ಪ್ರೆಸ್‌ಕ್ಲಬ್‌ನಲ್ಲಿ ಚಿತ್‌ಚೋರ್

Published: 05th November 2013 02:00 AM  |   Last Updated: 05th November 2013 12:02 PM   |  A+A-


Posted By : Rashmi
ಕ.ಪ್ರ.ವಾರ್ತೆ, ಬೆಂಗಳೂರು, ನ. 4-
'ಭಾರತ ಸಾಂಸ್ಕೃತಿಕವಾಗಿ ತನ್ನನ್ನು ತಾನು ತೆರೆದುಕೊಳ್ಳುತ್ತಿದ್ದ ಅಮೂಲ್ಯ ಸಮಯದಲ್ಲಿ ನನ್ನಂಥವರಿಗೆ ಚಿತ್ರರಂಗದಲ್ಲಿ ಅವಕಾಶಗಳು ಸಿಕ್ಕವು. ಸತ್ಯದೇವ್ ದುಬೆಯಂತಹ ಗುರುಗಳಿಂದ ಮತ್ತು ರಂಗಭೂಮಿಯ ಹಿನ್ನೆಲೆ ಇದ್ದುದರಿಂದ ನನಗೆ ಒಳ್ಳೆಯ ಸಿನಿಮಾಗಳನ್ನು ಮಾಡಲು ಸಾಧ್ಯವಾಯಿತು. ಕೇವಲ ಹಿಟ್ ಆದ ಸಿನಿಮಾಗಳಷ್ಟೇ ಅಲ್ಲದೆ, ಹಲವು ಸೋತ ಚಿತ್ರಗಳಲ್ಲೂ ನನಗೆ ಒಳ್ಳೆಯ ಪಾತ್ರಗಳು ಸಿಕ್ಕಿದ್ದವು'.
-ಇವು ಬಾಲಿವುಡ್‌ನ ಚಿತ್‌ಚೋರ್ ಎಂದೇ ಹೆಸರಾಗಿರುವ ನಟ, ನಿರ್ದೇಶಕ ಅಮೋಲ್ ಪಾಲೇಕರ್ ಅವರ ನುಡಿಮುತ್ತುಗಳು. ಬೆಂಗಳೂರಿನಲ್ಲಿ  ಸೋಮವಾರ ಬೆಂಗಳೂರು ಪ್ರೆಸ್ ಕ್ಲಬ್ ಮತ್ತು ಬೆಂಗಳೂರು ವರದಿಗಾರರ ಕೂಟ ಆಯೋಜಿಸಿದ್ದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕನ್ನಡದ ಅನಂತ್‌ನಾಗ್, ಅರುಂಧತಿನಾಗ್, ಗಿರೀಶ್ ಕಾರ್ನಾಡ್ ಅವರೊಂದಿಗಿನ ತಮ್ಮ ಒಡನಾಟವನ್ನು  ನೆನಪಿಸಿಕೊಂಡ ಮರಾಠಿ ಮೂಲದ ಈ ನಟ ಬೆಂಗಳೂರಿನೊಂದಿಗಿನ ತಮ್ಮ ಭಾಂಧವ್ಯವನ್ನು ಮೆಲುಕು ಹಾಕಿದರು.
ಭಾರತೀಯ ಚಿತ್ರರಂಗಕ್ಕೆ 100 ವರ್ಷ ತುಂಬಿದ ಸಮಯದ ಸಂಭ್ರಮಾಚರಣೆಯನ್ನು ವಿಶ್ಲೇಷಿಸಿದ ಅಮೋಲ್ ಪಾಲೇಕರ್, ಅಲ್ಲಿ ಕೇವಲ ಕಮರ್ಷಿಯಲ್ ಚಿತ್ರಗಳಿಗೆ ಮಣೆ ಹಾಕಲಾಯಿತೇ ಹೊರತು, ಪ್ರಾದೇಶಿಕ ಚಿತ್ರಗಳಿಗೆ ಯಾರೂ ಮನ್ನಣೆ ಕೊಡಲಿಲ್ಲ. ಭಾರತೀಯ ಚಿತ್ರರಂಗದ ಶ್ರೀಮಂತಿಕೆಗೆ ಪ್ರಾದೇಶಿಕ ಚಿತ್ರಗಳ ಕೊಡುಗೆಯೂ ಗಮನಾರ್ಹವಾದದ್ದು. ಆದರೆ ಇಂದು ಚಿತ್ರರಂಗ ಎಂದ ತಕ್ಷಣ ಎಲ್ಲರೂ ಬಾಲಿವುಡ್‌ನ ಹಿಟ್ ಚಿತ್ರಗಳನ್ನು ಹೆಸರಿಸುತ್ತಾರೆ. ಬಾಯಿ ಬಿಟ್ಟರೆ ಹಂಡ್ರೆಡ್ ಕ್ರೋರ್ ಕ್ಲಬ್‌ನ ಬಗೆಗೇ ಮಾತನಾಡುತ್ತ ಹೆದರಿಸುತ್ತಾರೆ. ಹಾಗಾಗಿ ಪ್ರಾದೇಶಿಕ ಚಿತ್ರಗಳು ಇಂದು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡಬೇಕಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. 45 ವರ್ಷಗಳ ಸಿನಿಮಾ ಮತ್ತು ರಂಗಭೂಮಿಯ ಅನುಭವವಿರುವ ಅಮೋಲ್ ಪಾಲೇಕರ್ ತಾವು ವೃತ್ತಿಪರವಾಗಿ ಅಭ್ಯಸಿಸಿದ್ದ ಪೇಂಟಿಂಗ್ ಕ್ಷೇತ್ರದ ಬಗ್ಗೆ ಮಾತನಾಡುತ್ತ ನಾನು ಮತ್ತೆ ನನ್ನ ಆಸಕ್ತಿಯ ಪೇಂಟಿಂಗ್ ಕ್ಷೇತ್ರಕ್ಕೆ ಹೋದರೂ ಹೋಗಬಹುದು. ಆದರೆ ಅದರರ್ಥ ಚಿತ್ರರಂಗದಿಂದ ಬೇಸತ್ತು ಅಲ್ಲಿಗೆ ಹೋಗುತ್ತೇನೆ ಎಂದಲ್ಲ ಎನ್ನುತ್ತ ತಮ್ಮ ಭವಿಷ್ಯದ ದಿನಗಳತ್ತ ಕಣ್ಣು ಹಾಯಿಸಿದರು.
ತಮ್ಮ ಜೊತೆಗೆ ಸಹಾಯಕರಾಗಿ ಕೆಲಸ ಮಾಡಿ ಈಗ ದೊಡ್ಡ ನಿರ್ದೇಶಕರಾಗಿರುವ ಹಲವರ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿಸುತ್ತಾ, ಮರಾಠಿ ಚಿತ್ರರಂಗದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾತನಾಡಿದ ಅವರು ಈಗೀಗ ಚಿತ್ರರಂಗಕ್ಕೆ ಹೊಸ ಪ್ರತಿಭೆಗಳ ಆಗಮನವಾಗುತ್ತಿದೆ. ಇದು ಖುಷಿಯ ವಿಷಯ. ಅವರಲ್ಲಿ ಹೊಸ ಚಿಂತನೆಗಳಿವೆ. ಕ್ರಿಯಾಶೀಲತೆ ಇದೆ. ಚಿತ್ರರಂಗಕ್ಕೆ ಅದರ ಅವಶ್ಯಕತೆ ಇದೆ ಎಂದರು.
ಚಿತ್ರರಂಗದ ಬಗೆಗಿನ ಅಭಿಪ್ರಾಯಗಳಿಂದ ಬಿಡುವು ತೆಗೆದುಕೊಂಡು ಮಾತು ರಾಜಕೀಯದ ಬಗ್ಗೆ ಮಾತು  ಹೊರಳಿದಾಗ, ಮೋದಿ ಭಾರತದ ಪ್ರಧಾನಿಯಾಗಬೇಕು ಎಂಬ ಲತಾ ಮಂಗೇಶ್ಕರ್ ಅವರ ಅನಿಸಿಕೆ ವೈಯಕ್ತಿಕವಾದದ್ದು. ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ನನಗೆ ಯಾವ ಪಕ್ಷದ ಜೊತೆಗೂ ಸಂಪರ್ಕ ಇಲ್ಲ. ಯಾರು ಪ್ರಧಾನಿಯಾಗುತ್ತಾರೆ ಎಂಬುದು ಮುಖ್ಯವಲ್ಲ, ಒಟ್ಟಿನಲ್ಲಿ ದಕ್ಷ ಆಡಳಿತ ನೀಡುವ ಪಕ್ಷ ಅಧಿಕಾರಕ್ಕೆ ಬಂದರೆ ಸಾಕು ಎನ್ನುತ್ತಾ ಪತ್ರಿಕಾಗೋಷ್ಠಿಗೆ ಮುಕ್ತಾಯ ಹಾಡಿದರು ಪಾಲೇಕರ್.
Stay up to date on all the latest ಬೆಂಗಳೂರು ನಗರ news
Poll
Babri Masjid

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ನ್ಯಾಯ ಒದಗಿಸಲಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp