ಗಾಂಧೀಜಿ ಹತ್ಯೆಗೈದ ದೇಶವಿದು: ಬರಗೂರು ರಾಮಚಂದ್ರಪ್ಪ

ದೇಶದಲ್ಲಿ ವಿಶೇಷವಾಗಿ ರಾಜ್ಯದಲ್ಲಿ ಹತ್ಯೆ ಮತ್ತು ಆತ್ಮಹತ್ಯೆ ನಡೆಯುತ್ತಿರುವ ಸಂಕಷ್ಟದ ಸಮಯವಾಗಿದೆ. ಒಬ್ಬ ಸಾಹಿತಿಯನ್ನು ಹತ್ಯೆ ಮಾಡುವ ಸ್ಥಿತಿ ತಲುಪಿರುವುದು ಸಮಾಜದಲ್ಲಿನ ಕ್ರೌರ್ಯವನ್ನು ಬಿಂಬಿಸುತ್ತದೆ ಎಂದು ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ವಿಷಾದ ವ್ಯಕ್ತಪಡಿಸಿದರು...
ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ (ಸಂಗ್ರಹ ಚಿತ್ರ)
ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ (ಸಂಗ್ರಹ ಚಿತ್ರ)

ಬೆಂಗಳೂರು: ದೇಶದಲ್ಲಿ ವಿಶೇಷವಾಗಿ ರಾಜ್ಯದಲ್ಲಿ ಹತ್ಯೆ ಮತ್ತು ಆತ್ಮಹತ್ಯೆ ನಡೆಯುತ್ತಿರುವ ಸಂಕಷ್ಟದ ಸಮಯವಾಗಿದೆ. ಒಬ್ಬ ಸಾಹಿತಿಯನ್ನು ಹತ್ಯೆ ಮಾಡುವ ಸ್ಥಿತಿ ತಲುಪಿರುವುದು ಸಮಾಜದಲ್ಲಿನ ಕ್ರೌರ್ಯವನ್ನು ಬಿಂಬಿಸುತ್ತದೆ ಎಂದು ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ವಿಷಾದ ವ್ಯಕ್ತಪಡಿಸಿದರು.

ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ಜರುಗಿದ `ಕನ್ನಡ ಸಾಹಿತ್ಯ ಸಂವೇದನೆ- ರೈತ, ಕಾರ್ಮಿಕ' ಗೋಷ್ಠಿಯಲ್ಲಿ ಮಾತನಾಡಿ, ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹತ್ಯೆ ಹಿಂದೆ ದೊಡ್ಡ ಸಂಚಿದೆ. ಸತ್ಯವನ್ನು ಹತ್ತಿಕ್ಕುವ ಕೃತ್ಯ ನಡೆಯುತ್ತಿದೆ. ಇದು ಕೇವಲ ಕೊಲೆಯಲ್ಲ, ಮಾನವೀಯ ಮೌಲ್ಯಗಳ, ಸಾಂವಿಧಾನಿಕ, ವೈಚಾರಿಕ ವಿಷಯಗಳನ್ನು ಹತ್ಯೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಅಹಿಂಸೆಯನ್ನು ಪ್ರತಿಪಾದಿಸಿದ ಮಹಾತ್ಮ ಗಾಂಧೀಜಿ ಅವರನ್ನು ಹತ್ಯೆಗೈದ ದೇಶವಲ್ಲವೇ ಇದು ಎಂದು ವಾಸ್ತವ ಬಿಚ್ಚಿಟ್ಟರು.

ಯುವ ಜನತೆ ಲೆಕ್ಕಾಚಾರ: 70-80ರ ದಶಕದಲ್ಲಿದ್ದ ಪ್ರಗತಿಪರ ಶಕ್ತಿ ಇಂದಿಲ್ಲ. 20ನೇ ಶತಮಾನದಲ್ಲಿ ಸಮಾಜ ಅಸಹಾಯಕತೆಯೆಡೆಗೆ ನಡೆಯುತ್ತಿದೆ. ಮಾನವೀಯ ಮೌಲ್ಯಗಳು ಕುಸಿದಿದ್ದು, ಮಾರುಕಟ್ಟೆ ಮೌಲ್ಯ ಏರಿಕೆಯಾಗಿದೆ. ಯುವ ಜನಾಂಗದ ಮನಸ್ಸುಗಳಲ್ಲಿ ಮೌಲ್ಯಕ್ಕಿಂತ ಲೆಕ್ಕಾಚಾರಗಳು ತುಂಬಿದ್ದು, ಮನೋಧರ್ಮ ಬದಲಾಗಿದೆ ಎಂದು ಪರಿಸ್ಥಿತಿಯನ್ನು ವಿಶ್ಲೇಷಿಸಿದರು. ಈ ಹಿಂದೆ ಮಹಾರಾಷ್ಟ್ರದಲ್ಲಿ ಸಾಹಿತಿಗಳನ್ನು ಕೊಲ್ಲುವ ಒಂದು ಪರಿಸ್ಥಿತಿ ಇತ್ತು. ಇದು ರಾಜ್ಯಕ್ಕೂ ಆವರಿಸಿರುವುದು ಆತಂಕ ಪಡುವ ವಿಷಯ. ಸಾಹಿತಿಗಳು ಸತ್ಯವನ್ನು ಹೇಳಲು ಹೆದರುವ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ಬರಗೂರು ಆತಂಕ ವ್ಯಕ್ತಪಡಿಸಿದರು.

ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಬಸವರಾಜ ಕಲ್ಗುಡಿ ಮಾತನಾಡಿ, ಕಲಬುರ್ಗಿ ಹತ್ಯೆ ಪೈಶಾಚಿಕ ಕೃತ್ಯವಾಗಿದ್ದು, ರಾಜ್ಯಕ್ಕೆ ಕಪ್ಪುಚುಕ್ಕೆಯಾಗಿದೆ. ಇಂತಹ ಮೃಗೀಯ ಘಟನೆಗಳ ಬಗ್ಗೆ ವಿದ್ಯಾರ್ಥಿಗಳು, ಯುವ ಜನತೆ ಎಚ್ಚೆತ್ತುಕೊಳ್ಳಬೇಕು ಎಂದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ, ಬೆಂಗಳೂರು ವಿವಿ ಕುಲಪತಿ ಪ್ರೊ. ಬಿ.ತಿಮ್ಮೇಗೌಡ, ವಿವಿ ಪ್ರಾಧ್ಯಾಪಕರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com