ಇತ್ತೀಚಿನ ದಿನಗಳಲ್ಲಿ ಪುರುಷರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಮಹಿಳೆಯರೇ ಕಾರಣ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಪುರುಷ ರಕ್ಷಣಾ ಸಮಿತಿ ಸದಸ್ಯರು ಭಾನುವಾರ ಪುರಭವನದ ಮುಂದೆ ಪ್ರತಿಭಟನೆ ನಡೆಸಿದರು.
ಕಾನೂನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಮಹಿಳೆಯರು ಪತಿ ಹಾಗೂ ಆತನ ಕುಟುಂಬ ಸದಸ್ಯರ ಮೇಲೆ ಸುಳ್ಳು ಆರೋಪ ಹೊರಿಸಿ ಜೈಲಿಗೆ ಹೋಗುವಂತೆ ಮಾಡುತ್ತಿದ್ದಾರೆ.
ಕೊನೆಗೆ ಎಲ್ಲೂ ನ್ಯಾಯ ಸಿಗದೆ ಪುರುಷರು ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ಇದರ ನಿಯಂತ್ರಣಕ್ಕೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, ವಿದ್ಯಾವಂತರು, ಅವಿದ್ಯಾವಂತರು, ಕೂಲಿಕಾರ್ಮಿಕರು, ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು, ಸರ್ಕಾರಿ ನೌಕರರು ಸೇರಿದಂತೆ ಎಲ್ಲಾ ವರ್ಗದ ಪುರುಷರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯ ಅಪರಾಧ ಮಾಹಿತಿ ಸಂಗ್ರಹ ಘಟಕದಲ್ಲಿ ದಾಖಲಾಗಿರುವ ಅಂಕಿಅಂಶಗಳೇ ಇದಕ್ಕೆ ಉದಾಹರಣೆ. ಮಹಿಳೆಯರು ಕಾನೂನು ದುರುಪಯೋಗ ಪಡಿಸಿಕೊಳ್ಳುತ್ತಿರುವುದೇ ಪ್ರಕರಣ ಹೆಚ್ಚಲು ಕಾರಣ. ಅನೇಕ ಸಮಯಗಳಲ್ಲಿ ಮಹಿಳಾ ಸಂಘಟನೆಗಳು ಮಹಿಳೆಯರ ತಲೆಕೆಡಿಸಿ ಅವರ ನೆರವಿಗೆ ನಿಲ್ಲುತ್ತವೆ. ಕೌಟುಂಬಿಕ ನ್ಯಾಯಾಲಯದಲ್ಲಿ ದಂಪತಿ ಒಂದಾಗಲು ಒಪ್ಪಿದರೂ ಕೆಲವು ಧನದಾಹಿ ಸಂಘಟನೆಗಳು ಅದಕ್ಕೆ ಅವಕಾಶ ಕಲ್ಪಿಸುವುದಿಲ್ಲ ಎಂದು ಆರೋಪಿಸಿದರು. ಮಹಿಳಾಪರ ಕಾನೂನು ಜಾರಿಗೆ ತರುವ ಮುನ್ನ ಪರಿಶೀಲಿಸಬೇಕಿದೆ ಎಂದ ಅವರು, ಸುಳ್ಳು ದಾಖಲು ದಾಖಲಿಸಿದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಮಿತಿಯ ಸದಸ್ಯರು ನೇಣು ಕುಣಿಕೆಗೆ ತಲೆಕೊಡುವ ಮೂಲಕ ಮುಂದಿನ ದಿನಗಳಲ್ಲಿ ಪುರುಷರಿಗೆ ನೇಣಿನ ಕುಣಿಕೆಯೇ ಗತಿ ಎಂದು ಸಾರಿದರು.