ಸಂಸ್ಕೃತಿ, ಪರಂಪರೆ ಆಚರಣೆಯಾಗಲಿ

ಕುಮಟಾ: ಅನುಪಮ ದೃಷ್ಟಿಯಿರುವ ಭಾರತೀಯ ಸಂಸ್ಕೃತಿಯ ಶ್ರೇಷ್ಠವಾದ ಮಣ್ಣಿನ ಹಾಗೂ ಪರಂಪರೆಯ ಆಚರಣೆಯಾಗಬೇಕು ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಸ್ವಾಮೀಜಿ ನುಡಿದರು.
ಅವರು ಯುಗಾದಿ ಉತ್ಸವ ಸಮಿತಿಯ ವತಿಯಿಂದ ಏರ್ಪಡಿಸಲಾದ ಯುಗಾದಿ ಉತ್ಸವ ಸಮಾರಂಭವನ್ನು ಮಣಕಿ ಮೈದಾನದ ಸ್ವಾಮಿ ವಿವೇಕಾನಂದ ವೇದಿಕೆಯಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇಂದು ನಾವು ಪಾಶ್ಚಿಮಾತ್ಯ ಸಂಸ್ಕೃತಿ ಪ್ರಭಾವಕ್ಕೆ ಒಳಗಾಗಿ ನಮ್ಮತನವನ್ನು ಮರೆಯುತ್ತಿದ್ದೇವೆ. ನಾವು ಮಲಗಿ ನಿದ್ದೆ ಮಾಡುತ್ತಿರುವುದರ ಪರಿಣಾಮವಾಗಿ ಅನ್ಯರು ನಮ್ಮ ದೇಶವನ್ನು ಈ ಹಿಂದೆ ದೋಚಿದರು. ಇವತ್ತಿಗೂ ಭಾರತ ಬ್ರಿಟಿಷರ ಕೈಲಿದೆ. ಪಾಶ್ಚಿಮಾತ್ಯ ಸಂಸ್ಕೃತಿಯ ಗುಲಾಮಗಿರಿಯಲ್ಲಿ ನಾವಿದ್ದೇವೆ. ನಮ್ಮ ದೇಶ ಹಾಗೂ ಸಂಸ್ಕೃತಿಯ ಉಪೇಕ್ಷೆ ಮಾಡಬಾರದು. ಭಾರತೀಯ ಗ್ರಂಥಗಳು ಶ್ರೇಷ್ಠತೆಯನ್ನು ಸಾರುತ್ತಿರುವ ಮಹಾಗ್ರಂಥಗಳಾಗಿವೆ. ಭಾರತೀಯ ಸಂಸ್ಕೃತಿಯಲ್ಲಿ ವರ್ಷದ ಪ್ರಾರಂಭದ ದಿನ ಯುಗಾದಿಯಾಗಿದೆ. ಭಾರತೀಯ ಕಾಲಗಣನೆ ವೈಜ್ಞಾನಿಕವಾಗಿದೆ.
ಯುಗಾದಿ ಪ್ರಾರಂಭದ ದಿನ: ಮಾಸಗಳು, ತಿಥಿಗಳು, ಗೃಹ, ಚಂದ್ರ, ತಾರೆಗಳನ್ನು ಆಧರಿಸಿದೆ. ಇದರ ಲೆಕ್ಕಾಚಾರದಲ್ಲಿಯೇ ಗ್ರಹಣ ಇತ್ಯಾದಿಗಳನ್ನು ಹೇಳಲಾಗುತ್ತದೆ. ಇಂದು ಕ್ಯಾಲೆಂಡರ್ ದಿನದ ಆಚರಣೆ ಜಗತ್ತಿನ ದೊಡ್ಡ ಅಂಧಾನುಕರಣೆಯಾಗಿದೆ. ಭಾರತೀಯ ಮಾಸ, ತಿಂಗಳುಗಳು ವೈಜ್ಞಾನಿಕವಾಗಿ, ಸಮರ್ಪಕವಾಗಿದ್ದು ಆ ಪ್ರಕಾರ ಯುಗಾದಿಯೇ ಹೊಸವರ್ಷ ಪ್ರಾರಂಭದ ದಿನವಾಗಿದೆ. ಇದನ್ನು ಹೊಸ ವರ್ಷವೆಂದು ಆಚರಿಸುವ ಮೂಲಕ ನಮ್ಮ ಮಣ್ಣಿನ ಹಾಗೂ ನಮ್ಮ ಪರಂಪರೆಯ ಆಚರಣೆಯಾಗಬೇಕು. ಯುಗಾದಿ ಉತ್ಸವವನ್ನು ಆಚರಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವು ಇದಾಗಿದೆ ಎಂದು ಶ್ಲಾಘಿಸಿದರು. ವಕ್ತಾರರಾಗಿ ವಿಹಿಪ ರಾಜ್ಯ ಸಂಚಾಲಕ ಕೇಶವ ಹೆಗಡೆ, ರಾಮಾಯಣ, ಮಹಾಭಾರತ ಹಾಗೂ ಭಗವದ್ಗೀತೆಯನ್ನು ಜಗತ್ತಿಗೆ ನೀಡಿದ ಭಾರತವು ಶ್ರೇಷ್ಠ ಸಂಸ್ಕೃತಿಯನ್ನು ಹೊಂದಿದೆ. ಸುಪ್ತವಾದ ರಾಷ್ಟ್ರ ಭಕ್ತಿಯನ್ನು ಎಚ್ಚರಿಸುವ ಮೂಲಕ ಭಾರತವನ್ನು ಶ್ರೇಷ್ಠ ರಾಷ್ಟ್ರವನ್ನಾಗಿಸಿ ಉನ್ನತಿಯತ್ತ ಸಾಗಿಸುವ ಹಾಗೂ ಯುವ ಶಕ್ತಿಯನ್ನು ರಾಷ್ಟ್ರ ಶಕ್ತಿಯನ್ನಾಗಿಸುವ ಕಾರ್ಯವಾಗಬೇಕು ಎಂದರು.
ಶೋಭಾಯಾತ್ರೆ: ಡಾ. ಸುರೇಶ ಹೆಗಡೆ ಶಂಖನಾದ ಮಾಡಿದರು. ಸಿವಿಎಸ್‌ಕೆ ಪ್ರೌಢಶಾಲೆ ವಿದ್ಯಾರ್ಥಿಗಳು ವೇದಘೋಷ ಮಾಡಿದರು. ಅಶ್ವಿನಿ ಮುಕ್ರಿ ಪ್ರಾರ್ಥಿಸಿದರು. ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ಆರ್.ಎನ್. ಶೇಟ್ ಸ್ವಾಗತಿಸಿದರು. ಸಮಿತಿ ಸಂಚಾಲಕ ಮುರಳೀಧರ ಪ್ರಭು ಪ್ರಾಸ್ತಾವಿಕ ಮಾತನಾಡಿದರು. ಸಮಿತಿ ಉಪಾಧ್ಯಕ್ಷ ಎಸ್.ಜಿ. ನಾಯ್ಕ ಶ್ರೀಗಳಿಗೆ ಫಲಪುಷ್ಪ ಸಮರ್ಪಣೆ ಮಾಡಿದರು ಹಾಗೂ ಸಮಿತಿಯ ಎಲ್ಲ ಸದಸ್ಯರು ಪುಷ್ಪ ಸಮರ್ಪಿಸಿದರು. ವೇ.ಮೂ. ವಿಶ್ವೇಶ್ವರ ಭಟ್ಟ ಪಂಚಾಂಗ ಪಠಣ ಮಾಡಿದರು. ಎಲ್ಲರಿಗೂ ಬೇವು ಬೆಲ್ಲ ವಿತರಿಸಲಾಯಿತು. ತಂದೆ ತಾಯಿಗಳ ಪೂಜನೀಯ ಕಾರ್ಯಕ್ರಮ ಜರುಗಿತು. ಶ್ರೀಗಳು ಶ್ರೀರಾಮ ವಿಜಯ ಮಹಾಮಂತ್ರ ಜಪಾನುಷ್ಠಾನ ದೀಕ್ಷೆ ನೀಡಿದರು. ಸಮಿತಿ ಕಾರ್ಯದರ್ಶಿ ಬಿ.ಎನ್‌ಕೆ ನಾಗರಾಜ ವಂದಿಸಿದರು. ಪ್ರಾರಂಭದಲ್ಲಿ ವೈವಿಧ್ಯಮಯ ಸ್ತಬ್ಧ ಚಿತ್ರಗಳು, ಸುಗ್ಗಿ ಕೋಲಾಟ, ಭಜನೆ, ಬೇಡರ ವೇಷ ಇತ್ಯಾದಿಗಳಿಂದ ಶೋಭಾಯಾತ್ರೆಯು ನಗರ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು. ಆನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com