ಮಾರುಕಟ್ಟೆಗೆ ಬಂತು ಅಪ್ಪೆಮಿಡಿ: ಜಾಗಬಿಡಿ

-ಶಂಕರ ಭಟ್ಟ ತಾರೀಮಕ್ಕಿ
ಕನ್ನಡಪ್ರಭ ವಾರ್ತೆ, ಯಲ್ಲಾಪುರ ಮಾ.23
ಉಪ್ಪಿನಕಾಯಿ ಇಲ್ಲದ ಊಟ ಪರಿಪೂರ್ಣವಲ್ಲ. ಅಂತೆಯೇ ಊಟಕ್ಕಿಲ್ಲದ ಉಪ್ಪಿನಕಾಯಿ ಕೂಡಾ ಸುಮ್ಮನೆ ಎಂಬ ಜಾಣ್ಣುಡಿ ಎಲ್ಲ ಪ್ರದೇಶಗಳಲ್ಲೂ ಕೇಳಿಬರುವುದು ಸಹಜ. ಈ ಮಾತು ಉಪ್ಪಿನಕಾಯಿಗೆ ಹೆಚ್ಚು ಬಳಕೆಯಾಗುವ ಮಾವಿನಮಿಡಿ ಶ್ರಾಯದ ಸಂದರ್ಭದಲ್ಲಿ ಹೆಚ್ಚು ಅರ್ಥಪೂರ್ಣ.
ಅಪ್ಪೆಮಿಡಿಯೆಂದ ಕೂಡಲೆ ಬಾಯಲ್ಲಿ ನೀರೂರುವುದು ಸಹಜ. ವಾಸನೆ ಹಾಗೂ ರುಚಿಯಿಂದ ಎಲ್ಲರನ್ನು ಸೆಳೆಯುವ ಅಪ್ಪೆಮಿಡಿಗೆ ಒಮ್ಮೆ ಮಾರುಹೋದರೆ ಅಂತವರಿಗೆ ಮತ್ತಿನ್ಯಾವುದೂ ರುಚಿಸದು. ಜೀರಿಗೆ ವಾಸನೆ, ಗುಂಡಪ್ಪೆ, ಕರ್ಪೂರದ ವಾಸನೆ ಹೀಗೆ ಹತ್ತು ಹಲವು ವಿಧದ ವಾಸನೆ ಮಿಡಿಗಳು ಉಪ್ಪಿನಕಾಯಿ ಪ್ರಿಯರನ್ನು ಸೆಳೆಯುತ್ತಿವೆ. ಅಪ್ಪೆಮಿಡಿಯ ಆಸೆಗಾಗಿ ಎಂತಹ ದೈತ್ಯ ಮರವನ್ನಾದರೂ ಮಲೆನಾಡಿಗರು ಏರಬಲ್ಲರು. ಅಪ್ಪೆಮಿಡಿಗೆ ಸ್ವಲ್ಪವೂ ಗಾಯವಾಗದಂತೆ ಕೊಯ್ದುಕೊಂಡು ಬರಬಲ್ಲರು.
ಮಲೆನಾಡಿಗರು ಅಪ್ಪೆಮಿಡಿ ವಿಜ್ಞಾನಿಗಳು: ಮಲೆನಾಡಿಗರನ್ನು ಅಪ್ಪೆಮಿಡಿ ಉಪ್ಪಿನಕಾಯಿ ವಿಜ್ಞಾನಿಗಳು ಎಂದೇ ಹೇಳಬಹುದು. ಯಾವ ಅಪ್ಪೆಮಿಡಿಯನ್ನು ಹೇಗೆ ಸಂರಕ್ಷಿಸಬೇಕು? ಅಪ್ಪೆಮಿಡಿಯಿಂದ ಯಾವ ರೀತಿ ಉಪ್ಪಿನಕಾಯಿ ತಯಾರಿಸಿದರೆ ಉತ್ತಮ? ಇತ್ಯಾದಿಗಳಿಗೆಲ್ಲ ಮಲೆನಾಡಿಗರು ಬಾಯಿಮಾತಿನಲ್ಲೇ ಮಾಹಿತಿ ಬಿಚ್ಚಿಡುತ್ತಾರೆ. ಕಣ್ಣಳತೆಯಲ್ಲೇ ಇಂತಹ ಅಪ್ಪೆಮಿಡಿ ಇಷ್ಟೇ ಕಾಲ ಬಾಳುತ್ತದೆ. ಇಂತಿಷ್ಟು ಪ್ರಮಾಣದ ಉಪ್ಪನ್ನು ಹಾಕಿದರೆ ಮಾತ್ರ ಉಪ್ಪಿನಕಾಯಿ ತಯಾರಿಕೆಗೆ ಸೂಕ್ತ ಮುಂತಾದ ಮಾಹಿತಿಗಳನ್ನು ಮಲೆನಾಡಿಗರು ತಟ್ಟನೆ ಹೇಳುತ್ತಾರೆ. ಮಲೆನಾಡಿನ ಮಹಿಳೆಯರು ಅಪ್ಪೆಮಿಡಿ ಕುರಿತು ಮಾಹಿತಿ ನೀಡುವಲ್ಲಿ ಸಿದ್ಧಹಸ್ತರು. ಯಾವ ಅಪ್ಪೆಮಿಡಿಯಿಂದ ಯಾವ ರೀತಿಯ ಉಪ್ಪಿನಕಾಯಿ ತಯಾರು ಮಾಡಬಹುದು?. ಯಾವ ಅಪ್ಪೆಮಿಡಿ ಬೂದಗೊಜ್ಜಿಗೆ ಸೂಕ್ತ?, ಮತ್ಯಾವ ಅಪ್ಪೆಮಿಡಿ ಅಪ್ಪೆಹುಳಿಗೆ ಉತ್ತಮ?, ಅಪ್ಪೆಮಿಡಿ ತಂಬುಳಿ ಹಾಗೂ ಅಪ್ಪೆಮಿಡಿ ಚಟ್ನಿಗೆ ಯಾವ ಅಪ್ಪೆಮಿಡಿ ಬೇಕು? ಎಂಬಿತ್ಯಾದಿ ಮಾಹಿತಿಗಳನ್ನೆಲ್ಲ ಅವರು ಸರಸರನೆ ನೀಡುತ್ತಾರೆ.
ಕಂಗೊಳಿಸುವ ಅಪ್ಪೆಮಿಡಿ ಮರಗಳು: ಈ ವರ್ಷ ಮಲೆನಾಡಿನಲ್ಲಿ ಅಪ್ಪೆಮರಗಳು ಮಿಡಿಗಳಿಂದ ಕಂಗೊಳಿಸುತ್ತಿವೆ. ಒಂದೊಂದು ಮರಗಳೂ ಏನಿಲ್ಲವೆಂದರೂ ಹದಿನೈದು ಸಾವಿರ ಮಿಡಿಗಳನ್ನು ಹೊತ್ತು ನಿಂತಿವೆ. ಇದೀಗ ಈ ವರ್ಷದ ಮಾವಿನಮಿಡಿ ಶ್ರಾಯ ಆರಂಭಗೊಂಡಿದೆ. ಮಲೆನಾಡಿನ ಹೊಳೆಯಂಚಿನ ವಿವಿಧ ಗಮಲಿನ ಮಾವಿನಮಿಡಿ ಸಂಗ್ರಹಿಸುವ ಭರಾಟೆ ಎಲ್ಲೆಡೆ ಕಂಡುಬರುತ್ತಿದೆ.
ಮಾರುಕಟ್ಟೆಗೆ ಬಂದ ಅಪ್ಪೆಮಿಡಿ: ಒಂದೆಡೆ ಹಳ್ಳಿಗರು ಮಾವಿನಮಿಡಿ ತಲಾಶ್‌ಗಾಗಿ ಓಡಾಡುತ್ತಿದ್ದರೆ, ಪಟ್ಟಣಗಳಲ್ಲಿ ವಿವಿಧ ತಳಿಯ ಮಾವಿನಮಿಡಿ ವ್ಯಾಪಾರದ ಸರಕಾಗಿ ವ್ಯಾಪಾರ ಕುದುರಿಸಿಕೊಂಡಿದೆ. ಯಲ್ಲಾಪುರ ತಾಲೂಕಿನ ಹಲವು ಕಡೆ ಅಪ್ಪೆಮಿಡಿಗೆ ವಿಶೇಷ ಫಸಲು ಬಂದಿದ್ದು ಮಾರುಕಟ್ಟೆಗೂ ಲಗ್ಗೆಯಿಟ್ಟಿದೆ. ಯಲ್ಲಾಪುರ ಪ್ರದೇಶದ ಮಾವಿನಮಿಡಿ ವಿಶೇಷ ರುಚಿ ಇದೆ ಎಂಬ ಕಾರಣಕ್ಕಾಗಿ, ಹೆಚ್ಚು ಜನರ ಬಯಕೆಯ ವಸ್ತುವಾಗಿರುವುದರಿಂದ ಕಳೆದ ಹದಿನೈದು ದಿನಗಳಿಂದ ಯಲ್ಲಾಪುರ ಮಾರುಕಟ್ಟೆ ಅಪ್ಪೆಮಿಡಿ, ಮಾವಿನಮಿಡಿ ವ್ಯಾಪಾರದ ಕೇಂದ್ರವಾಗಿ ಗಿಜಿಗುಟ್ಟಲಾರಂಭಿಸಿದೆ.
ಅಪ್ಪೆಮಿಡಿ ಮರಕ್ಕೆ ಕುತ್ತು: ಅಪ್ಪೆಮಿಡಿಯ ಸಂಗ್ರಹಣೆಗಾಗಿ ಕೆಲ ಜನರು ಬಳಕೆ ಮಾಡುತ್ತಿರುವ ವಿಧಾನ ಮಾತ್ರ ಆಘಾತಕಾರಿ. ಪೇಟೆಯ ಭಾಗದಿಂದ ಹಳ್ಳಿಗಳಿಗೆ ಅಪ್ಪೆಮಿಡಿಗಾಗಿ ಬರುವವರು ಅಪ್ಪೆ ಮರಗಳ ರೆಂಬೆ ಕತ್ತರಿಸಿ ಅಪ್ಪೆಮಿಡಿ ಸಂಗ್ರಹಣೆ ಮಾಡಲು ಮುಂದಾಗುತ್ತಿದ್ದಾರೆ. ಇದರಿಂದಾಗಿ ಅಪ್ಪೆಮರಗಳು ತೀವ್ರ ಹಾನಿಗೊಳಗಾಗುತ್ತಿದೆ. ಅಪ್ಪೆಮರ ಕಡಿಯಲಾಗುತ್ತಿರುವುದು ಅಪ್ಪೆಮರಗಳ ಅಸ್ತಿತ್ವಕ್ಕೆ ಧಕ್ಕೆಯನ್ನುಂಟು ಮಾಡುತ್ತಿವೆ.
ನೂರು ಅಪ್ಪೆಮಿಡಿಗೆ ರು.  50-70: ನೂರು ಅಪ್ಪೆಮಿಡಿಗೆ ಸದ್ಯ ರು.  50-70 ದರದಲ್ಲಿ ವ್ಯಾಪಾರ ನಡೆಯುತ್ತಿದೆ. ಕೆಲವು ಭಾಗಗಳಲ್ಲಿ ವಿಶೇಷ ವಾಸನೆಯುಳ್ಳ ಅಪ್ಪೆಮಿಡಿಗೆ ನೂರು ಮಿಡಿಗೆ ನೂರೈವತ್ತರಿಂದ ಇನ್ನೂರು ರುಪಾಯಿಯೂ ದರ ನಿಗದಿಯಾದದ್ದೂ ಇದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ದರ ತುಂಬಾ ಅಗ್ಗ ಎಂಬುದು ಅಪ್ಪೆ ಮಿಡಿ ಮಾರಾಟಗಾರರ ಅಂಬೋಣ.
ಕಳೆದೆಲ್ಲ ವರ್ಷಗಳಿಗಿಂತ ಅಧಿಕ ಪ್ರಮಾಣದಲ್ಲಿ ಅಪ್ಪೆಮಿಡಿ ಮಾರುಕಟ್ಟೆ ಪ್ರವೇಶಿಸಿರುವುದೇ ಇದಕ್ಕೆ ಕಾರಣ. ಅಪ್ಪೆಮಿಡಿ ಕೊಳ್ಳುವ ಭರದಲ್ಲಿ, ಉಪ್ಪಿನಕಾಯಿಗೆ ಹಾಕುವ ಭರದಲ್ಲಿ ಅದರ ರಕ್ಷಣೆಯೂ ಅತ್ಯಗತ್ಯ. ಮರ ಕಡಿದು ಅಪ್ಪೆಮಿಡಿ ಸಂಗ್ರಹಕ್ಕೆ ಮುಂದಾದವರನ್ನು ತಡೆಗಟ್ಟಿ ಮರವನ್ನು ಉಳಿಸಿ ಅಪ್ಪೆಮಿಡಿ ತಂದಾಗ ಮಾತ್ರ ಮರವೂ ಉಳಿಯಬಲ್ಲದು. ಅಪ್ಪೆಮಿಡಿ ಉಪ್ಪಿನಕಾಯಿಯನ್ನು ಸವಿದಿದ್ದಕ್ಕೂ ಬೆಲೆ ಬರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com