ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿಗೆ ಇನ್ನು ಮುಂದೆ 'Z' ಕೆಟಗರಿ ಭದ್ರತೆ: ಪಶ್ಚಿಮ ಬಂಗಾಳ ಸರ್ಕಾರ ಆದೇಶ
ಭಾರತದ ಮಾಜಿ ಕ್ರಿಕೆಟಿಗ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರ ಭದ್ರತೆಯನ್ನು ಪಶ್ಚಿಮ ಬಂಗಾಳ ಸರ್ಕಾರವು 'ಝಡ್' ವರ್ಗಕ್ಕೆ ಹೆಚ್ಚಿಸಿದೆ.
Published: 17th May 2023 01:22 PM | Last Updated: 17th May 2023 01:22 PM | A+A A-

ಸೌರವ್ ಗಂಗೂಲಿ
ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರ ಭದ್ರತೆಯನ್ನು ಪಶ್ಚಿಮ ಬಂಗಾಳ ಸರ್ಕಾರವು 'ಝಡ್' ವರ್ಗಕ್ಕೆ ಹೆಚ್ಚಿಸಿದೆ.
ಗಂಗೂಲಿ ಅವರ 'ವೈ' ವರ್ಗದ ಭದ್ರತೆಯ ಅವಧಿ ಮುಗಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮಾಜಿ ಕ್ರಿಕೆಟಿಗನಿಗೆ ಇನ್ನು ಮುಂದೆ 8 ರಿಂದ 10 ಪೊಲೀಸರು ಕಾವಲು ಕಾಯಲಿದ್ದಾರೆ.
ವಿವಿಐಪಿಯ ಭದ್ರತಾ ಅವಧಿ ಮುಗಿದ ನಂತರ, ಸ್ಥಾಪಿತ ಕಾರ್ಯವಿಧಾನಗಳಿಗೆ ಅನುಗುಣವಾಗಿ ಸಮಗ್ರ ಮೌಲ್ಯಮಾಪನವನ್ನು ಕೈಗೊಂಡು ಪಶ್ಚಿಮ ಬಂಗಾಳ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.
ಸೌರವ್ ಗಂಗೂಲಿ ಭದ್ರತೆಯಲ್ಲಿ ಬದಲಾವಣೆ: ವರ್ಧಿತ ಭದ್ರತಾ ವ್ಯವಸ್ಥೆ ಅಡಿಯಲ್ಲಿ, ಸೌರವ್ ಗಂಗೂಲಿಯವರಿಗೆ 8 ರಿಂದ 10 ಪೊಲೀಸ್ ಸಿಬ್ಬಂದಿಯ ತಂಡದಿಂದ ರಕ್ಷಣೆ ನೀಡಲಾಗುತ್ತದೆ. ಅವರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ನೋಡಿಕೊಳ್ಳಲಾಗುತ್ತದೆ.
ಈ ಹಿಂದೆ, ವೈ ವರ್ಗದ ಭದ್ರತೆಯ ಅಡಿಯಲ್ಲಿ, ಗಂಗೂಲಿ ಅವರ ಜೊತೆಯಲ್ಲಿ ಮೂವರು ವಿಶೇಷ ಬ್ರಾಂಚ್ ಪೊಲೀಸರು ಇದ್ದರು.
ಜೊತೆಗೆ ಸಮಾನ ಸಂಖ್ಯೆಯ ಕಾನೂನು ಜಾರಿ ಅಧಿಕಾರಿಗಳು ಬೆಹಾಲಾದಲ್ಲಿನ ಅವರ ನಿವಾಸವನ್ನು ಕಾಯುತ್ತಿದ್ದರು.
ಪ್ರಸ್ತುತ, ಗಂಗೂಲಿ ಅವರು ತಮ್ಮ ತಂಡ ಡೆಲ್ಲಿ ಡೇರ್‌ಡೆವಿಲ್ಸ್ ಜೊತೆಯಲ್ಲಿದ್ದಾರೆ, ಮೇ 21 ರಂದು ಕೋಲ್ಕತ್ತಾಗೆ ಮರಳುವ ನಿರೀಕ್ಷೆಯಿದೆ. ಈ ದಿನವೇ ಅವರು ವರ್ಧಿತ Z ವರ್ಗದ ಭದ್ರತೆಯನ್ನು ಸ್ವೀಕರಿಸಲಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಗವರ್ನರ್ ಸಿ ವಿ ಆನಂದ ಬೋಸ್, ತೃಣಮೂಲ ಕಾಂಗ್ರೆಸ್ ಸಂಸದ ಮತ್ತು ರಾಷ್ಟ್ರೀಯ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮತ್ತು ಫಿರ್ಹಾದ್ ಹಕೀಮ್ ಮತ್ತು ಮೊಲೋಯ್ ಘಾಟಕ್ ಅವರಿಗೆ Z Plus ಭದ್ರತೆ ನೀಡಲಾಗಿದೆ.
ಇದಲ್ಲದೆ, ಪಶ್ಚಿಮ ಬಂಗಾಳದ ಭಾರತೀಯ ಜನತಾ ಪಕ್ಷದ (BJP) ಅಧ್ಯಕ್ಷ ಸುಕಾಂತ ಮಜುಂದಾರ್ ಅವರಿಗೆ ಸಿಐಎಸ್ಎಫ್ ರಕ್ಷಣೆಯೊಂದಿಗೆ Z ಪ್ಲಸ್ ಭದ್ರತೆಯನ್ನು ಸಹ ಒದಗಿಸಲಾಗಿದೆ.