ಮತ್ತೆ ಡಿನೋಟಿಫಿಕೇಶನ್ ಭೂತ

Published: 07th July 2014 02:00 AM  |   Last Updated: 07th July 2014 02:11 AM   |  A+A-


Posted By : Rashmi
ಶಿವಕುಮಾರ್ ಬೆಳ್ಳಿತಟ್ಟೆ
ಬೆಂಗಳೂರು: ಬಿಡಿಎದಲ್ಲಿ ಡಿನೋಟಿಫಿಕೇಶನ್ ಭೂತ ಮತ್ತೆ ತಲೆ ಎತ್ತಿದೆ. ಅರ್ಕಾವತಿ ಬಡಾವಣೆ ನಿರ್ಮಿಸಲು ಸ್ವಾಧೀನ ಪಡಿಸಿಕೊಂಡಿದ್ದ ಜಮೀನುಗಳನ್ನು ಬಿಡಿಎ ಸದ್ದಿಲ್ಲದೆ ಡಿನೋಟಿಫಿಕೇಷನ್ ಮಾಡಿದೆ.
ಅದರಲ್ಲೂ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಮೀಪ ಪ್ರದೇಶಗಳಾದ, ಭೂ ಮೌಲ್ಯ ಹೆಚ್ಚಾಗಿರುವ ನಾಗವಾರ, ಜಕ್ಕೂರು, ಅಮೃತಹಳ್ಳಿ ಸುತ್ತಮುತ್ತ 350 ಎಕರೆಗಿಂತ ಅಧಿಕ ಜಮೀನುಗಳನ್ನು ಡಿನೋಟಿಫೈ ಮಾಡಲಾಗಿದೆ. ಇದರಲ್ಲೂ ಬಿಡಿಎ ಮಧ್ಯವರ್ತಿಗಳು ಪ್ರಮುಖ ಪಾತ್ರ ವಹಿಸಿದ್ದು, ಹಿಂಬದಿಯಲ್ಲಿ ಹಿರಿಯ ಅಧಿಕಾರಿಗಳ ಆಟ ಜೋರಾಗಿದೆ.
ಮಧ್ಯವರ್ತಿಗಳು ಜಮೀನು ಮಾಲೀಕರಿಂದ ಎಕರೆಗೆ 2 ಕೋಟಿ ವಸೂಲಿ ಮಾಡಿ ಡಿನೋಟಿಫಿಕೇಷನ್ ಮಾಡಿಸುತ್ತಿದ್ದು, ಆನಂತರ ಜಮೀನನ್ನು 5ಕೋಟಿ ವರೆಗೆ ಮಾರಾಟ ಮಾಡಿಸುತ್ತಿದ್ದಾರೆ. ಹೀಗಾಗಿ ಅರ್ಕಾವತಿ ಬಡಾವಣೆಗೆಂದು ಸ್ವಾಧೀನ ಪಡಿಸಿಕೊಂಡಿದ್ದ ಜಮೀನುಗಳ ಪೈಕಿ ಕಳೆದ 10ವರ್ಷಗಳಲ್ಲಿ 1000 ಎಕರೆ ಜಮೀನು ಡಿನೋಟಿಫಿಕೇಷನ್ ಆಗಿದೆ. ಇತ್ತೀಚಿಗೆ ಅದರಲ್ಲೂ ಕಾಂಗ್ರೆಸ್ ಆಡಳಿತ ಬಂದ ನಂತರ 650 ಎಕರೆಯಷ್ಟು ಜಮೀನು ಡಿನೋಟಿಫೈ ಆಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅರ್ಕಾವತಿ ಬಡಾವಣೆ ನಿರ್ಮಿಸಲು ಬಿಡಿಎ 2003ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. 2004ರಲ್ಲಿ ಅಂತಿಮ ಅಧಿಸೂಚನೆ ಪ್ರಕಟಗೊಂಡಿತ್ತು. 16 ಗ್ರಾಮಗಳಲ್ಲಿ 2,750 ಎಕರೆ ಸ್ವಾಧೀನ ಮಾಡಿಕೊಂಡಿತ್ತು. ಇದನ್ನು ಪ್ರಶ್ನಿಸಿ ಅನೇಕ ಭೂ ರೈತರು ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯ ಎಂಥ ಜಮೀನುಗಳು ಭೂ ಸ್ವಾಧೀನದಿಂದ ಹೊರಗಿಡಬೇಕೆಂದು ಸೂಚಿಸಿತು. 2005ರ ನ.25ರಂದು 6 ಮಾರ್ಗಸೂಚಿಗಳನ್ನು ನೀಡಿತ್ತು. ಇದನ್ನೇ ನೆಪ ಮಾಡಿಕೊಂಡು ಅನೇಕ ಮಾಲೀಕರು ತಮ್ಮ ಜಮೀನುಗಳನ್ನು ಸ್ವಾಧೀನದಿಂದ ಡಿನೋಟಿಪೈ ಮಾಡಿಸಿಕೊಂಡರು. ಹೀಗಾಗಿ ಅರ್ಕಾವತಿ ಬಡಾವಣೆ ನಿರ್ಮಿಸಿ 20 ಸಾವಿರ ನಿವೇಶನ ಹಂಚಿಕೆ ಮಾಡಬೇಕಿರುವ ಬಿಡಿಎ ಬರೀ 8000 ನಿವೇಶನಕ್ಕೆ ಬಂದುನಿಂತಿದೆ.
ಹಂಚಿಕೆಯಾಗಿರುವುದರಲ್ಲೂ 800 ನಿವೇಶನಗಳನ್ನು ಡಿನೋಟಿಫೈ ಮಾಡಿ ರದ್ದು ಮಾಡಿದೆ. ಇಂಥ ನಿವೇಶನಗಳು ರಾಚೇನಹಳ್ಳಿ, ಚಳ್ಳಕೆರೆ, ಕೆಂಪಾಪುರ, ಗೆಜ್ಜಲಹಳ್ಳಿ ಸುತ್ತಮುತ್ತ ಹೆಚ್ಚಾಗಿವೆ. ಇಲ್ಲಿ ನಿವೇಶನ ಮಾಲೀಕರು ಮನೆ ನಿರ್ಮಿಸಲು ಹೋದರೆ, ಆ ಜಮೀನಿನ ಮಾಲೀಕರು ಈ ಪ್ರದೇಶ ಡಿನೋಟಿಫೈ ಆಗುತ್ತಿದೆ. ಹೆಚ್ಚಿನ ಮಾಹಿತಿಗೆ ಆಯುಕ್ತರನ್ನು ಸಂಪರ್ಕಿಸಿ ಎನ್ನುತ್ತಿದ್ದಾರೆ.
ಅಕ್ರಮ-ಸಕ್ರಮ: ಡಿನೋಟಿಫೈ ಅಕ್ರಮ ಮುಚ್ಚಿ ಹಾಕಲು ಬಿಡಿಎ ಭೂ ಸ್ವಾಧೀನದ ಅಂತಿಮ ಅಧಿಸೂಚನೆಯನ್ನು ಎರಡು ಬಾರಿ ಹೊರಡಿಸಿದೆ. 2004ರ ಫೆಬ್ರವರಿ 23ರಲ್ಲಿ ಒಂದು ಅಧಿಸೂಚನೆ ಹೊರಡಿಸಿದ್ದ ಬಿಡಿಎ ಈಗ ಸುಮಾರು 1000 ಎಕರೆ ಜಮೀನನ್ನು ಸ್ವಾಧೀನದಿಂದ ಕೈಬಿಟ್ಟು ಉಳಿದ ಜಮೀನಿಗೆ ಹೊಸ ಅಂತಿಮ ಅಧಿಸೂಚನೆ ಹೊರಡಿಸಿದೆ. ಡಿನೋಟಿಫಿಕೇಷನ್ ಅಕ್ರಮವನ್ನು ಸಕ್ರಮ ಮಾಡಿಕೊಳ್ಳಲು ಬಿಡಿಎ ಈ ತಂತ್ರ ಅನುಸರಿಸಿದೆ.
ಏರ್‌ಪೋರ್ಟ್ ಸಮೀಪವೇ
ಡಿನೋಟಿಫೈ ಏಕೆ?
ಎರಡು ತಿಂಗಳಿನಿಂದ ಡಿನೋಟಿಫಿಕೇಷನ್ ವ್ಯವಹಾರಗಳು ಅಂತಾರಾಷ್ಟ್ರಿಯ ವಿಮಾನ ನಿಲ್ದಾಣಕ್ಕೆ ಸಮೀಪ ಹೆಚ್ಚಾಗಿ ನಡೆದಿವೆ. ನಾಗವಾರ, ಅಮೃತಹಳ್ಳಿ, ಜಕ್ಕೂರು ಮತ್ತು ಕೆಂಪಾಪುರ ಸುತ್ತಮುತ್ತ ಹೆಚ್ಚಿನ ಜಮೀನು ಡಿನೋಟಿಫೈ ಆಗಿವೆ. ಏಕೆಂದರೆ, ಬಿಡಿಎ ಇತರ ಬೇರೆ ಭಾಗಗಳಲ್ಲಿ ಸ್ವಾಧೀನಪಡಿಸಿಕೊಂಡ ಜಮೀನಿನ ಬೆಲೆ ಚ.ಅಡಿಗೆ 2,000ದಿಂದ 3,000 ಇದೆ. ವಿಮಾನ ನಿಲ್ದಾಣ ಸಮೀಪದ ಪ್ರದೇಶಗಳಲ್ಲಿ ಚ.ಅಡಿಗೆ 5,000ರಿಂದ 7,000 ವರೆಗೂ ಮಾರಾಟವಾಗುತ್ತಿದೆ. ಹೀಗಾಗಿ ಡಿನೋಟಿಫೈ ಹೆಚ್ಚು ಈ ಭಾಗದಲ್ಲಿ ಆಗುತ್ತಿದೆ.


Stay up to date on all the latest ಬೆಂಗಳೂರು ನಗರ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp