ರ ಬಳಗ ಹಾಗೂ 5 ಬದಲಿ ಆಟಗಾರರನ್ನು ಮ್ಯಾಚ್‌ ರೆಫರಿಗೆ ಬರವಣಿಗೆ ಮೂಲಕ ನೀಡಬೇಕು. ಪಂದ್ಯ ಆರಂಭಕ್ಕೂ ಮುನ್ನ ಎದುರಾಳಿ ತಂಡದ ಕ್ಯಾಪ್ಟನ್‌ ಗಮನಕ್ಕೆ ತಾರದೆ ಈಗಾಗಲೇ ನೀಡಿರುವ ಆಡುವ ಬಳಗದ XI ರಲ್ಲಿ ಬದಲಾವಣೆ ಮಾಡುವಂತಿಲ್ಲ ಎಂದು ಹೊಸ ನಿಯಮದಲ್ಲಿ ಹೇಳಲಾಗಿದೆ.

ಹೊಸ ನಿಯಮದ ಪ್ರಕಾರ ಒಂದು ವೇಳೆ ಟಾಸ್‌ ಬಳಿಕ, ಆಡುವ XIರ ಬಳಗವನ್ನು ಬದಲಾವಣೆ ಮಾಡಬೇಕೆಂದು ಅನಿಸಿದರೆ, ಪಂದ್ಯ ಆರಂಭವಾಗುವುದಕ್ಕೂ ಮುನ್ನ ಮ್ಯಾಚ್‌ ರೆಫರಿಗೆ ತಿಳಿಸುವ ಮೂಲಕ ಬದಲಾವಣೆ ಮಾಡಬಹುದು. ಈವೆರೆಗೆ ಟಾಸ್‌ ಬಳಿಕ ಪ್ಲೇಯಿಂಗ್‌ XIನಲ್ಲಿ ಬದಲಾವಣೆ ಮಾಡುವ ಅವಕಾಶ ಇರಲಿಲ್ಲ.

ಮತ್ತೊಂದು ಪ್ರಮುಖ ಬದಲಾವಣೆ ಎಂದರೆ, ಬ್ಯಾಟರ್ ಚೆಂಡನ್ನು ಎದುರಿಸುವ ಮೊದಲು ಕೀಪರ್ ತನ್ನ ಸ್ಥಾನವನ್ನು ಬದಲಾಯಿಸಿದರೆ ಅದನ್ನು ಅನ್ಯಾಯದ ಚಲನೆ ಎಂದು ಪರಿಗಣಿಸಿ ದಂಡ ವಿಧಿಸಬಹುದಾಗಿದೆ. ವಿಕೆಟ್ ಕೀಪರ್‌ನಿಂದ ಅನ್ಯಾಯದ ಚಲನೆ ಅಥವಾ ಸ್ಥಾನ ಬದಲಾವಣೆಯ ಸಂದರ್ಭದಲ್ಲಿ, ಅಂಪೈರ್‌ಗಳು ಡೆಡ್ ಬಾಲ್‌ಗೆ ಸಿಗ್ನಲ್ ಮಾಡುತ್ತಾರೆ ಮತ್ತು ಹಾಗೆ ಮಾಡಲು ಕಾರಣವನ್ನು ಇತರ ಅಂಪೈರ್‌ಗೆ ತಿಳಿಸುತ್ತಾರೆ. ಇದನ್ನು ನಿಯಮ ಬಾಹಿರ ಎಂದು ಅಂಪೈರ್ ಗಳು ತೀರ್ಮಾನಿಸಿದರೆ ಅದನ್ನು ವೈಡ್ ಅಥವಾ ನೋ ಬಾಲ್‌ ಆಗಿ ತೀರ್ಪು ನೀಡಿ ಒಂದು ರನ್ ಪೆನಾಲ್ಟಿ ಅಥವಾ ಬ್ಯಾಟಿಂಗ್ ತಂಡಕ್ಕೆ 5 ಪೆನಾಲ್ಟಿ ರನ್ ನೀಡಬಹುದಾಗಿದೆ.

ಮತ್ತೊಂದು ಬದಲಾವಣೆ ಎಂದರೆ "ಇಂಪ್ಯಾಕ್ಟ್ ಸಬ್ಸ್ಟಿಟ್ಯೂಷನ್". ಅಂದರೆ ಈಗಾಗಲೇ ತಂಡದ ನಾಯಕ ಗೊತ್ತುಪಡಿಸಿದ ಪರ್ಯಾಯ ಆಟಗಾರರನ್ನು ಪಂದ್ಯದ ಸಮಯದಲ್ಲಿ ಬದಲಿಯಾಗಿ ಬಳಸಿಕೊಳ್ಳುವುದು. ಈ ನಿಯಮ ಈಗಾಗಲೇ ಜಾರಿಯಲ್ಲಿದೆಯಾದರೂ ಈ ಹಿಂದಿದ್ದ 2 ಆಟಗಾರರ ಆಯ್ಕೆಯನ್ನು ಈ ಬಾರಿ 5 ಆಟಗಾರರಿಗೆ ವಿಸ್ತರಿಸಲಾಗಿದೆ. ಅಂದರೆ ಗೊತ್ತುಪಡಿಸಿದ ಈ ಐದು ಆಟಗಾರರ ಪೈಕಿ ನಾಯಕ ಓರ್ವ ಆಟಗಾರನನ್ನು "ಇಂಪ್ಯಾಕ್ಟ್ ಸಬ್ಸ್ಟಿಟ್ಯೂಷನ್" ಆಗಿ ಆಯ್ಕೆ ಮಾಡಬಹುದು. 

ಉಳಿದಂತೆ ನಿಗದಿತ ಸಮಯದಲ್ಲಿ ಓವರ್ ಪೂರ್ಣಗೊಳಿಸದಿದ್ದರೆ,  ಓವರ್ ರೇಟ್ ಪೆನಾಲ್ಟಿಯಾಗಿ ಪ್ರತಿ ಓವರ್‌ಗೆ 30-ಯಾರ್ಡ್ ವೃತ್ತದ ಹೊರಗೆ ಕೇವಲ ನಾಲ್ವರು ಫೀಲ್ಡರ್‌ಗಳಿಗೆ ಮಾತ್ರ ಫೀಲ್ಡ್ ಮಾಡಲು ಅವಕಾಶ ನೀಡಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com