ಅಪ್ಪೆಮಿಡಿ ರಕ್ಷಣೆಗೆ ಮುಂದಾಗಲಿ

ಕ.ಪ್ರ.ವಾರ್ತೆ, ಸಾಗರ, ಮಾ.29
ಮಲೆನಾಡಿನ ಅತ್ಯಂತ ವೈಶಿಷ್ಟ್ಯಪೂರ್ಣ ಬೆಳೆಗಳಲ್ಲಿ ಅಪ್ಪೆಮಿಡಿಯು ಒಂದಾಗಿದೆ. ಔಷಧೀಯ ಗುಣ ಹೊಂದಿರುವ ಹಾಗೂ ಲಾಭದಾಯಕವಾದ ಅಪ್ಪೆಮಿಡಿ ಬೆಳೆ ಸಂರಕ್ಷಿಸುವ ನಿಟ್ಟಿನಲ್ಲಿ ರೈತರು ಗಮನಹರಿಸಬೇಕು ಎಂದು ಉಪವಿಭಾಗಾಧಿಕಾರಿ ಡಾ. ಬಿ. ಉದಯಕುಮಾರ್ ಶೆಟ್ಟಿ ಹೇಳಿದರು.
ಇಲ್ಲಿನ ಕಾನ್ಲೆ ದೇವಪ್ಪ ಛತ್ರದಲ್ಲಿ ಶುಕ್ರವಾರ ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ಸಹ್ಯಾದ್ರಿ ಶ್ರೇಣಿಯ ಅಪ್ಪೆಮಿಡಿ ಮಾವು ಬೆಳೆಗಾರರ ಒಕ್ಕೂಟ, ಹೆಗ್ಗೋಡು ನೀಲಕಂಠೇಶ್ವರ ಮಾವು ಬೆಳೆಗಾರರ ಸಂಘ ಹಾಗೂ ಮರಡವಳ್ಳಿ ಶರಾವತಿ ಅಪ್ಪೆಮಿಡಿ ಮಾವು ಬೆಳೆಗಾರರ ಸಂಘದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾವು ಮೇಳ ಉದ್ಘಾಟಿಸಿ ಮಾತನಾಡಿದರು.
ವಿನಾಶ ಅಂಚಿನಲ್ಲಿ: ಅಪ್ಪೆಮಿಡಿ ಮಾವು ಬೆಳೆಗೆ ಮಲೆನಾಡಿನ ವಾತಾವರಣ ಪೂರಕವಾಗಿದೆ. ಇತರೆ ಭಾಗಗಳಲ್ಲಿ ಈ ಮಾವಿನ ತಳಿ ಸಂರಕ್ಷಿಸುವುದು ಕಷ್ಟಸಾಧ್ಯ. ಬೇರೆ- ಬೇರೆ ಕಾರಣಗಳಿಂದಾಗಿ ಅಪ್ಪೆಮಿಡಿ ಮಾವು ತಳಿಗಳು ವಿನಾಶದ ಅಂಚಿನಲ್ಲಿದೆ. ಈ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ರೈತ ಜಾಗೃತಿ ಮೂಡಿಸುವ ಮೂಲಕ ತಳಿ ಉಳಿಸುವ ಪ್ರಯತ್ನ ಮಾಡುತ್ತಿದೆ. ಇರುವ ತಳಿಯನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.
ಲಾಭದಾಯಕ: ಅಪ್ಪೆಮಿಡಿ ಮಾವು ಬೆಳೆ ತೆಗೆಯುವುದು ಅತ್ಯಂತ ಲಾಭದಾಯಕವಾದ ಉದ್ಯೋಗವಾಗಿದೆ. ಪ್ರತಿ ಮರದಲ್ಲಿ 100ರಿಂದ 150 ಕೆಜಿ ಮಿಡಿ ಬೆಳೆಯಲು ಸಾಧ್ಯವೆಂದು ಸಮೀಕ್ಷೆಯಿಂದ ತಿಳಿದು ಬಂದಿದ್ದು, ಅಂದಾಜು 10 ಸಾವಿರ ಒಂದು ಮರದಿಂದ ಆದಾಯ ಪಡೆಯಬಹುದು. ಜಮೀನು ಹಾಗೂ ತೋಟದ ತಲೆಗಳಲ್ಲಿ ಇರುವ ಖಾಲಿ ಜಾಗದಲ್ಲಿ ಸಸಿ ಹಾಕುವುದರಿಂದ ಉಪಕಸುಬು ಪ್ರೋತ್ಸಾಹ ಮಾಡುವ ಜತೆಗೆ ತಳಿಯೊಂದನ್ನು ಉಳಿಸಿದಂತೆ ಆಗುತ್ತದೆ ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಡಾ. ವಿಶ್ವನಾಥ್, ಈಗಾಗಲೆ ಮಲೆನಾಡಿನಲ್ಲಿ 75ಕ್ಕೂ ಹೆಚ್ಚು ಅಪ್ಪೆಮಿಡಿ ಮಾವಿನ ತಳಿ ಗುರುತಿಸಲಾಗಿದ್ದು, 25ಕ್ಕೂ ಹೆಚ್ಚು ತಳಿ ಸಂರಕ್ಷಿಸಲಾಗಿದೆ. ಈ ಮೇಳದಲ್ಲಿ 40ಕ್ಕೂ ಹೆಚ್ಚಿನ ತಳಿಗಳ ಪ್ರದರ್ಶನ ಹಾಗೂ ಮಾರಾಟ ಏರ್ಪಡಿಸಲಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ಮಲೆನಾಡು ಭಾಗದಲ್ಲಿ ವಿಶೇಷ ಎಂದೆ ಗುರುತಿಸಲಾಗುವ ಚೆನ್ನಿಗನತೋಟ ಜೀರಿಗೆ, ಕೂರಂಬಳ್ಳಿ ಜೀರಿಗೆ, ದೊಂಬೆಸರ ಜೀರಿಗೆ, ಜೇನಿ ಜೀರಿಗೆ, ಅಡ್ಡೇರಿ ಜೀರಿಗೆ, ಪಡವಗೋಡು ಜೀರಿಗೆ, ಕಾಳಿಗುಂಡಿ ಅಪ್ಪೆ, ಭೀಮನಕೋಣೆ ಕೆಂಚಪ್ಪೆ, ಜಲ್ಲೆ ಅಪ್ಪೆ, ಸೂಡೂರು ಲಕ್ಷ್ಯ ಅಪ್ಪೆ ಹೀಗೆ ವಿವಿಧ ಜಾತಿಯ ಮಾವಿನ ತಳಿಗಳು ಮೇಳದಲ್ಲಿ ಭಾಗವಹಿಸಿದ್ದು, 250ಕ್ಕೂ ಹೆಚ್ಚು ಬೆಳೆಗಾರರು ಮೇಳದಲ್ಲಿ ಪಾಲ್ಗೊಂಡು ತಳಿ ವೈವಿಧ್ಯತೆ ತಿಳಿಸಿಕೊಟ್ಟಿರುವುದು ನಿಜಕ್ಕೂ ಗಮನಾರ್ಹ ಎಂದು ಹೇಳಿದರು.
ತೋಟಗಾರಿಕೆ ಇಲಾಖೆಯ ಹಿರಿಯ ನಿರ್ದೇಶಕ ಡಿ.ಕೆ. ತಿಮ್ಮಪ್ಪ, ಕಾಂತರಾಜ್, ರಾಮಕೃಷ್ಣ, ಪ್ರಗತಿಪರ ಮಾವು ಬೆಳೆಗಾರರಾದ ಬೇಳೂರು ಸುಬ್ರಾವ್, ಆನೆಗುಳಿ ಸುಬ್ರಾವ್, ಸಹ್ಯಾದ್ರಿ ಅಪ್ಪೆಮಿಡಿ ಮಾವು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಗಣೇಶ್ ಕಾಕಲ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಇನ್ನಿತರರು ಹಾಜರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com