ಸಂಖ್ಯಾಶಾಸ್ತ್ರ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ

Published: 03rd July 2013 02:00 AM  |   Last Updated: 03rd July 2013 11:51 AM   |  A+A-


Posted By : Lingaraj
ಧಾರವಾಡ: ಸಂಖ್ಯಾಶಾಸ್ತ್ರವು ದಿನನಿತ್ಯದ ಆರ್ಥಿಕ ಸಮೀಕ್ಷೆಯ ಕಾರ್ಯಗಳಲ್ಲಿ ಮುಖ್ಯ ಪಾತ್ರವನ್ನು ವಹಿಸಲಿದ್ದು, ಈ ವಿಷಯ ಕುರಿತು ತಿಳವಳಿಕೆ ಪದವಿ ವಿದ್ಯಾರ್ಥಿಗಳಿಗೆ ಇಲ್ಲವಾಗಿದೆ. ಮೂರು ವರ್ಷಗಳ ಪದವಿಯಲ್ಲಿ ಸಂಖ್ಯಾಶಾಸ್ತ್ರವನ್ನು ಅಭ್ಯಸಿಸಿದರೆ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವಿದೆ ಎಂದು ಜನತಾ ಶಿಕ್ಷಣ ಸಮಿತಿಯ ವಿತ್ತಾಧಿಕಾರಿ ಡಾ. ಅಜಿತಪ್ರಸಾದ ಹೇಳಿದರು.
ಇಲ್ಲಿನ ಜೆಎಸ್ಸೆಸ್ ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ಸಂಖ್ಯಾಶಾಸ್ತ್ರ ದಿನಾಚರಣೆಯ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಆರ್ಥಿಕ ಸಂಶೋಧನೆ ಹಾಗೂ ಜನಸಂಖ್ಯಾ ಕೇಂದ್ರಗಳಲ್ಲಿ ನಡೆಯುವ ಸಂದರ್ಶನಗಳಿಗೆ ಬರುವ ವಿದ್ಯಾರ್ಥಿಗಳಲ್ಲಿ ಸಂಖ್ಯಾಶಾಸ್ತ್ರ ಹಾಗೂ ಗಣಕಯಂತ್ರದ ಅನುಭವದ ಕೊರತೆ ಎದ್ದು ಕಾಣುತ್ತದೆ ಎಂದರು.
ವಿದ್ಯಾಪೋಷಕದ ಸಿಇಓ ರಾಘವೇಂದ್ರ ತಿಕೋಟಾ ದುಡಿತ ಮತ್ತು ಉದ್ಯೋಗ ಅಂಕಿ-ಅಂಶಗಳು ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿ, ಜಗತ್ತಿನಲ್ಲಿ ಸೈಬರ್ ಯುದ್ಧಗಳ ಹಾವಳಿ ಹೆಚ್ಚಾಗಿದೆ. ದೇಶದ ರಹಸ್ಯ ಮಾಹಿತಿಯನ್ನು ಕದಿಯುವ ಹಾಗೂ ನಾಶ ಮಾಡುವ ಪರಸ್ಪರ ಸಮರ ನಡೆದಿವೆ. ದೇಶದಲ್ಲಿ ಇಂದು ಅರ್ಹತೆಯುಳ್ಳ ಪದವೀಧರರ ಹಾಗೂ ಕೌಶಲ್ಯವುಳ್ಳ ಯುವ ಜನಾಂಗದ ಕೊರತೆ ಎದ್ದು ಕಾಣುತ್ತದೆ. ಓದಿನ ಜೊತೆಗೆ ವ್ಯವಹಾರಿಕ ಜ್ಞಾನವನ್ನು ಬೆಳೆಸಿಕೊಂಡು ತಾವು ಮುಂದೆ ಏನಾಗಬೇಕು ಎಂಬುದನ್ನು ಮೊದಲೇ ನಿರ್ಧರಿಸಿ, ಮುನ್ನಡೆದರೆ ಎಲ್ಲವೂ ಕೈಗೂಡುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎಸ್.ಎನ್. ಹೆಗಡೆ ಮಾತನಾಡಿ, ಅಂಕಿ-ಸಂಖ್ಯೆಗಳ ಸಂಗ್ರಹವಿಲ್ಲದೆ ಹೋದರೆ ಸ್ಪರ್ಧೆ ಇಲ್ಲದೆ ಹೋಗುತ್ತದೆ. ಉದಾರತೆ, ಖಾಸಗೀತನ ಹಾಗೂ ವಿಶ್ವ ಮಾರುಕಟ್ಟೆಯ ನೀತಿಯಿಂದಾಗಿ ಅರ್ಹತೆ, ಕೌಶಲ್ಯತೆ ಹಾಗೂ ದಕ್ಷತೆ ಇರುವ ಎಲ್ಲ ವಿದ್ಯಾರ್ಥಿಗಳಿಗೂ ಉದ್ಯೋಗದಲ್ಲಿ ಅವಕಾಶಗಳಿವೆ ಎಂದರು.
ಡಾ. ಎಂ.ಪಿ. ಅನುರಾಧಾ ಸ್ವಾಗತಿಸಿದರು. ಡಾ. ಎಸ್.ವಿ. ಗುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಗೀತಾ ಚಳಗೇರಿ ವಂದಿಸಿದರು. ವಿಜಯಲಕ್ಷ್ಮಿ ಜೋಗಣ್ಣವರ, ಶೃತಿ ಪಾಂಗ್ರಿ ನಿರೂಪಿಸಿದರು. ಅನುಷಾ ಶನೋಯಿ, ವಿಜಯ ಬಡಿಗೇರ, ಅರ್ಚನಾ ಭಟ್ ಪರಿಚಯಿಸಿದರು. ಸುಷ್ಮಾ ಹೆಗಡೆ ಪ್ರಾರ್ಥಿಸಿದರು. ಅನಂತರ ದುಡಿಮೆ ಹಾಗೂ ಉದ್ಯೋಗ ಅಂಕಿ-ಅಂಶಗಳು, ಭಾರತದ ಸಂಖ್ಯಾಶಾಸ್ತ್ರ ಪಿತಾಮಹ ಪ್ರಶಾಂತ ಚಂದ್ರ ಮಹಾಲನೊಬಿಸ್ ಕುರಿತಾದ ಪವರ್ ಪಾಯಿಂಟ್ ಪ್ರದರ್ಶನವನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು.

Stay up to date on all the latest ಧಾರವಾಡ news with The Kannadaprabha App. Download now
facebook twitter whatsapp