ಭಾವನಾತ್ಮಕ ಬಂಧನದಲ್ಲಿ ಮಹಿಳೆ: ಡಾ. ಧರಣಿದೇವಿ

Published: 13th February 2014 02:00 AM  |   Last Updated: 13th February 2014 01:12 AM   |  A+A-


Posted By : Vishwanath
ಮೈಸೂರು: ಪುರುಷರಂತೆ ಮಹಿಳೆಯರೂ ಸಾಮರ್ಥ್ಯ ಹೊಂದಿರುವುದನ್ನು ಅರಿತೇ ಪುರುಷ ಸಮಾಜವು ಆಕೆಯನ್ನು ಭಾವನಾತ್ಮಕವಾಗಿ ಕಟ್ಟಿ ಹಾಕಿದೆ ಎಂದು ಕರ್ನಾಟಕ ಪೊಲೀಸ್ ಅಕಾಡೆಮಿ ಉಪನಿರ್ದೇಶಕಿ ಡಾ. ಧರಣಿದೇವಿ ಮಾಲಗತ್ತಿ ವಿಷಾದಿಸಿದರು.
ಬುಧವಾರ ನಗರದಲ್ಲಿ ಸಂಸ್ಕೃತಿ ಮಹಿಳಾ ಸಂಘಟನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪುರಾಣಗಳಲ್ಲಿ ಹೆಣ್ಣನ್ನು ಶಕ್ತಿ ಸ್ವರೂಪಿಣಿ ಎಂದು ಕರೆದಿದ್ದರೂ ಆಕೆಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಯಿತು. ಭೋಗದ ವಸ್ತುವಾಗಿ ಬಳಸಿಕೊಂಡು ಇಂದಿಗೂ ಮುಂದುವರೆಸಿಕೊಂಡು ಬರಲಾಗಿದೆ ಎಂದರು.
ಮಹಿಳೆಯರು ತಮ್ಮಲ್ಲಿರುವ ಕೌಶಲ್ಯವನ್ನು ವೃದ್ಧಿಸಿಕೊಂಡು ಪರಸ್ಪರ ಚೆನ್ನಾಗಿದ್ದು, ಬದುಕುವ ವಾತಾವರಣವನ್ನು ಸೃಷ್ಟಿಸಿಕೊಳ್ಳಭೇಕು. ತಮ್ಮ ರಕ್ಷಣೆಗೆ ಯಾರನ್ನೂ ನಂಬಿಕೊಂಡು ಕುಳಿತುಕೊಳ್ಳಬಾರದು. ತಾವೇ ಸನ್ನದ್ಧರಾಗಿ ರಕ್ಷಣೆ ಮಾಡಿಕೊಳ್ಳುವ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ನಿರ್ಮಲಾ ಮಠಪತಿ ಮಾತನಾಡಿ, ಮಹಿಳೆಯರು ಶೋಷಣೆ ಮುಕ್ತ ಅಸಮಾನತೆಯಿಂದ ಹೊರಬರಲು ಸಂಘಟನೆ ಅಗತ್ಯ. ಪ್ರತಿಯೊಬ್ಬರು ಚಿಂತನೆ ಮಾಡಿ ಒಗ್ಗಟ್ಟಿನಿಂದ ತಮ್ಮ ಹಕ್ಕನ್ನು ಚಲಾಯಿಸಿ ಮುಕ್ತವಾಗಿ ಬದುಕಬೇಕು ಎಂದು ಕರೆ ನೀಡಿದರು.
ಇದೇ ವೇಳೆ 13 ವರ್ಷದ ಐಶ್ವರ್ಯ ಎಂಬ ಬಡ ವಿದ್ಯಾರ್ಥಿನಿಯ ಒಂದು ವರ್ಷದ ಶಿಕ್ಷಣದ ಖರ್ಚು ವೆಚ್ಚವನ್ನು ಭರಿಸಲಾಯಿತು. ಕೌಟಿಲ್ಯ ವಿದ್ಯಾಲಯದ ಪ್ರಾಂಶುಪಾಲೆ ಡಾ.ಎಲ್.ಸವಿತಾ, ನ್ಯಾಷನಲ್ ಅಡ್ವೆಂಚರ್ ಫೌಂಡೇಷನ್‌ನ ನಿರ್ದೇಶಕಿ ರುಕ್ಮಿಣಿ ಚಂದ್ರನ್, ಮೈಸೂರು ವಿವಿಯ ಆಹಾರ ಮತ್ತು ಪೌಷ್ಟಿಕಾಂಶ ವಿಭಾಗದ ಉಪನ್ಯಾಸಕಿ ಡಾ. ಜಮುನಾ ಪ್ರಕಾಶ್, ಸಂಸ್ಥೆಯ ಸಂಸ್ಥಾಪಕಿ ಶ್ರೀದೇವಿ ಭೂಪಾಲಂ ಇದ್ದರು.

Stay up to date on all the latest ಮೈಸೂರು news with The Kannadaprabha App. Download now
facebook twitter whatsapp