'ಮತಾಂಧತೆ ವಿರೋಧಿಸಿ'

ಮಂಗಳೂರು: ಹಿಂದೂ, ಮುಸ್ಲಿಂ, ಕ್ರೈಸ್ತರಲ್ಲಿ ಯಾವುದೇ ಮತಾಂಧತೆ ಮೊದಲು ತಿಂದು ಹಾಕುವುದು ಮಾನವೀಯತೆಯನ್ನು. ಬಳಿಕ ತನ್ನದೇ ಜನರ ಕಣ್ಣು, ಕಿವಿ ತಿಂದು ಹಾಕುತ್ತದೆ. ನಂತರ ನರಬಲಿ ಕೇಳುತ್ತದೆ. ಬಹುಸಂಖ್ಯಾತ ಶಾಂತಿಪ್ರಿಯ ಜನರು ವಿರೋಧ ವ್ಯಕ್ತಪಡಿಸಿದರೆ ಈ ಪರಿಸ್ಥಿತಿ ಬದಲಾಗಲು ಸಾಧ್ಯ ಎಂದು ಸಾಹಿತಿ, ಚಿಂತಕ ದೇವನೂರು ಮಹಾದೇವ ಹೇಳಿದ್ದಾರೆ.
ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಭಾನುವಾರ ಕನ್ನಡ ಸಂಘ, ಸಮದರ್ಶಿ ವೇದಿಕೆ ಮತ್ತು ಹೊಸತು ಮಾಸಿಕದ ಸಂಯುಕ್ತ ಆಶ್ರಯದಲ್ಲಿ 'ಆಹಾರ ಪರಂಪರೆ ಮತ್ತು ಆರೋಗ್ಯ' ಸಂವಾದದಲ್ಲಿ ಅವರು ಮಾತನಾಡಿದರು.
ಜಾತಿ ಮತ್ತು ಧರ್ಮದಲ್ಲಿ ಎಲ್ಲೆಡೆ ಅಂಧತೆ ಕಾಣುತ್ತಿದೆ. ವೈಯಕ್ತಿಕವಾಗಿ ತನಗೆ ಜಮಾತೆ ಮುಸ್ಲಿಂ ಸಂಘಟನೆಯಲ್ಲಿ ಆರ್‌ಎಸ್‌ಎಸ್, ಆರ್‌ಎಸ್‌ಎಸ್‌ನಲ್ಲಿ ಮುಸ್ಲಿಂ ಸಂಘಟನೆ ಕಾಣುತ್ತಿದೆ. ಇವರ ನಡೆ ನುಡಿಯಲ್ಲಿ ವ್ಯತ್ಯಾಸ ಕಾಣುವುದಿಲ್ಲ ಎಂದರು. ಮಾಂಸಾಹಾರ ಎಂದರೆ ಗೋಚರ ಜೀವ ಆಹಾರ, ಸಸ್ಯಾಹಾರ ಎಂದರೆ ಅಗೋಚರ ಜೀವ ಆಹಾರ. ಸಸ್ಯಸಂಕುಲದ ಮೇಲೆ ಹಲ್ಲೆ ನಡೆದಾಗ ಅವು ಯಾವ ರೀತಿ ಚೀತ್ಕರಿಸುತ್ತದೆ ಎಂಬುದನ್ನು ತಜ್ಞರ ವರದಿ ಹೇಳುತ್ತದೆ. ವಾಸ್ತವದಲ್ಲಿ ಪ್ರತಿ ಜೀವಿ ಪರಾವಲಂಬಿ ಜೀವಿಯನ್ನು ಆಹಾರಕ್ಕೆ ಅವಲಂಬಿಸಿರುವ ವ್ಯವಸ್ಥೆ ರೂಪುಗೊಂಡಿದೆ ಎಂದರು. ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಾತನಾಡಿದರು. ಡಾ.ಸತ್ಯನಾರಾಯಣ ಮಲ್ಲಿಪಟ್ಣ ಸ್ವಾಗತಿಸಿ, ಸಿದ್ಧನಗೌಡ ಪಾಟೀಲ ವಂದಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com