ಮೊಗೇರ ಜನಾಂಗಕ್ಕೆ ಸರ್ಕಾರದ ಪ್ರೋತ್ಸಾಹ ಅಗತ್ಯ: ಬಿ.ಶಿವಪ್ಪ

Published: 05th May 2014 02:00 AM  |   Last Updated: 05th May 2014 01:18 AM   |  A+A-


Posted By : Rashmi
ಸೋಮವಾರಪೇಟೆ: ಮೊಗೇರ ಜನಾಂಗದವರು ಉತ್ತುಂಗಕ್ಕೇರಲು ಸರ್ಕಾರದ ಸಹಾಯಹಸ್ತದ ಪ್ರೋತ್ಸಾಹ ಅಗತ್ಯ ಎಂದು ಜಿ.ಪಂ.ಅಧ್ಯಕ್ಷ, ಮೊಗೇರ ಸೇವಾ ಸಮಾಜದ ರಾಜ್ಯ ಉಪಾಧ್ಯಕ್ಷ ಬಿ.ಶಿವಪ್ಪ ಅಭಿಪ್ರಾಯಪಟ್ಟಿದ್ದಾರೆ.
ನಗರದ ಸ.ಪ.ಪೂ.ಕಾಲೇಜು ಮೈದಾನದಲ್ಲಿ ಜಿಲ್ಲಾ ಮೊಗೇರ ಸೇವಾ ಸಮಾಜದ ವತಿಯಿಂದ ಎರಡು ದಿನಗಳ ಕಾಲ ಆಯೋಜಿಸಿರುವ ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕ್ರೀಡಾ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮೊಗೇರ ಸಮಾಜ ಇತ್ತೀಚಿನ ದಿನಗಳಲ್ಲಿ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುತ್ತಿದೆ. ಅಸಂಘಟಿತರಾಗಿದ್ದ ಮೊಗೇರ ಸಮಾಜ ಬಾಂಧವರನ್ನು ಒಂದೆಡೆ ಸೇರಿಸಿ, ಸಂಘಟನಾತ್ಮಕವಾಗಿ ಜನಾಂಗದ ವಿವಿಧ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಶಿಕ್ಷಣಕ್ಕೆ ಒತ್ತು ಅಗತ್ಯ: ಸಮಾಜದ ಜಿಲ್ಲಾಧ್ಯಕ್ಷ ರವಿ ಮಾತನಾಡಿ, ಸಮಾಜದ ಮೂಲಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹ ನೀಡಲಾಗುತ್ತಿದೆ. ಮೊಗೇರ ಸಮಾಜದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳೊಂದಿಗೆ ಪ್ರತಿಭಾವಂತ ಕ್ರೀಡಾಪಟುಗಳಿದ್ದು, ಇವರನ್ನು ಗುರುತಿಸಿ, ಪ್ರತಿಭೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಳೆದ 9 ವರ್ಷಗಳಿಂದ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಕ್ರೀಡಾಕೂಟದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಬಹುಮಾನ ವಿತರಣಾ ಸಮಾರಂಭ ನೆರವೇರಿತು.
ನಂತರ ಮಂಗಳೂರಿನ ಕಲಾವಿದರಿಂದ ಯಕ್ಷಗಾನ ಕಾರ್ಯಕ್ರಮ ನಡೆಯಿತು.


ಸೋಮವಾರಪೇಟೆ: ಎರಡು ದಿನಗಳ ಮೊಗೇರ ಸೇವಾ ಸಮಾಜ ಆಯೋಜಿತ ರಾಜ್ಯ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿರುವ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದ ಆವರಣದಲ್ಲಿ ಎಲ್ಲಿ ಕೇಳಿದರಲ್ಲಿ ತುಳು ಸಂಭಾಷಣೆ, ಕ್ರೀಡಾ ಪಟುಗಳಿಗೆ ತುಳುವಿನಲ್ಲಿಯೇ ಪ್ರೋತ್ಸಾಹದೊಂದಿಗೆ ಆಚಾರ- ವಿಚಾರಗಳು ತುಳುವಿನಲ್ಲಿ ನಡೆಯುತ್ತಾ ಇದ್ದದ್ದು ಕಂಡಾಗ ದ.ಕ. ಜಿಲ್ಲೆಯಲ್ಲಿ ಕ್ರೀಡಾಕೂಟ ನಡೆಯುತ್ತಿದೆ ಎನೋ ಎನಿಸುವಂತಿತ್ತು.
ಜಿಲ್ಲಾ ಮೊಗೇರ ಸೇವಾ ಸಮಾಜದ ಕ್ರೀಡಾ ಸಮಿತಿಯ ಆಶ್ರಯದಲ್ಲಿ ಆಯೋಜಿಸಲಾಗಿರುವ 10ನೇ ವರ್ಷದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳು ಮಹಿಳೆಯರಾದಿಯಾಗಿ ಮೊಗೇರ ಬಾಂಧವರು ಪಾಲ್ಗೊಂಡರು.
ತುಳು ಭಾಷೆಯಲ್ಲಿಯೇ ಪರಸ್ಪರ ಕ್ರೀಡಾ ಸ್ಫೂರ್ತಿ ತುಂಬುತಿದ್ದ ಕ್ರೀಡಾಪ್ರೇಮಿಗಳ ಚಪ್ಪಾಳೆಗೆ ಮೈದಾನದಲ್ಲಿದ್ದ ಕ್ರೀಡಾಪಟುಗಳು ಇನ್ನಷ್ಟು ಉತ್ಸುಕರಾಗಿ ಆಕರ್ಷಕ ಆಟ ಪ್ರದರ್ಶಿಸುತ್ತಿದ್ದರು.
ರಾಜ್ಯ ಮಟ್ಟದ ಕ್ರಿಕೆಟ್‌ನ ಪ್ರತಿ ಪಂದ್ಯವೂ ರೋಮಾಂಚನಕಾರಿಯಾಗಿತ್ತು. ಇದರೊಂದಿಗೆ ಯುವತಿಯರ ವಿಭಾಗದಲ್ಲಿ ಥ್ರೋಬಾಲ್, ಪುರುಷರ ವಿಭಾಗದಲ್ಲಿ ಕಬಡ್ಡಿ ಪಂದ್ಯಗಳು ಅತ್ಯಂತ ರೋಚಕವಾಗಿತ್ತು.
ಮೊಗೇರ ಜನಾಂಗ ಮುಖ್ಯವಾಹಿನಿಗೆ ಬರುವಲ್ಲಿ ವಿಳಂಬವಾದರೂ ಅವರಲ್ಲಿ ಅಡಗಿರುವ ಕ್ರೀಡಾ ಹಾಗೂ ಸಾಂಸ್ಕೃತಿಕ ಪ್ರತಿಭೆಗಳು ಮಾತ್ರ ಹೊರ ಚಿಮ್ಮುತ್ತಿದ್ದದ್ದು ಮಾತ್ರ ಎಲ್ಲರನ್ನೂ ಆಶ್ಚರ್ಯಗೊಳಿಸಿತ್ತು.
ಕೊಡಗು ಜಿಲ್ಲೆ ಮಾತ್ರವಲ್ಲದೆ ಮಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಬೆಂಗಳೂರಿನಿಂದಲೂ ಮೊಗೇರ ಜನಾಂಗದ ಕ್ರೀಡಾಪಟುಗಳು ಆಗಮಿಸಿದ್ದರು. ತಾಲೂಕು ಮೊಗೇರ ಸೇವಾ ಸಮಾಜದ ಸದಸ್ಯರು ಸಕುಟುಂಬರಾಗಿ ಆಗಮಿಸಿದ್ದರಿಂದ ಇಡೀ ಕಾಲೇಜು ಮೈದಾನ ಆವರಣದಲ್ಲಿ ತುಳು ಪರ್ಬದ ವಾತಾವರಣ ಸೃಷ್ಟಿಸಿತ್ತು.
ವಿವಿಧ ಕ್ರೀಡಾಕೂಟಗಳಿಗೆ ಚಾಲನೆ ನೀಡಿದ ಜಿ.ಪಂ. ಅಧ್ಯಕ್ಷ ಹಾಗೂ ಮೊಗೇರ ಸಮಾಜದ ರಾಜ್ಯ ಉಪಾಧ್ಯಕ್ಷ ಬಿ. ಶಿವಪ್ಪ, ಜಿಲ್ಲಾಧ್ಯಕ್ಷ ರವಿ, ಪ್ರಧಾನ ಕಾರ್ಯದರ್ಶಿ ಚಂದ್ರು, ತಾಲೂಕು ಸಮಿತಿ ಅಧ್ಯಕ್ಷ ಹರೀಶ್, ಕ್ರೀಡಾಧ್ಯಕ್ಷ ಗಣೇಶ್ ಕಾರ್ಯಕ್ರಮವನ್ನು ಯಶಸ್ಸುಗೊಳಿಸಲು ವ್ಯವಸ್ಥೆ ಕಲ್ಪಿಸಿದ್ದರು.
ಕ್ರಿಕೆಟ್ ಪ್ರಶಸ್ತಿ: ಕೊಡಗು ಜಿಲ್ಲೆಯ ಬೆಟ್ಟಗೇರಿಯ ಓಂಸಿಸಿ ತಂಡ ಮೊಗೇರ ಕಪ್ಪನ್ನು ತನ್ನದಾಗಿಸಿಕೊಳ್ಳುವ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದರೆ, ಸಾಕಷ್ಟು ಪ್ರಯತ್ನದ ನಡುವೆ ಯಶಸ್ಸು ಕಾಣದೆ ವಿಫಲವಾದ ಸಕಲೇಶಪುರ ಬಾಳ್ಲುಪೇಟೆಯ ಬಂದಿಹಳ್ಳಿ ತಂಡ ದ್ವಿತೀಯ ಸ್ಥಾನ ಪಡೆಯುವ ಮೂಲಕ ತೃಪ್ತಿ ಪಟ್ಟುಕೊಂಡಿತು.
ಕಬಡ್ಡಿ ಪ್ರಶಸ್ತಿ:  ಸುಳ್ಯದ ಸ್ವಾಮಿ ಕೊರಗಜ್ಜ ಕೊಕ್ಕಡ ತಂಡ ಕಬಡ್ಡಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೆ, ಸೋಮವಾರಪೇಟೆ ಸಮೀಪದ ಕೆಂಚಮ್ಮನಬಾಣೆಯ ಶಕ್ತಿ ಫ್ರೆಂಡ್ಸ್ ತಂಡ ದ್ವಿತೀಯ ಸ್ಥಾನ ಪಡೆಯಿತು. ಕೆಂಚಮ್ಮನ ಬಾಣೆಯ ಮಂಜು ಬೆಸ್ಟ್ ಕ್ಯಾಚರ್ ಪ್ರಶಸ್ತಿ ಪಡೆದರೆ, ಕೊರಗಜ್ಜ ತಂಡದ  ಹರೀಶ್ ಬೆಸ್ಟ್ ರೈಡರ್ ಪ್ರಶಸ್ತಿಗಳಿಸಿದರು.
ಥ್ರೋಬಾಲ್: ಥ್ರೋಬಾಲ್ ಸ್ಪರ್ಧೆಯಲ್ಲಿ ಕಾಂಡನಕೊಲ್ಲಿ ಮಹಿಳೆಯರ ತಂಡ ಪ್ರಥಮ ಸ್ಥಾನಗಳಿಸಿದರೆ, ಕಿರಗಂದೂರು ಮಹಿಳೆಯರ ತಂಡ ದ್ವಿತೀಯ ಸ್ಥಾನಗಳಿಸಿತು.
 ತೀರ್ಪುಗಾರರಾಗಿ ಮಂಜುನಾಥ್, ರಾಜೇಶ್, ಪ್ರವೀಣ್, ರಮೇಶ್, ಚಂದ್ರ, ಸುರೇಶ್, ಅನಿಲ್, ಸುನಿಲ್, ಸುರೇಶ್, ವಿಶ್ವನಾಥ್ ಕಾರ್ಯನಿರ್ವಹಿಸಿದರು. ಗಣೇಶ್, ಜನಾರ್ದನ್, ಸತೀಶ್, ವೀಕ್ಷಕ ವಿವರಣೆ ನೀಡಿದರು.


Stay up to date on all the latest ಕೊಡಗು news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp