ಶ್ರಮ ಸಂಸ್ಕೃತಿ ನಂಬಿದ ಅಂಬಿಗರ ಚೌಡಯ್ಯ

Published: 22nd January 2013 02:00 AM  |   Last Updated: 22nd January 2013 01:26 AM   |  A+A-


Posted By : Lingaraj
ಚಿತ್ರದುರ್ಗ: ತಮ್ಮ ಹೆಸರನ್ನೇ ವಚನಾಂಕಿತ ಮಾಡಿಕೊಂಡ ಮಹಾನ್ ವ್ಯಕ್ತಿಯಾಗಿದ್ದ ಅಂಬಿಗರ ಚೌಡಯ್ಯ ಅವರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಬೇಕು ಎಂದು ಬಸವಕೇಂದ್ರ ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಸೋಮವಾರ ಇಲ್ಲಿನ ತರಾಸು ರಂಗಮಂದಿರದಲ್ಲಿ ಜಿಲ್ಲಾಡಳಿತ, ನಗರಸಭೆ, ಜಿಲ್ಲಾ ಗಂಗಾಂಬಿಕ ಬೆಸ್ತರ ಸಂಘದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಉದ್ಘಾಟಿಸಿ ಮಾತನಾಡಿದ ಶರಣರು, 12ನೇ ಶತಮಾನದಲ್ಲಿ ಬಸವ ಕ್ರಾಂತಿಯ ಸಂದರ್ಭದಲ್ಲಿ ಬಸವಣ್ಣನವರು ಮಾತ್ರ ಕಂಗೊಳಿಸಲಿಲ್ಲ. ಅವರೊಂದಿಗೆ ಇದ್ದಂತಹ ಸರ್ವ ಶರಣರೂ ಬೆಳೆಯಲಿಕ್ಕೆ ಅವಕಾಶವಿತ್ತು. ಬಸವಣ್ಣ ನಿಸ್ವಾರ್ಥದಿಂದ ಇಡೀ ಶರಣರು, ಎಲ್ಲ ಸಮುದಾಯದವರು ಮುಂದೆ ಬರಬೇಕು, ಎಲ್ಲರಿಗೂ ಸ್ಥಾನ ಸಿಗಬೇಕು ಎಂದು ಕಾಳಜಿ ವಹಿಸಿದ ವ್ಯಕ್ತಿ ಎಂದರು.
ಸಂಸ್ಕೃತಿಗೆ ಜೀವನ: ಶರಣ ಸಮೂಹದ ಪೈಕಿ ತಮ್ಮ ವಚನಗಳ ಮೂಲಕ ಚಾಟಿ ಏಟು ನೀಡುತ್ತಿದ್ದ ಧೀರ ಶರಣ ಅಂಬಿಗರ ಚೌಡಯ್ಯ. ಶ್ರಮ ಸಂಸ್ಕೃತಿಯಲ್ಲಿ ಅಪಾರ ವಿಶ್ವಾಸ, ಭರವಸೆ ಇಟ್ಟು ಆಶ್ರಮ ಸಂಸ್ಕೃತಿಗೆ ಇಡೀ ಬದುಕನ್ನೇ ಧಾರೆ ಎರೆದ ಧೀರೋದಾತ್ತ ವ್ಯಕ್ತಿತ್ವವನ್ನು ಚೌಡಯ್ಯ ಹೊಂದಿದ್ದರು. ಅಂಬಿಗ ಎಂದರೆ ನಂಬಿಗ, ನಂಬಿಗಸ್ಥ ಶರಣ ಎಂದರ್ಥ. ಮಾತು ಕೊಟ್ಟರೆ ಅದಕ್ಕೆ ತಪ್ಪದೆ ಪ್ರಾಣ ಬೇಕಾದರೂ ಕೊಟ್ಟೇವು ಎಂದು ತಮ್ಮ ನಂಬುಗೆಯನ್ನು ಕರಾರುವಾಕ್ಕಾಗಿ ಹೇಳುತ್ತಾರೆ ಎಂದು ಹೇಳಿದರು.
ಆದರ್ಶ ಪಾಲಿಸಿ: ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಸ್.ಕೆ. ಬಸವರಾಜನ್, ಶರಣ ಸಂಕುಲದಲ್ಲಿ ಶರಣ ಅಂಬಿಗರ ಚೌಡಯ್ಯನವರು ನೇರ ನಡೆ, ದಿಟ್ಟ ನುಡಿಯ ನಿಜ ಶರಣನೆನಿಸಿ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಂತಹ ಮಹಾನ್ ಶರಣನಾಗಿ ಆದರ್ಶ ವೆನಿಸಿಕೊಂಡಿದ್ದಾರೆ. ಇಂತಹ ಶರಣ ಚೌಡಯ್ಯನವರ ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಅಂಬಿಗರ ಚೌಡಯ್ಯನವರು ಅಂದಿನ ಸಾಮಾಜಿಕ ಪದ್ಧತಿ, ಸ್ಥಿತಿ- ಗತಿಗಳನ್ನು ನೋಡಿ ಸಮಾಜದಲ್ಲಿ ಎಲ್ಲಾ ವರ್ಗದ ಜನರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿಕೊಡುವ ಮೂಲಕ ಸುಖೀರಾಜ್ಯವನ್ನು ನಿರ್ಮಾಣ ಮಾಡಬೇಕೆನ್ನುವ ಪರಿಕಲ್ಪನೆಯನ್ನು ಹೊಂದಿದಂತಹ ಮಹಾಶರಣರಾಗಿದ್ದರು ಎಂದು ತಿಳಿಸಿದರು.
ಗಂಗಾಂಭಿಕರ ಬೆಸ್ತರ ಸಮಾಜದಲ್ಲಿ ಆರ್ಥಿಕವಾಗಿ ಬಹಳ ಬಡತನದಲ್ಲಿದ್ದಾರೆ. ತಮ್ಮ ಕುಲಕಸುಬನ್ನು ನೆಚ್ಚಿಕೊಳ್ಳದೆ ಇತರೆ ಉದ್ಯೋಗದಲ್ಲಿ ತೊಡಗಬೇಕು. ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ವಿದ್ಯಾವಂತರನ್ನಾಗಿ ಜೀವನ ರೂಪಿಸಿಕೊಳ್ಳಲು ಮುಂದಾಗಬೇಕು. ಸಂಘಟಿತರಾಗಿ ತಮ್ಮ ಕಷ್ಟ-ಸುಖಗಳನ್ನು ಹಂಚಿಕೊಳ್ಳಬೇಕು. ಬೆಸ್ತರ ಸಮಾಜ ಕೂಡ ಸಮಾಜದ ಮುಖ್ಯವಾಹಿನಿಯಲ್ಲಿ ಬರಲು ಸರ್ಕಾರ ವಿಶೇಷ ಸವಲತ್ತುಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿದರು.
5 ಲಕ್ಷ ಅನುದಾನ: ಅಂಬಿಗರ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಈ ಮುಂಚೆ 5 ಲಕ್ಷ ನೀಡಲಾಗಿದೆ. ಇನ್ನೂ ಹೆಚ್ಚಿನ ಅನುದಾನ ಬೇಕಾದರೆ ಇನ್ನೂ 5 ಲಕ್ಷ ಅನುದಾನ ನೀಡಲು ಸಿದ್ಧ. ಅಂಬಿಗರ ಚೌಡಯ್ಯ ಪ್ರತಿಮೆ ನಿರ್ಮಾಣಕ್ಕೆ ನಗರಸಭೆಯಿಂದ 3 ಲಕ್ಷ ಬಿಡುಗಡೆ ಆಗಿದೆ. ಜನಾಂಗದ ವಿದ್ಯಾರ್ಥಿ ನಿಲಯದ ಕಟ್ಟಡದ ಮೇಲೆ ಪ್ರತಿಮೆ ಸ್ಥಾಪಿಸಲು ಜಿಲ್ಲಾಡಳಿತ ಅವಕಾಶ ಮಾಡಿಕೊಡಬೇಕು ಎಂದು ಕೇಳಿಕೊಂಡರು.
ರಾಣಿಬೆನ್ನೂರು ಬಿಎಕೆಜೆಎಸ್ ಮಹಿಳಾ ಪದವಿ ಕಾಲೇಜಿನ ಉಪ ಪ್ರಾಂಶುಪಾಲ ಎನ್.ಕೆ. ರಾಮಚಂದ್ರಪ್ಪ ಉಪನ್ಯಾಸ ನೀಡಿದರು. ನಗರಸಭೆ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್ ಮಾತನಾಡಿದರು.
ಸಮಾರಂಭದಲ್ಲಿ ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ, ಜಿಪಂ ಸಿಇಓ ಕೆ.ಎಂ. ನಾರಾಯಣ ಸ್ವಾಮಿ, ಜಿಲ್ಲಾ ರಕ್ಷಣಾಧಿಕಾರಿ ಎಂ.ಎನ್. ನಾಗರಾಜ್, ಜಿಲ್ಲಾ ಗಂಗಾಂಬಿಕಾ ಬೆಸ್ತರ ಸಂಘದ ಜಿಲ್ಲಾಧ್ಯಕ್ಷ ಎಚ್.ಡಿ. ರಂಗಯ್ಯ, ಕಾರ್ಯದರ್ಶಿ ಶ್ರೀನಿವಾಸ್ ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಪ್ರೊ.ಎಸ್.ಬಿ. ರಂಗನಾಥ್, ಕೆ. ಶ್ರೀನಿವಾಸಪ್ಪ, ಎಂ. ಭೈರಪ್ಪ, ಎನ್. ಮಂಜುನಾಥ, ಜೆ. ಮಹೇಶ್, ಭೀಮಣ್ಣ ಗಜಾಪುರ ಅವರನ್ನು  ಸನ್ಮಾನಿಸಿ ಗೌರವಿಸಲಾಯಿತು.

Stay up to date on all the latest ಚಿತ್ರದುರ್ಗ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp