ಪ್ರಶಸ್ತಿ: ಯಕ್ಷಗಾನ ಕಲಾವಿದರ ಕಡೆಗಣನೆ

ಕನ್ನಡಪ್ರಭ ವಾರ್ತೆ, ಕಾರವಾರ, ಅ. 31
ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಅರ್ಹ ಯಕ್ಷಗಾನ ಕಲಾವಿದರನ್ನು ಹಾಗೂ ಯಕ್ಷಗಾನಕ್ಕಾಗಿಯೆ ದುಡಿಯುತ್ತಿರುವವರನ್ನು ಕಡೆಗಣಿಸಿರುವುದು ಯಕ್ಷಗಾನ ವಲಯದಲ್ಲಿ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ. ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹತೆ ಇದ್ದೂ ಕಳೆದ ಹಲವು ವರ್ಷಗಳಿಂದ ಪ್ರಶಸ್ತಿಯಿಂದ ವಂಚಿತರಾಗುತ್ತಿರುವ ಕಲಾವಿದರ ಸಂಖ್ಯೆ ಬಡಗು ಹಾಗೂ ತೆಂಕು ಹೀಗೆ ಎರಡು ತಿಟ್ಟುಗಳಲ್ಲಿಯೂ ಇದೆ.
ಉತ್ತರ ಕನ್ನಡ ಜಿಲ್ಲೆಯಲ್ಲೂ ಸಾಕಷ್ಟು ಜನರಿದ್ದಾರೆ. ನಿರಂತರವಾಗಿ ಯಕ್ಷಗಾನ ರಂಗದಲ್ಲಿ ತೊಡಗಿಕೊಂಡು ಸತತ ಸಾಧನೆ ಮಾಡುತ್ತಿರುವ ಕೃಷ್ಣ ಯಾಜಿ ಬಳ್ಕೂರ, ಹಿಮ್ಮೇಳದಲ್ಲಿ ತಮ್ಮದೆ ಆದ ಛಾಪು ಮೂಡಿಸಿದ ಅದ್ವಿತೀಯ ಮೃದಂಗ ವಾದಕ ಶಂಕರ ಭಾಗವತ ಯಲ್ಲಾಪುರ, ಯಕ್ಷ ಸೇವೆಯನ್ನು ಸಮರ್ಥವಾಗಿ ನಡೆಸುತ್ತಿರುವ ಗೋಪಾಲ ಆಚಾರ್ಯ ತೀರ್ಥಹಳ್ಳಿ, ಹೆಮ್ಮೆಯ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ, ಎಂ.ಎ. ನಾಯ್ಕ ಸೇರಿದಂತೆ ಕಲಾವಿದರ ಸಮೂಹವೇ ಬಡಗು ತಿಟ್ಟಿನಲ್ಲಿದೆ.
ಇನ್ನು ತೆಂಕು ತಿಟ್ಟಿನಲ್ಲೂ ಅರ್ಹತೆ ಇದ್ದೂ ಪ್ರಶಸ್ತಿಯಿಂದ ವಂಚಿತರಾಗುತ್ತಿರುವ ಕಲಾವಿದರ ಸಂಖ್ಯೆ ಸಾಕಷ್ಟಿದೆ. ಆದರೆ ಪ್ರಶಸ್ತಿ ನೀಡುವಾಗ ಇವರಾರನ್ನೂ ಪರಿಗಣಿಸುತ್ತಿಲ್ಲ. ಕೇವಲ ಪ್ರಶಸ್ತಿಗಾಗಿ ಲಾಬಿ ಮಾಡುವವರು, ಸಚಿವರ ಹಿಂದೆ ಗಿರಕಿ ಹೊಡೆಯುವವರಿಗೆ ಪ್ರಶಸ್ತಿ ಲಭಿಸುತ್ತಿದೆ ಎಂದು ಕಲಾವಿದರೆ ಬೇಸರ ವ್ಯಕ್ತಪಡಿಸುತ್ತಾರೆ.
ಹಿರಿಯ ಕಲಾವಿದರೊಂದಿಗೆ ಚರ್ಚಿಸಿಲ್ಲ: ಯಕ್ಷಗಾನದಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದ ಚಿಟ್ಟಾಣಿ ರಾಮಚಂದ್ರ ಹೆಗಡೆ, ಈ ಹಿಂದೆ ರಾಜ್ಯೋತ್ಸವ ಪ್ರಶಸ್ತಿ ಪಡೆದ ಗೋಡೆ ನಾರಾಯಣ ಹೆಗಡೆ, ನೆಬ್ಬೂರು ನಾರಾಯಣ ಭಾಗವತ, ಹೊಸ್ತೋಟ ಮಂಜುನಾಥ ಭಾಗವತ ಮತ್ತಿತರ ಹಿರಿಯ ಕಲಾವಿದರಿದ್ದಾರೆ. ಕನಿಷ್ಠ ಪಕ್ಷ ಇವರೊಂದಿಗೆ ಸಮಾಲೋಚನೆ ನಡೆಸಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದರೆ ಅರ್ಹರಿಗೆ ಪ್ರಶಸ್ತಿ ಲಭಿಸುವಂತಾಗುತ್ತಿತ್ತು.
ಯಕ್ಷಗಾನದಲ್ಲಾಗಲಿ, ತಾಳಮದ್ದಳೆಯಲ್ಲಾಗಲಿ ಅಥವಾ ಯಕ್ಷಗಾನದ ಯಾವುದೆ ಪ್ರಕಾರದಲ್ಲಾಗಲಿ ಕೆಲಸ ಮಾಡದವರಿಗೂ ಯಕ್ಷಗಾನದಲ್ಲಿ ಸಾಧನೆಯ ಬಗ್ಗೆ ಪ್ರಶಸ್ತಿ ಲಭಿಸುತ್ತಿರುವುದು ತೀವ್ರ ವಿಷಾದದ ಸಂಗತಿಯಾಗಿದೆ ಎಂದು ಹಿರಿಯ ಯಕ್ಷಗಾನ ಕಲಾವಿದರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಈ ಬಾರಿ ಯಕ್ಷಗಾನಕ್ಕೆ ನಾರಾಯಣ ಹಾಸ್ಯಗಾರ ನೆಲ್ಲಿಕಟ್ಟೆ, ಕಾಸರಗೋಡ ಎನ್ನುವವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಆದರೆ ಬಡಗಿನ ಬಹುತೇಕ ಕಲಾವಿದರಿಗೆ ಆ ವ್ಯಕ್ತಿಯ ಹೆಸರು ಕೇಳಿದ್ದೂ ನೆನಪಿಲ್ಲ. ಕೆಲವರು ಕರ್ಕಿ ನಾರಾಯಣ ಹಾಸ್ಯಗಾರ ಅವರಿಗೆ ಪ್ರಶಸ್ತಿ ಲಭಿಸಿದೆ ಎಂದು ತಿಳಿದು ಅವರಿಗೆ ದೂರವಾಣಿ ಮೂಲಕ ಅಭಿನಂದನೆ ಹೇಳಿದ್ದಾರೆ. ಇದರಿಂದ ಖುಷಿಗೊಂಡ ನಾರಾಯಣ ಹಾಸ್ಯಗಾರ ಅಲ್ಲಿಲ್ಲಿ ವಿಚಾರಿಸಿದಾಗ ಪ್ರಶಸ್ತಿ ಲಭಿಸಿದ್ದು ತಮಗಲ್ಲ ಎಂದು ಗೊತ್ತಾಗಿದೆ. ಏಕೆಂದರೆ ಕರ್ಕಿಯ ನಾರಾಯಣ ಹಾಸ್ಯಗಾರ ಎಲ್ಲರಿಗೂ ಗೊತ್ತು. ಆದರೆ ಕಾಸರಗೋಡ ನಾರಾಯಣ ಹಾಸ್ಯಗಾರ ಈ ಭಾಗದಲ್ಲಿ ಅಪರಿಚಿತರಾಗಿರುವುದರಿಂದ ಇಂಥ ಮುಜುಗರದ ಪ್ರಸಂಗವೂ ನಡೆದುಹೋಗಿದೆ. ಈ ಕುರಿತು ಪದ್ಮಶ್ರೀ ವಿಜೇತ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರನ್ನು ಕನ್ನಡಪ್ರಭ ಪ್ರಶ್ನಿಸಿದಾಗ, ಅರ್ಹತೆ ಇದ್ದವರಿಗೆ ಪ್ರಶಸ್ತಿ ನೀಡಬೇಕು.
ಎಲ್ಲೋ ಕುಳಿತು ಪ್ರಶಸ್ತಿಗಾಗಿಯೇ ದುಡಿಯುವವರಿಗೆ ಪ್ರಶಸ್ತಿ ನೀಡಬಾರದು. ಪ್ರಶಸ್ತಿಗೆ ಒಂದು ಘನತೆ ಬರಬೇಕಾದರೆ ಯೋಗ್ಯ ಕಲಾವಿದನನ್ನು ಆಯ್ಕೆ ಮಾಡಬೇಕು. ಅರ್ಹ ಕಲಾವಿದರ ಸಂಖ್ಯೆ ತೆಂಕು, ಬಡಗು ಎರಡು ತಿಟ್ಟುಗಳಲ್ಲೂ ಇದೆ. ಆದರೆ ಅರ್ಹರು ಪ್ರಶಸ್ತಿಯಿಂದ ವಂಚಿತರಾಗುತ್ತಿದ್ದಾರೆ ಎಂದು ಉತ್ತರಿಸಿದರು.
ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರನ್ನು ಕನ್ನಡಪ್ರಭ ಈ ಕುರಿತು ಪ್ರಶ್ನಿಸಿದಾಗ, ಪ್ರಶಸ್ತಿಗೆ ಅರ್ಹತೆಯನ್ನೇ ಮಾನದಂಡವಾಗಿಸಿಕೊಳ್ಳಬೇಕು. ಅರ್ಹತೆಯನ್ನು ಪರಿಗಣಿಸದೆ ಇದ್ದರೆ ಯಕ್ಷಗಾನದ ಹೆಸರಿನಲ್ಲಿ ಯಾರೂ ಕೂಡ ಪ್ರಶಸ್ತಿಯನ್ನು ಪಡೆಯಲು ಸಾಧ್ಯ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕಾಗಿದೆ ಎಂದು ಉತ್ತರಿಸಿದರು. ಇನ್ನು ಮುಂದಾದರೂ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಅರ್ಹತೆ ಇರುವವರನ್ನು ಮಾತ್ರ ಪ್ರಶಸ್ತಿಗೆ ಪರಿಗಣಿಸಬೇಕು ಹೊರತೂ ಪ್ರಶಸ್ತಿಗಾಗಿ ಲಾಬಿ ಮಾಡುವವರಿಗೆ ಪ್ರಶಸ್ತಿ ನೀಡಬಾರದು ಎಂದು ಯಕ್ಷಗಾನದ ವಲಯದಿಂದ ಕೂಗು ಕೇಳಿಬರುತ್ತಿದೆ.

ಮಾನದಂಡ ಗೊತ್ತಾಗುತ್ತಿಲ್ಲ
ಯಕ್ಷಗಾನ ಕ್ಷೇತ್ರದಲ್ಲಿ 5-6 ದಶಕಗಳಿಂದ ಸತತವಾಗಿ ದುಡಿಯುತ್ತಿರುವ ಕಲಾವಿದರಿದ್ದಾರೆ. ಇವರಲ್ಲಿ ಬಹುತೇಕ ಕಲಾವಿದರು ಅರ್ಜಿ ಹಾಕುವ ಗೋಜಿಗೂ ಹೋಗುವುದಿಲ್ಲ. ಉದಾಹರಣೆಗೆ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಪ್ರಶಸ್ತಿ ಕೊಡಿ ಎಂದು ಅರ್ಜಿ ಹಾಕಲಾರರು. ಹಾಗಂತ ಅವರು ತೀರ್ಮಾನಿಸಿದ್ದಾರೆ. ಆದರೆ ಅಂಥ ಕಲಾವಿದರನ್ನು ಹುಡುಕಿ ಪ್ರಶಸ್ತಿ ನೀಡುವುದಕ್ಕೆ ಯಾರೂ ಮನಸ್ಸು ಮಾಡುತ್ತಿಲ್ಲ. ಆಯ್ಕೆ ಸಮಿತಿಯ ಮುಂದೆ ಯಾವ ಮಾನದಂಡವಿದೆಯೋ ಗೊತ್ತಾಗುತ್ತಿಲ್ಲ.
-ವಸಂತಕುಮಾರ್ ಕತಗಾಲ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com