ಕೋಣಂದೂರು ಲಿಂಗಪ್ಪಗೆ ದೇವರಾಜ ಅರಸು ಪ್ರಶಸ್ತಿ

Published: 19th August 2013 02:00 AM  |   Last Updated: 19th August 2013 02:01 AM   |  A+A-


Posted By : Vishwanath
ಕ.ಪ್ರ.ವಾರ್ತೆ, ಬೆಂಗಳೂರು, ಆ. 18-
ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಹೆಸರಿನಲ್ಲಿ ನೀಡುವ ರಾಜ್ಯ ಮಟ್ಟದ ಪ್ರಶಸ್ತಿಗೆ ಮಾಜಿ ಶಾಸಕ ಕೋಣಂದೂರು ಲಿಂಗಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.
ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ಸರ್ಕಾರ ನೇಮಕ ಮಾಡಿದ್ದ ಏಳು ಮಂದಿಯ ಆಯ್ಕೆ ಸಮಿತಿ 2013ನೇ ಸಾಲಿನ ದೇವರಾಜ ಅರಸು ಪ್ರಶಸ್ತಿಗೆ ಕೋಣಂದೂರು ಲಿಂಗಪ್ಪ ಅವರ ಹೆಸರನ್ನು ಅಂತಿಮಗೊಳಿಸಿದೆ. ಆ. 20ರ ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಲಿರುವ ಡಿ. ದೇವರಾಜ ಅರಸು ಅವರ 98ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಇದರ ಜತೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯಗಳಲ್ಲಿದ್ದು 2012-13ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದ ಒಟ್ಟು 17 ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರದೊಂದಿಗೆ ನಗದು ಬಹುಮಾನವನ್ನೂ ನೀಡಲಾಗುತ್ತದೆ.
ಸುದ್ದಿಗೋಷ್ಠಿಯಲ್ಲಿ ಭಾನುವಾರ ಈ ವಿಷಯ ತಿಳಿಸಿದ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ, ಈ ಬಾರಿ ರಾಜ್ಯ ಮಟ್ಟದಲ್ಲಿ ಮಾತ್ರ ದೇವರಾಜ ಅರಸು ಪ್ರಶಸ್ತಿಯನ್ನು ಒಬ್ಬರಿಗಷ್ಟೇ ನೀಡಲು ತೀರ್ಮಾನಿಸಲಾಗಿದೆ. ಜತೆಗೆ ಪ್ರಶಸ್ತಿ ಜತೆ ನೀಡುವ ನಗದು ಮೊತ್ತವನ್ನು 1 ಲಕ್ಷದಿಂದ 2 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಈ ಹಿಂದೆ 2007ರ ನಂತರ ರಾಜ್ಯ ಮಟ್ಟದಲ್ಲಿ 1 ಲಕ್ಷ ಮೊತ್ತದ ಪ್ರಶಸ್ತಿ ಮತ್ತು ವಿಭಾಗವಾರು ಮಟ್ಟದಲ್ಲಿ 50 ಸಾವಿರ ಮೊತ್ತದ ಪ್ರಶಸ್ತಿಗಳನ್ನು ನೀಡಲಾಗುತ್ತಿತ್ತು. ಆದರೆ, ಇನ್ನು ಮುಂದೆ ರಾಜ್ಯ ಮಟ್ಟದಲ್ಲಿ ಒಬ್ಬರಿಗೆ ಮಾತ್ರ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯಗಳಲ್ಲಿದ್ದು ಸ್ನಾತಕೋತ್ತರ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಮೂವರು, ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ 7 ಮಂದಿ, ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಏಳು ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಗುವುದು ಎಂದು ತಿಳಿಸಿದರು.

ಹಲವು ಪ್ರಥಮಗಳು: ಈ ಬಾರಿ ದೇವರಾಜ ಅರಸು ಪ್ರಶಸ್ತಿ ಘೋಷಣೆ ಹಲವು ಪ್ರಥಮಗಳಿಂದ ಕೂಡಿದೆ. ಈ ಹಿಂದೆ ಪ್ರಶಸ್ತಿ ಪ್ರದಾನ ದಿನದಂದೇ ವಿಜೇತರ ಹೆಸರು ಪ್ರಕಟಿಸಲಾಗುತ್ತಿತ್ತು. ಈ ಬಾರಿ ಅದಕ್ಕೆ ಮುನ್ನವೇ ಪ್ರಕಟಿಸಲಾಗುತ್ತಿದೆ. ಅದೇ ರೀತಿ ಸಾಹಿತಿಗಳ ನೇತೃತ್ವದ ಆಯ್ಕೆ ಸಮಿತಿ ಪ್ರಶಸ್ತಿಗೆ ಅರ್ಹ ವ್ಯಕ್ತಿಯನ್ನು ಆಯ್ಕೆ ಮಾಡಿದೆ ಎಂದು ತಿಳಿಸಿದರು.

ಪ್ರಶಸ್ತಿಗೆ ಅರ್ಜಿ ಸಲ್ಲಿಸುವಂತಿಲ್ಲ: ಈ ಬಾರಿ ಇಲಾಖೆ ಅಧಿಕಾರಿಗಳು ದೇವರಾಜ ಅರಸು ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದ್ದರು. ಆದರೆ, ಪ್ರಶಸ್ತಿಗೆ ಅರ್ಹರಾಗಿರುವ ಬಹುತೇಕರು ಅರ್ಜಿ ಸಲ್ಲಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷದಿಂದ ಈ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸುವುದಿಲ್ಲ. ಆಯ್ಕೆ ಸಮಿತಿಯೇ ರಾಜ್ಯಾದ್ಯಂತ ತಜ್ಞರ ಅಭಿಪ್ರಾಯ ಪಡೆದು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸಿದ ಒಬ್ಬರನ್ನು ಆಯ್ಕೆ ಮಾಡುತ್ತದೆ. ಅಲ್ಲದೆ, ಮುಂದಿನ ವರ್ಷದಿಂದ ಅರಸು ಅವರ ಜನ್ಮದಿನಾಚರಣೆಗೆ ಎರಡು ತಿಂಗಳು ಇರುತ್ತಿದ್ದಂತೆ ಆಯ್ಕೆ ಸಮಿತಿ ರಚಿಸಲಾಗುವುದು ಎಂದರು.

ಕೋಣಂದೂರು ಲಿಂಗಪ್ಪ ಪರಿಚಯ
ವಿದ್ಯಾರ್ಥಿ ಜೀವನದಲ್ಲೇ ಮೈಸೂರು ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ಕೋಣಂದೂರು ಲಿಂಗಪ್ಪ ಅವರು ಕನ್ನಡ ಯುವಜನ ಸಭಾ ಎಂಬ ಸಂಘಟನೆ ಸ್ಥಾಪಿಸಿ ಕನ್ನಡ ಚಳವಳಿಯಲ್ಲಿ ತೊಡಗಿದ್ದರು. ದೇವರಾಜ ಅರಸು ಅವರ ಉಳುವವನೇ ಭೂಮಿಯ ಒಡೆಯ ಘೋಷವಾಕ್ಯದಡಿ ಭೂ ಸುಧಾರಣೆ ಪರ ಹೋರಾಟ ಮಾಡಿದ್ದರು. ಶಾಂತವೇರಿ ಗೋಪಾಲಗೌಡರ ಗರಡಿಯಲ್ಲಿ ಪಳಗಿದ್ದ ಅವರು ಅದಕ್ಕೂ ಮುನ್ನವೇ ಕಾಗೋಡು ತಿಮ್ಮಪ್ಪ, ಎಸ್. ಬಂಗಾರಪ್ಪ ಅವರ ಜತೆಗೂಡಿ ಗೇಣಿದಾರರ ಪರ ಹೋರಾಟದಲ್ಲಿ ತೊಡಗಿದ್ದರು. 1972ರಿಂದ 78ರವರೆಗೆ ಎರಡು ಅವಧಿಯಲ್ಲಿ ಶಾಸಕರಾಗಿದ್ದ ಲಿಂಗಪ್ಪ ಅವರು ಉತ್ತಮ ಸಂಸದೀಯ ಪಟುವೂ ಆಗಿದ್ದರು. ಹಾವನೂರು ವರದಿ ಜಾರಿಗೆ ಹೋರಾಟ ಮಾಡಿದ್ದರು. ಅಲ್ಲದೆ, ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ನಾಮಕರಣ ಮಾಡುವ ನಿಟ್ಟಿನಲ್ಲಿ ಹಕ್ಕೊತ್ತಾಯವನ್ನೂ ಮಾಡಿದ್ದರು.

ಅರ್ಜಿಯನ್ನೇ ಸಲ್ಲಿಸಿರಲಿಲ್ಲ
ಈ ಬಾರಿ ದೇವರಾಜ ಅರಸು ಪ್ರಶಸ್ತಿಗೆ ಆಯ್ಕೆಯಾಗಿರುವ ಕೋಣಂದೂರು ಲಿಂಗಪ್ಪ ಅವರು ಪ್ರಶಸ್ತಿಗಾಗಿ ಅರ್ಜಿಯನ್ನೇ ಹಾಕಿರಲಿಲ್ಲ. ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಪ್ರಶಸ್ತಿಗಾಗಿ 103 ಮಂದಿ ಅರ್ಜಿ ಸಲ್ಲಿಸಿದ್ದರು. ಆಯ್ಕೆ ಸಮಿತಿಯ ಮೊದಲ ಸಭೆಯಲ್ಲಿ ಈ ಎಲ್ಲ ಅರ್ಜಿಗಳನ್ನು ಸಮಗ್ರವಾಗಿ ಪರಿಶೀಲಿಸುವುದರ ಜತೆಗೆ ಸಮಿತಿಯ ಸದಸ್ಯರು 9 ಹೆಸರುಗಳನ್ನು ಪ್ರಸ್ತಾಪಿಸಿದ್ದರು. ಈ ಎಲ್ಲಾ 112 ಹೆಸರು ಮತ್ತು ಅವರ ಹಿನ್ನೆಲೆ, ಸಾಧನೆಗಳನ್ನು ಪರಿಶೀಲಿಸಿದ ನಂತರ ಅಂತಿಮವಾಗಿ ಕೋಣಂದೂರು ಲಿಂಗಪ್ಪ ಅವರನ್ನು ಆಯ್ಕೆ ಮಾಡಲಾಯಿತು. ವಿಶೇಷವೆಂದರೆ ಅವರು ಪ್ರಶಸ್ತಿಗೆ ಅರ್ಜಿಯನ್ನೇ ಸಲ್ಲಿಸಿರಲಿಲ್ಲ ಎಂದು ಹೇಳಿದರು.
Stay up to date on all the latest ಬೆಂಗಳೂರು ನಗರ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp