ರಾಹುಲ್, ಪಂತ್ ಶತಕ ವ್ಯರ್ಥ, ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋತ ಭಾರತ

Published: 11 Sep 2018 10:44 PM IST
ಇಂಗ್ಲೆಂಡ್ ಆಟಗಾರರು
ಓವಲ್: ಆಂಗ್ಲರ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲೂ ಭಾರತ 118 ರನ್ ಅಂತರದ ಸೋಲು ಅನಭವಿಸಿದ್ದು, ಅತಿಥೇಯ ಇಂಗ್ಲೆಂಡ್ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 4-1 ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ.

ಇಂಗ್ಲೆಂಡ್ ನೀಡಿದ್ದ 464 ರನ್ ಟಾರ್ಗೆಟ್ ಬೆನ್ನತ್ತಿದ ಭಾರತ ತಂಡಕ್ಕೆ ಕೆಎಲ್ ರಾಹುಲ್ ಹಾಗೂ ರಿಷಭ್ ಪಂತ್ ಶತಕ ಸಿಡಿಸುವ ಮೂಲಕ  ನೆರವಾಗಿದ್ದರು. ಆದರೆ ಇತರೆ ಬ್ಯಾಟ್ಸ್ ಮನ್ ಗಳ ಬೆಂಬಲ ಸಿಗದೆ ಟೀಂ ಇಂಡಿಯಾ 94.3 ಓವರ್‌ಗಳಲ್ಲಿ 345 ರನ್ ಗಳಿಗೆ ಎಲ್ಲಾ ವಿಕೆಟುಗಳನ್ನು ಕಳೆದುಕೊಂಡು ಹೀನಾಯ ಸೋಲು ಅನುಭವಿಸಿತು.

ಅಜಿಂಕ್ಯ ರಹಾನೆ (37) ಹಾಗೂ ಹನುಮ ವಿಹಾರಿ(0) ಬಲು ಬೇಗನೆ ವಿಕೆಟ್ ಒಪ್ಪಿಸಿ ಪೆವಿಲ್ಲಿಯನ್ ಗೆ ತೆರಳಿದ್ದರು. ಅದರಲ್ಲಿಯೂ ಪ್ರಥಮ ಟೆಸ್ಟ್ ಆಡುತ್ತಿರುವ ವಿಹಾರಿ ಶೂನ್ಯಗಳಿಕೆ ಮಾಡಿ ನಿರಾಸೆ ಮುಡಿಸಿದರು.

ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಆಡುತ್ತಿರುವ ಇಂಗ್ಲೆಂಡ್ ಆಟಗಾರ ಅಲಾಸ್ಟೇರ್ ಕುಕ್ ಆಕರ್ಷಕ ಶತಕದ (147) ಮೂಲಕ ಗಮನ ಸೆಳೆದಿದ್ದರು. ದ್ವಿತೀಯ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ಅಲಾಸ್ಟೇರ್ ಕುಕ್, ಜೋ ರೂಟ್ ಶತಕದ ನೆರವಿನೊಂದಿಗೆ 112.3 ಓವರ್ ನಲ್ಲಿ 8 ವಿಕೆಟ್ ಕಳೆದು 423 ರನ್ ಪೇರಿಸಿ ಡಿಕ್ಲೇರ್ ಘೋಷಿಸಿತ್ತು. ಪ್ರಥಮ ಇನ್ನಿಂಗ್ಸ್ ನಲ್ಲಿ ಭಾರತ 40 ರನ್ ಹಿನ್ನಡೆ ಅನುಭವಿಸಿದ್ದರಿಂದ ಗೆಲುವಿಗೆ 464 ರನ್ ಬೃಹತ್ ಗುರಿ ಭಾರತದ ಮುಂದಿತ್ತು.
Posted by: LSB | Source: Online Desk

ಈ ವಿಭಾಗದ ಇತರ ಸುದ್ದಿ