ಮೌಲ್ಯ ಕಳಕೊಂಡ ನಾಡು ತಲೆ ಎತ್ತಲು ಆಗದು: ಡಾ. ಬಂಜಗೆರೆ

ಶಿವಮೊಗ್ಗ: ಹಲವು ವರ್ಷಗಳಿಂದ ಕನ್ನಡ ಸಾಹಿತ್ಯದ ನಾನಾ ಪ್ರಕಾರಗಳಿಗೆ ಪುಸ್ತಕ ಬಹುಮಾನ ನೀಡುತ್ತಿರುವ ಕರ್ನಾಟಕ ಸಂಘ ಶನಿವಾರ ಸಂಜೆ 2014ನೇ ಸಾಲಿನ ಬಹುಮಾನವನ್ನು ಕನ್ನಡಪ್ರಭ ಮುಖ್ಯ ಉಪಸಂಪಾದಕ ಕೀರ್ತಿ ಕೋಲ್ಗಾರ್ ಅವರ ಅಂಕಣ ಕೃತಿ -ತೇಜಸ್ವಿ ಬದುಕಿದ್ದಾರೆ- ಸೇರಿದಂತೆ 12 ಕೃತಿಗಳ ಲೇಖಕರಿಗೆ ಪ್ರದಾನ ಮಾಡಿತು. ಕರ್ನಾಟಕ ಸಂಘದ ಅಧ್ಯಕ್ಷೆ ವಿಜಯಾ ಶ್ರೀಧರ್ ಅವರು ಕೃತಿಕಾರರಿಗೆ ಪುಸ್ತಕ ಬಹುಮಾನ ಪ್ರದಾನ ಮಾಡಿದರು.
ಮುಖ್ಯ ಅತಿಥಿ ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಡಾ. ಬಂಜಗೆರೆ ಜಯಪ್ರಕಾಶ್ ಮಾತನಾಡಿ, ನಾವು ಯಾವುದನ್ನು ಕೀಳು ಎಂದು ಕರೆಯುತ್ತೇವೆಯೋ ಅದು ಮೂಲದಲ್ಲಿಯೇ ಇದ್ದಿದ್ದು. ಗೆದ್ದವರ ಅನುಸರಿಸುತ್ತಾ ನಾವು ನಮ್ಮತನವನ್ನು ಕಳೆದುಕೊಂಡರೆ ಸಾಹಿತ್ಯ, ಸಂಸ್ಕೃತಿಯ ಸಂವೇದನೆ ಅಸಾಧ್ಯ ಎಂದು ಹೇಳಿದರು.
ಮೌಲ್ಯಗಳನ್ನು ಕಳೆದುಕೊಂಡ ನಾಡು ತಲೆ ಎತ್ತಲು ಸಾಧ್ಯವಿಲ್ಲ. ನಾವು ಭೌತಿಕ ಸಂಪತ್ತನ್ನು ಹೆಚ್ಚಿಸಿಕೊಳ್ಳುವುದಕ್ಕಿಂತ ನೈತಿಕ ಸಂಪತ್ತು ಬೆಳೆಸಿಕೊಳ್ಳಬೇಕು. ನಾವು ಸಮುದಾಯಗಳಾಗಿ ಬದುಕುವವರು. ಎಲ್ಲರನ್ನೂ ಒಗ್ಗೂಡಿಸಿಕೊಂಡು ಮುನ್ನಡೆಯಬೇಕು ಎಂದು ತಿಳಿಸಿದರು.
ಕರ್ನಾಟಕ ಸಂಘದ ಗೌರವ ಕಾರ್ಯದರ್ಶಿ ಡಾ. ಎಚ್.ಎಸ್. ನಾಗಭೂಷಣ್ ಪ್ರಾಸ್ತಾವಿಕ ಭಾಷಣ ಮಾಡಿದರು. ಪ್ರೊ. ಕೆ.ಜಿ. ವೆಂಕಟೇಶ್ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ಲೇಖಕರೊಂದಿಗೆ ಸಂವಾದ ನಡೆಯಿತು.
ಪುರಸ್ಕೃತರು: ಸುಶೀಲಾ ಡೋಣೂರ (ಕುವೆಂಪು ಬಹುಮಾನ, ಕಾದಂಬರಿ- ನ್ಯಾನ್ಸಿ), ಆರ್.ಪಿ. ಹೆಗಡೆ (ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ ಬಹುಮಾನ, ಅನುವಾದ ಕೃತಿ- ಆದಿ ಅನಾದಿ), ಭಾರತಿ ಬಿ.ವಿ. (ಎಂ.ಕೆ. ಇಂದಿರಾ ಬಹುಮಾನ, ಕೃತಿ- ಸಾಸಿವೆ ತಂದವಳು), ಅಲ್ಲಾಗಿರಿರಾಜ್ ಕನಕಗಿರಿ (ಪಿ. ಲಂಕೇಶ್ ಬಹುಮಾನ, ಕೃತಿ- ನೂರ್ ಗಜ್ಹಲ್), ತಾರಿಣಿ ಶುಭದಾಯಿನಿ (ಡಾ. ಜಿ.ಎಸ್. ಶಿವರುದ್ರಪ್ಪ ಬಹುಮಾನ, ಕವನ ಸಂಕಲನ- ಪೂರ್ವಭಾಷಿ), ಕೀರ್ತಿ ಕೋಲ್ಗಾರ್ (ಡಾ. ಹಾ.ಮಾ. ನಾಯಕ ಬಹುಮಾನ, ಅಂಕಣ ಬರಹ- ತೇಜಸ್ವಿ ಬದುಕಿದ್ದಾರೆ), ಮೌನೇಶ ಬಡಿಗೇರ (ಡಾ. ಯು.ಆರ್. ಅನಂತಮೂರ್ತಿ ಬಹುಮಾನ, ಸಣ್ಣ ಕಥಾ ಸಂಕಲನ- ಮಾಯಾಕೋಲಾಹಲ), ಡಾ. ಪ್ರಕಾಶ್ ಗರುಡ (ಡಾ. ಕೆ.ವಿ. ಸುಬ್ಬಣ್ಣ ಬಹುಮಾನ, ನಾಟಕ- ಬೆತ್ತಾಟ), ಜಿ.ಎನ್. ಅಶೋಕವರ್ದನ (ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ ಬಹುಮಾನ, ಪ್ರವಾಸ ಸಾಹಿತ್ಯ- ಕುಮಾರ ಪರ್ವತದ ಸುತ್ತಮುತ್ತ), ಡಾ. ಬಿ.ಎಸ್. ಶೈಲಜಾ (ಹಸೂಡಿ ವೆಂಕಟಶಾಸ್ತ್ರಿ ಬಹುಮಾನ, ವಿಜ್ಞಾನ ಸಾಹಿತ್ಯ- ಬಾಲಂಕೃತ ಚುಕ್ಕಿ ಧೂಮಕೇತು), ಹ.ಸ. ಬ್ಯಾಕೋಡ (ಡಾ. ನಾ. ಡಿಸೋಜ ಬಹುಮಾನ, ಮಕ್ಕಳ ಸಾಹಿತ್ಯ- ಹಾರದಿರಲಿ ಪ್ರಾಣಪಕ್ಷಿ)
ಡಾ. ಆಶಾ ಬೆನಕಪ್ಪ (ಡಾ. ಎಚ್.ಡಿ. ಚಂದ್ರಪ್ಪಗೌಡ ಬಹುಮಾನ ವೈದ್ಯ ಸಾಹಿತ್ಯ- ಅಂತ-ಕರಣ)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com