ಇಂದಿನಿಂದ ದ್ರಾಕ್ಷಿ, ಕಲ್ಲಂಗಡಿ ಹಬ್ಬ

ಬೆಂಗಳೂರು: ದ್ರಾಕ್ಷಿ ಹಾಗೂ ಕಲ್ಲಂಗಡಿ ಬೆಳೆಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಹಾಪ್‌ಕಾಮ್ಸ್ ನಗರದಲ್ಲಿ ಫೆ.13ರಿಂದ ದ್ರಾಕ್ಷಿ ಹಾಗೂ ಕಲ್ಲಂಗಡಿ ಮೇಳ ಹಮ್ಮಿಕೊಂಡಿದೆ.
ಮೇಳವನ್ನು ಬುಧವಾರ ಬೆಳಗ್ಗೆ 8.30ಕ್ಕೆ ಹಡ್ಸನ್ ವೃತ್ತದ ಬಳಿಯಿರುವ ಸಂಸ್ಥೆಯ ಶೀತಲಗೃಹದಲ್ಲಿ ತೋಟಗಾರಿಕೆ ಹಾಗೂ ಸಕ್ಕರೆ ಖಾತೆ ಸಚಿವ ಎಸ್.ಎ. ರವೀಂದ್ರನಾಥ್ ಉದ್ಘಾಟಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷೆ ಎಚ್.ಕೆ.ನಾಗವೇಣಿ ಚಂದ್ರಶೇಖರರೆಡ್ಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೇಳದಲ್ಲಿ 289 ದ್ರಾಕ್ಷಿ ಹಾಗೂ ಕಲ್ಲಂಗಡಿ ಮಳಿಗೆಗಳಿರಲಿವೆ. 20 ಸಂಚಾರಿ ಮಾರಾಟ ಮಳಿಗೆಗಳನ್ನು ಕೂಡ ವ್ಯವಸ್ಥೆ ಮಾಡಲಾಗಿದೆ. ಶರದ್, ಕೃಷ್ಣ ಶರದ್, ಪ್ಲೇಮ್, ಸೋನಿಕಾ ಸ್ಪೆಷಲ್, ರಾಜ್‌ಗಣೇಶ್ ಸೇರಿದಂತೆ 8 ವಿಧದ ದ್ರಾಕ್ಷಿ ತಳಿಗಳು ಮಾರಾಟಕ್ಕೆ ಲಭ್ಯವಿವೆ.
 ಗ್ರಾಹಕರಿಗೆ ಶೇ.10ರಷ್ಟು ರಿಯಾಯ್ತಿ ದರದಲ್ಲಿ ದರದಲ್ಲಿ ಉತ್ತಮ ಗುಣಮಟ್ಟದ ದ್ರಾಕ್ಷಿ ಹಾಗೂ ಕಲ್ಲಂಗಡಿ ಹಣ್ಣುಗಳನ್ನು ಮಾರಾಟ ಮಾಡಲಾಗುವುದು ಎಂದು ಅವರು ತಿಳಿಸಿದರು. ದ್ರಾಕ್ಷಿಯನ್ನು ಬಿಜಾಪುರ, ಬಾಗಲಕೋಟೆ, ಗುಲ್ಬರ್ಗ, ಚಿಕ್ಕಬಳ್ಳಾಪುರ ಜಿಲ್ಲೆಗಳಂದ ನೇರವಾಗಿ ಖರೀದಿಸಲಾಗುವುದು. ಮೇಳದಲ್ಲಿ ಆಸ್ಟ್ರೇಲಿಯಾದಿಂದ ಆಮದು ಮಾಡಿಕೊಂಡ ವಿಶೇಷ ತಳಿಗಳ ದ್ರಾಕ್ಷಿಗಳು ಕೂಡ ದೊರೆಯಲಿವೆ ಎಂದರು. ಕಳೆದ ಮೂರು ವರ್ಷಗಳಿಂದ ದ್ರಾಕ್ಷಿ ಹಾಗೂ ಕಲ್ಲಂಗಡಿ ಮೇಳಗಳಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 2009-10ರಲ್ಲಿ 527 ಟನ್, 2010-11ರಲ್ಲಿ 426 ಟನ್, 2011-12ರಲ್ಲಿ 459 ಟನ್ ದ್ರಾಕ್ಷಿ ವಹಿವಾಟು ಮಾಡಲಾಗಿದೆ. ಅಲ್ಲದೆ, 2009-10ರಲ್ಲಿ 1047 ಟನ್, 2010-11 ರಲ್ಲಿ 661 ಟನ್ ಹಾಗೂ 2011-12ರಲ್ಲಿ 1062 ಟನ್ ಕಲ್ಲಂಗಡಿ ವಹಿವಾಟು ನಡೆಸಲಾಗಿದೆ ಎಂದರು.
ಉದ್ಘಾಟನೆಯಲ್ಲಿ ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ, ಶಾಸಕ ರೋಷನ್ ಬೇಗ್ ಭಾಗವಹಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಕೆಂಡೇಗೌಡ, ಚಿಕ್ಕಣ್ಣ ಮತ್ತಿತರರು ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com