ಅಮೃತ್ ಮಹಲ್ ತಳಿ ಅಭಿವೃದ್ಧಿಗೆ ಕ್ರಮ: ಜಯಚಂದ್ರ

Published: 03rd December 2013 02:00 AM  |   Last Updated: 02nd December 2013 11:15 AM   |  A+A-


Posted By : Rashmi
ಕ.ಪ್ರ.ವಾರ್ತೆ    ಹಾಸನ    ಡಿ.2
ಅಮೃತ್ ಮಹಲ್ ತಳಿಯ ರಾಸುಗಳ ಸಂತತಿ ಅಳಿವಿನ ಅಂಚಿನಲ್ಲಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಈ ತಳಿಯ ರಾಸುಗಳ ಸಂಖ್ಯೆ 2007ರ ಜಾನುವಾರು ಗಣತಿಯಂತೆ 95,931 ಇರುತ್ತದೆ. ಅಮೃತ್ ಮಹಲ್ ತಳಿಗಳನ್ನು ರಾಜ್ಯದಲ್ಲಿ ಹೆಚ್ಚು ಅಭಿವೃದ್ಧಿಪಡಿಸಲು 2010-11ನೇ ಸಾಲಿನಿಂದ ವಿಶೇಷ ಯೋಜನೆಯನ್ನು ರೂಪಿಸಲಾಗಿದೆ ಎಂದು ಪಶು ಸಂಗೋಪನೆ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು,   6 ಆಯ್ದ ಅಮೃತ್ ಮಹಲ್ ಕಾವುಲುಗಳಲ್ಲಿ 1625 ಎಕರೆ ಪ್ರದೇಶದಲ್ಲಿ ಸಿಲ್ವಿಪ್ಯಾಶ್ಚರ್ ನೆಡುತೋಪು ಮೂಲಕ ಮೇವು ಅಭಿವೃದ್ಧಿಪಡಿಸಲು ಪರಿಣಿತ ಸಂಸ್ಥೆಗಳಾದ ಅರಣ್ಯ ಇಲಾಖೆ, ಕೆ.ಆರ್.ಐ.ಡಿ.ಎಲ್, ಲೋಕೋಪಯೋಗಿ ಮತ್ತು ಒಳನಾಡು ಬಂದರು ಮತ್ತು ಜಲಸಾರಿಗೆ ಇಲಾಖೆ ಇವುಗಳ ಮೂಲಕ ಮೂಲಭೂತ ಸೌಕರ್ಯ ಅಭಿವೃದ್ಧಿ, ಜಾನುವಾರು ತಡೆಕಂದಕ ನಿರ್ಮಾಣ ಮಾಡಿ ಒತ್ತುವರಿಯಿಂದ ಸಂರಕ್ಷಿಸಲು ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ಇದಕ್ಕಾಗಿ, ರು. 487.50 ಲಕ್ಷ ಅನುದಾನ ಪರಿಣಿತ ಸಂಸ್ಥಗಳಿಗೆ ನೀಡಲಾಗಿದೆ ಎಂದು ಹೇಳಿದರು.
ಈ ಅನುದಾನದಲ್ಲಿ ಸಿಲ್ವಿಪ್ಯಾಶ್ಚರ್ ಮೂಲಕ ಕಾವಲು ಅಭಿವೃದ್ಧಿಪಡಿಸಿದ ನಂತರ ಅಮೃತ್ ಮಹಲ್ ತಳಿ ರಾಸುಗಳನ್ನು ಪಾಲನೆ ಮಾಡಲು ಅವಕಾಶ ಉಂಟಾಗುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಮೃತ್ ಮಹಲ್ ತಳಿ ಹೋರಿ ಕರುಗಳನ್ನು ಉತ್ಪಾದನೆ ಮಾಡಿ ಆಸಕ್ತ ರೈತರಿಗೆ ತಳಿ ಅಭಿವೃದ್ಧಿಗಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು. ಉತ್ಕೃಷ್ಠ ಅಮೃತ್ ಮಹಲ್ ತಳಿ ಹೋರಿಗಳಿಂದ ವೀರ್ಯೋತ್ಪಾದನೆ ಮಾಡಿ ಘನೀಕೃತ ವೀರ್ಯ ನಳಿಕೆಗಳನ್ನು ರಾಜ್ಯದ ಎಲ್ಲಾ ಪಶು ವೈದ್ಯಕೀಯ ಸಂಸ್ಥೆಗಳಲ್ಲಿ ಕೃತಕ ಗರ್ಭಧಾರಣೆಗೆ ಉಪಯೋಗಿಸಲಾಗುತ್ತಿದೆ. ಇದರಿಂದ 2003ರಲ್ಲಿ 58,569ರಷ್ಟಿದ್ದ ಈ ತಳಿಯ ಹೋರಿಗಳ ಸಂಖ್ಯೆ 2007ರ ಜಾನುವಾರು ಗಣತಿಯ ಪ್ರಕಾರ ರಾಜ್ಯದಲ್ಲಿ ಈ ರಾಸುಗಳ ಸಂಖ್ಯೆ 95,931ಕ್ಕೆ ಏರಿಕೆಯಾಗಿದೆ.
ಕರ್ನಾಟಕ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾನಿಲಯದ ಜಾನುವಾರು ಸಂಶೋಧನೆ ಮತ್ತು ಮಾಹಿತಿ ಕೇಂದ್ರ ಕೊನೇಹಳ್ಳಿ, ತಿಪಟೂರು ತಾಲ್ಲೂಕು ಇಲ್ಲಿಗೆ ಅಮೃತ್ ಮಹಲ್ ತಳಿಯ 25 ಹೆಣ್ಣು ಮತ್ತು 2 ಗಂಡು ಕರುಗಳನ್ನು ಈ ಕ್ಷೇತ್ರದಿಂದ ಸಂಶೋಧನೆಗಾಗಿ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಪ್ರತಿ ವರ್ಷ ಅಮೃತ್ ಮಹಲ್ ತಳಿ ಸಂವರ್ಧನಾ ಕೇಂದ್ರ, ಉಪಕೇಂದ್ರಗಳಲ್ಲಿ ಉತ್ಪತ್ತಿಯಾದ ಅಮೃತ್ ಮಹಲ್ ತಳಿಯ ಗಂಡು ಕರುಗಳನ್ನು ಇಲಾಖೆ ಉಪಯೋಗಕ್ಕೆ ಬಳಸಿಕೊಂಡು ಉಳಿದವುಗಳನ್ನು ಬಹಿರಂಗ ಹರಾಜು ಮೂಲಕ ತಳಿ ಅಭಿವೃದ್ಧಿ ನೀಡಲಾಗುತ್ತಿದೆ. ಅಮೃತ್ ಮಹಲ್ ತಳಿ ಮತ್ತು ಕಾವುಲುಗಳ ಸಮಗ್ರ ಸುಧಾರಣೆ ಮಾಡಲು ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಪರಿಶೀಲಿಸಿ ವರದಿ ನೀಡಲು ತಜ್ಞರ ಸಮಿತಿ ರಚಿಸಿದೆ. ಸಮಿತಿ ಸಮೀಕ್ಷೆ ನಡೆಸುತ್ತಿದೆ.
 ರಾಜ್ಯದಲ್ಲಿ ಅಮೃತ್ ಮಹಲ್ ತಳಿಯ ಅಭಿವೃದ್ಧಿಗಾಗಿ ಒಟ್ಟು 2 ಕೇಂದ್ರಗಳು ಮತ್ತು 5 ಉಪಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ರಾಜ್ಯದಲ್ಲಿ ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಮಂಡ್ಯ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳಲ್ಲಿ 63 ಅಮೃತ್ ಮಹಲ್ ಕಾವಲುಗಳನ್ನು ಗುರುತಿಸಲಾಗಿದೆ. ಇವುಗಳ ಒಟ್ಟು ಅಂದಾಜು ವಿಸ್ತೀರ್ಣ 68,440.06 ಎಕರೆಗಳಾಗಿದೆ. ಈ ವಿಸ್ತೀರ್ಣದಲ್ಲಿ ಅಂದಾಜು 8996.33 ಎಕರೆ ಪ್ರದೇಶ ಅತಿಕ್ರಮಣವಾಗಿರುತ್ತದೆ. ಸರ್ಕಾರದಿಂದ ನಾನಾ ಸರ್ಕಾರಿ ಸಂಸ್ಥೆಗಳಿಗೆ ಅಂದಾಜು 21,976.14 ಎಕರೆ ವಿಸ್ತೀರ್ಣವನ್ನು ನೀಡಲಾಗಿದೆ ಹಾಗೂ ಖುಲ್ಲಾ ವಿಸ್ತೀರ್ಣ ಅಂದಾಜು 37,466.39 ಇರುತ್ತದೆ ಎಂದು  ಪಟೇಲ್ ಶಿವರಾಂ  ಕೇಳಿದ ಪ್ರಶ್ನೆಗೆ ಸಚಿವರು ವಿವರಿಸಿದರು.


Stay up to date on all the latest ಹಾಸನ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp