ಕಣ್ಮರೆಯಾಗುತ್ತಿದೆಯೇ ಕದಂಬೋತ್ಸವ?

ಕನ್ನಡಪ್ರಭ ವಾರ್ತೆ, ಶಿರಸಿ ನ.19
ಜಿಲ್ಲೆಯಾದ್ಯಂತ ಕರಾವಳಿ ಉತ್ಸವದ ಗೌಜು-ಗಲಾಟೆ ಮೇರೆ ಮೀರಿದೆ. ದಾಂಡೇಲಿ, ಶಿರಸಿ, ಕುಮಟಾ, ಭಟ್ಕಳದಲ್ಲೂ ಕರಾವಳಿ ಉತ್ಸವ ನಡೆಯುತ್ತಿದೆ. ಇವುಗಳ ಸಂಭ್ರಮದಲ್ಲಿ ಕದಂಬೋತ್ಸವ ಮಾತ್ರ ಕಣ್ಮರೆಯಾಗಿದೆ.
ದಾಂಡೇಲಿಯಲ್ಲಿ ಕಾಳಿ ಉತ್ಸವ ವಾರ್ಷಿಕವಾಗಿ ಏರ್ಪಡಿಸಲಾಗುತ್ತಿತ್ತು. ಆದರೀಗ ಅದು ಖಾಸಗಿ ಸಹಭಾಗಿತ್ವದಲ್ಲಿ ಸಾರ್ವಜನಿಕರಿಗೆ ಗೊತ್ತಾಗುವುದರೊಳಗೆ ಮುಗಿದು ಹೋಗಿದೆ. ವೈಭವದ ಸರ್ಕಾರಿ ಉತ್ಸವವಾಗಿದ್ದ ಕದಂಬೋತ್ಸವ ಶಿರಸಿ ತಾಲೂಕಿನ ಬನವಾಸಿಯಲ್ಲಿ ಪ್ರತಿವರ್ಷ ನಡೆಯಬೇಕು ಎನ್ನುವುದು ಸರ್ಕಾರದ ಆದೇಶದಲ್ಲಿಯೇ ಇದೆ. ಕದಂಬೋತ್ಸವದ ಸರ್ಕಾರಿ ಆದೇಶ ಹೊರಬಿದ್ದು ಒಂದೂವರೆ ದಶಕವಾದರೂ ಈವರೆಗೂ ಪ್ರತಿವರ್ಷ ನಿಯಮಿತವಾಗಿ ನಡೆಯುತ್ತಿಲ್ಲ. ಕದಂಬೋತ್ಸವದ ಸಂದರ್ಭ ಪಂಪ ಪ್ರಶಸ್ತಿ ವಿತರಣೆಯೂ ನಡೆಯುತ್ತದೆ. ಆದರೆ, ಈಗ ಎಲ್ಲವೂ ಅದಲುಬದಲು. ಹಿಂದಿನ ಪಂಪ ಪ್ರಶಸ್ತಿಯನ್ನು ಈ ವರ್ಷ ಮೈಸೂರಿನಲ್ಲಿ ಜೆ.ಎಚ್. ನಾಯಕರಿಗೆ ನೀಡಲಾಯಿತು.
ಕದಂಬೋತ್ಸವ ಆಚರಣೆಯಲ್ಲಿ ಎಲ್ಲ ಪಕ್ಷಗಳ ಸರ್ಕಾರಗಳೂ ಎಡವಿದೆ. ದಳ ಸರ್ಕಾರದಲ್ಲೂ ನಿಯಮಿತವಾಗಿ ನಡೆಯಲಿಲ್ಲ. ಕಾಂಗ್ರೆಸ್, ಬಿಜೆಪಿ ಸರ್ಕಾರದಲ್ಲೂ ನಿರ್ಲಕ್ಷಿಸಲಾಯಿತು. ಈಗ ಮತ್ತೆ ಕಾಂಗ್ರೆಸ್ ಸರ್ಕಾರ ಕದಂಬೋತ್ಸವ ಕುರಿತಂತೆ ಈವರೆಗೂ ಬಾಯಿಬಿಟ್ಟಿಲ್ಲ. ನಾಡ ಹಬ್ಬವಾಗಿ ಆಚರಿಸಲ್ಪಡುವ ಕದಂಬೋತ್ಸವದ ಕುರಿತಂತೆ ಕಾಳಜಿಯೇ ಇಲ್ಲ ಎನ್ನುವ ಮಾತು ವ್ಯಾಪಕವಾಗಿದೆ.
ಜನಸಾಮಾನ್ಯರ ಬೇಡಿಕೆಯಂತೆ ಪ್ರತಿವರ್ಷ ಬನವಾಸಿಯಲ್ಲಿ ಉತ್ಸವ ನಡೆಯಬೇಕು. ಅದರಲ್ಲಿ ಪಂಪ ಪ್ರಶಸ್ತಿ ಪ್ರದಾನ ಮಾಡಬೇಕು ಎನ್ನುವ ಆಶಯ ಜಿಲ್ಲೆಯ ಜನರದ್ದು. ಆದರೆ, ಆಡಳಿತದ ಚುಕ್ಕಾಣಿ ಹಿಡಿದವರು ತಮ್ಮ ಮನಸ್ಸಿಗೆ ತೋಚಿದಂತೆ ಕದಂಬೋತ್ಸವ ಆಚರಿಸುತ್ತಾರೆ. ಸ್ಥಳೀಯ ಜನರ ಮಾತಿಗೆ ಬೆಲೆಯಿಲ್ಲ. ಆಳರಸರ ಮೂಗಿನ ನೇರಕ್ಕೆ ಉತ್ಸವ ನಡೆಯುವಂತಾಗಿದೆ.
ಎರಡು ವರ್ಷಕ್ಕೊಮ್ಮೆ ಅಥವಾ ಮೂರು ವರ್ಷಕ್ಕೊಮ್ಮೆ ಕದಂಬೋತ್ಸವ ಹಮ್ಮಿಕೊಳ್ಳಲಾಗುತ್ತದೆ. ಹೀಗೆ ಹಮ್ಮಿಕೊಳ್ಳಲಾದ ಉತ್ಸವದಲ್ಲಿ ನಾಡಿನ ಪ್ರಸಿದ್ಧ ಕಲಾವಿದರು, ರಾಷ್ಟ್ರೀಯ ಮಟ್ಟದ ಕಲಾವಿದರು ಪಾಲ್ಗೊಂಡು ಸಾಂಸ್ಕೃತಿಕ ಸುಗ್ಗಿಯನ್ನೇ ಉಣಬಡಿಸುತ್ತಾರೆ. ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಉತ್ಸವದ ಪ್ರಾಥಮಿಕ ಸಭೆ ಶಿರಸಿ ಅಥವಾ ಕಾರವಾರದಲ್ಲಿ ನಡೆದರೆ ಉಳಿದೆಲ್ಲ ತಯಾರಿಗಳು ಬೆಂಗಳೂರು ಕೇಂದ್ರೀಕೃತವಾಗಿಯೇ ನಡೆಯುತ್ತವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಸಿದ್ಧಪಡಿಸಿ ಇಡಲಾದ ಕಲಾವಿದರ ಹೆಸರೇ ಅಂತಿಮಗೊಳ್ಳುತ್ತದೆ. ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಿದರೂ ನೆಪಮಾತ್ರಕ್ಕೆ. ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಈ ವರೆಗೂ ಆರಂಭಗೊಂಡಿಲ್ಲ. ಸ್ಟಾರ್ ಅಲ್ಲದ ಕಲಾವಿದರನ್ನು ಕಡೆಗಣಿಸಲಾಗುತ್ತದೆ ಎನ್ನುವ ದೂರು ಈವರೆಗಿನದ್ದಾಗಿತ್ತು. ನಾಡಿನ ಉತ್ಸವ ಎನ್ನುವುದನ್ನು ಒಪ್ಪುವುದಾದರೂ ಸ್ಥಳೀಯರಿಗೂ ಒಂದಿಷ್ಟು ಪ್ರೋತ್ಸಾಹ ನೀಡುವ ಅಗತ್ಯವಿದೆ. ಕದಂಬೋತ್ಸವದಲ್ಲಿ ನೀಡದ ಪಂಪ ಪ್ರಶಸ್ತಿ ಅರ್ಥ ಕಳೆದುಕೊಳ್ಳುತ್ತಿದೆ ಎನ್ನುವ ಟೀಕೆಯೂ ಈಗಾಗಲೇ ವ್ಯಕ್ತವಾಗಿದೆ. ಒಟ್ಟಾರೆ ಕದಂಬೋತ್ಸವ ಕಣ್ಮರೆಯ ಹಂತದಲ್ಲಿದೆ ಎನ್ನುವುದು ಸುಳ್ಳಲ್ಲ.
ಕಾರವಾರಕ್ಕೆ ಸೀಮಿತವಾಗಿದ್ದ ಕರಾವಳಿ ಉತ್ಸವ ಜಿಲ್ಲೆಯಾದ್ಯಂತ ಪಸರಿಸಿದೆ. ಇದು ಸರ್ಕಾರಿ ಉತ್ಸವವಲ್ಲದಿದ್ದರೂ ಆಡಳಿತ ಯಂತ್ರ ಕರಾವಳಿ ಉತ್ಸವದಲ್ಲಿ ಸಂಪೂರ್ಣ ತೊಡಗಿಸಿಕೊಂಡಿದೆ. ಎಲ್ಲ ಇಲಾಖೆಗಳೂ ಖಾಲಿ ಖಾಲಿ ಹೊಡೆಯುತ್ತಿವೆ. ಕರಾವಳಿ ತೀರದ ಜನರಲ್ಲಿ ಸಾಂಸ್ಕೃತಿಕ ಭಾವನೆ ಬಿಂಬಿಸಲು ಕರಾವಳಿ ಉತ್ಸವ ಹಮ್ಮಿಕೊಳ್ಳುತ್ತಿರುವುದು ಸ್ವಾಗತಾರ್ಹ. ಆದರೆ, ಸ್ಥಳೀಯ ಕಲಾವಿದರು, ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆದಾಗ ಅದು ಅರ್ಥಪೂರ್ಣವಾಗುತ್ತದೆ.  ಸಾಂಸ್ಕೃತಿಕ ಹಿನ್ನೆಲೆ ಹೊಂದಿದವರಿಗೆ, ಕನ್ನಡಪರ ಸಂಘಟನೆಗಳಿಗೆ ಆದ್ಯತೆ ಇಲ್ಲ ಎನ್ನುವ ದೂರು ಕೇಳಿಬಂದಿದೆ. ಘಟ್ಟದ ಮೇಲಿನ ತಾಲೂಕುಗಳಾದ ಮಲೆನಾಡು ಪ್ರದೇಶದಲ್ಲೂ ಕರಾವಳಿ ಉತ್ಸವ ಆಭಾಸವಾಗಿದೆ. ಈ ಕುರಿತಂತೆ ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಘಟ್ಟದ ಮೇಲೆ ಆಚರಿಸುವ ಉತ್ಸವಗಳನ್ನು ಮಲೆನಾಡು ಉತ್ಸವ ಎಂದು ಕರೆಯಿರಿ ಎನ್ನುವ ಸಲಹೆ ನೀಡಿದ್ದರೂ ಅದನ್ನು ಪರಿಗಣಿಸಲಾಗಿಲ್ಲ. ಈಗಾಗಲೇ ಜಿಲ್ಲೆಯಲ್ಲಿ ಅಪಸ್ವರ ಕೇಳಿಬರುತ್ತಿದೆ. ಕರಾವಳಿ ಉತ್ಸವಗಳಿಗಾಗಿ ಎಲ್ಲ ಇಲಾಖೆಗಳಿಂದ ನಿರ್ದಿಷ್ಟಪಡಿಸಿದ ಮೊತ್ತ ಆಕರಿಸಲಾಗುತ್ತಿದೆ. ಪ್ರಮುಖ ಗುತ್ತಿಗೆದಾರರಿಗೂ ಇದರ ಬಿಸಿ ತಟ್ಟಿದೆ. ಯಾವುದೇ ಕೆಲಸವಾಗಬೇಕಾದರೂ ಕರಾವಳಿ ಉತ್ಸವಕ್ಕೆ ವಂತಿಗೆ ನೀಡಬೇಕು ಎನ್ನುವ ಅಲಿಖಿತ ನಿಯಮ ಜಾರಿಯಲ್ಲಿದೆ ಎನ್ನುವುದರ ಕುರಿತಂತೆ ಜಿಲ್ಲಾಡಳಿತ ಸ್ಪಷ್ಟನೆ ನೀಡಬೇಕಾಗಿದೆ. ಈ ರೀತಯ ಚಂದಾ ವಸೂಲಿ ಇನ್ನಷ್ಟು ಭ್ರಷ್ಟಾಚಾರಕ್ಕೆ ಆಸ್ಪದ ನೀಡಲಿದೆ ಎನ್ನುವ ಮಾತು ಸಾರ್ವಜನಿಕ ವಲಯದಿಂದ ಕೇಳಿಬರುತ್ತಲಿದೆ. ಉತ್ಸವಗಳು ಸಾಂಸ್ಕೃತಿಕತೆಯನ್ನು ಪ್ರತಿಬಿಂಬಿಸಿ ಸೌಹಾರ್ದ ವಾತಾವರಣ ಮೂಡಿಸುತ್ತದೆ ಎನ್ನುವ ಅಭಿಪ್ರಾಯವಿದ್ದರೂ ಉತ್ಸವಗಳ ಪೂರ್ವ ಸಿದ್ಧತೆಯಲ್ಲಿ ಅಪಸ್ವರ ಬಾರದಂತೆ ಎಚ್ಚರ ವಹಿಸುವುದು ಜಿಲ್ಲಾಡಳಿತದ ಜವಾಬ್ದಾರಿ.

ವಿಶ್ವಾಮಿತ್ರ ಹೆಗಡೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com