ಲಂಡನ್: ಆತಿಥೇಯ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪ್ರವಾಸಿ ಟೀಂ ಇಂಡಿಯಾ ತಂಡ ಕಳಪೆ ಪ್ರದರ್ಶನ ನೀಡುತ್ತಿದ್ದು ವಿದೇಶಿ ನೆಲದಲ್ಲಿ ನಾವು ಉತ್ತಮ ಆಟ ಪ್ರದರ್ಶಿಸದಿದ್ದರೆ ಅದರಿಂದ ನಮಗೆ ಏನು ಪ್ರಯೋಚನ ಎಂದು ನಾಯಕ ವಿರಾಟ್ ಕೊಹ್ಲಿ ಪ್ರಶ್ನಿಸಿದ್ದಾರೆ.
ವಿದೇಶಿ ಪ್ರವಾಸದಲ್ಲಿ ಟೀಂ ಇಂಡಿಯಾ ಅಭ್ಯಾಸ ಪಂದ್ಯಗಳನ್ನು ಆಡಿಲ್ಲ ಹೀಗಾಗಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಕಳಪೆ ಪ್ರದರ್ಶನ ನೀಡುತ್ತಿದೆ ಎಂದು ಕ್ರಿಕೆಟ್ ದಿಗ್ಗಜ ಸುನೀಲ್ ಗವಾಸ್ಕರ್ ಸೇರಿದಂತೆ ಹಲವರು ಟೀಕಿಸಿದ್ದರು.
ಇನ್ನು ಸೋನಿಗೆ ಸಂದರ್ಶನ ನೀಡಿದ ಸಂದರ್ಭದಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ಹೆಚ್ಚಾಗಿ ಜನರು ಪ್ರವಾಸದ ಆಟಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಆ ಪ್ರವಾಸದ ಆಟಗಳು ಎಲ್ಲಿ ನಡೆಯುತ್ತವೆ. ಹಾಗೂ ಎದುರಾಳಿ ತಂಡದ ಬಲಿಷ್ಠ ಬೌಲಿಂಗ್ ಬಗ್ಗೆ ಯಾರು ಪ್ರಶ್ನೆಗಳನ್ನು ಕೇಳುವುದಿಲ್ಲ ಎಂದು ಹೇಳಿದ್ದಾರೆ.
ಟೆಸ್ಟ್ ಸರಣಿಗೂ ಮುನ್ನ ನಾನು ಹೆಚ್ಚು ತಯಾರಿ ನಡೆಸಬೇಕಾಗುತ್ತದೆ. ಆದರೆ ಬಲಿಷ್ಠ ಬೌಲಿಂಗ್ ದಾಳಿಯನ್ನು ಎದುರಿಸಲು ನಮಗೆ ಸಿದ್ಧತೆ ನಡೆಸಲು ಸಮಯ ಸಿಗದಿದ್ದಾಗ ನಾವು ಏನು ಮಾಡುವುದಕ್ಕಾಗುತ್ತದೆ ಎಂದು ಹೇಳಿದ್ದಾರೆ.
ಮೊದಲ ಟೆಸ್ಟ್ ಪಂದ್ಯ ಹಾಗೂ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ನಾವು ಪಂದ್ಯವನ್ನು ಗೆಲ್ಲಬಹುದಿತ್ತು. ಆದರೆ ಎದುರಾಳಿ ತಂಡದ ಬಲಿಷ್ಠ ಬೌಲಿಂಗ್ ನಿಂದಾಗಿ ನಾವು ಎರಡೂ ಪಂದ್ಯಗಳಲ್ಲಿ ಸೋಲು ಕಾಣಬೇಕಾಯಿತು ಎಂದರು.
ಇನ್ನು ಪ್ರತಿ ಪಂದ್ಯದಲ್ಲೂ ನನ್ನ ತಪ್ಪುಗಳು ಎಲ್ಲಿವೆ ಮತ್ತು ನಾನು ಅವುಗಳಿಂದ ಹೇಗೆ ಸುಧಾರಿಸಬಹುದು ಎಂಬುದರ ಬಗ್ಗೆ ಯಾವಾಗಲೂ ಚಿಂತನೆ ನಡೆಸುತ್ತಿರುತ್ತೇನೆ. ನಾನು ಉತ್ತಮ ಸಮಯದಲ್ಲೂ ತಪ್ಪುಗಳನ್ನು ಸ್ವೀಕರಿಸಲು ಒಪ್ಪುತ್ತೇನೆ ಅದರಿಂದಲೇ ನಾನು ಸುಧಾರಣೆ ಕಾಣುತ್ತೇನೆ ಎಂದರು.