Kannadaprabha The New Indian Express
ಸಮಾನತೆ ಇಲ್ಲದ ಸ್ವಾತಂತ್ರ್ಯ ಅರ್ಥಶೂನ್ಯ 
By select 
29 Aug 2013 02:00:00 AM IST

ಕ.ಪ್ರ.ವಾರ್ತೆ ತುಮಕೂರು ಆ. 28
ಸಮಾನತೆ ಇಲ್ಲದ ಸ್ವಾತಂತ್ರ್ಯ ಅರ್ಥಶೂನ್ಯ ಎಂದು ನಿವೃತ್ತ ಪ್ರಾಂಶುಪಾಲ ಹಾಗೂ ಸಮಾಜವಾದಿ ಅಧ್ಯಯನ ಕೇಂದ್ರದ ಸದಸ್ಯ ಪ್ರೊ. ಹನುಮಂತ ಅಭಿಪ್ರಾಯಪಟ್ಟರು.
ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಮಾನವಿಕ  ವೇದಿಕೆಯ ಆಶ್ರಯದಲ್ಲಿ ರಾಜ್ಯಶಾಸ್ತ್ರ ವಿಭಾಗವು ಆಯೋಜಿಸಿದ್ದ ಸಮಾಜವಾದ ಎಂದರೇನು ಕುರಿತ ದೃಶ್ಯ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಚಾರ್ಯ ನರೇಂದ್ರ ದೇವ ಹೇಳುವಂತೆ ಸಮಾಜವಾದವೆಂದರೆ ಸ್ವಾತಂತ್ರ್ಯ, ಸಮಾನತೆ, ಸಹೋದರತ್ವದ ಆಧಾರದ ಮೇಲೆ ಕಟ್ಟುವ ಒಂದು ಹೊಸ ಸಮಾಜ. ಆದರೆ ಇಂದಿಗೂ ಭಾರತಿಯ ಸಮಾಜ ಜೀವಂತವಾಗಿ ಉಳಿಸಿಕೊಂಡಿರುವ ಶ್ರೀಮಂತ ಬಡವರೆಂಬ ವರ್ಗ ತಾರತಮ್ಯ, ಮೇಲ್ಜಾತಿ ಕೆಳಜಾತಿಗಳೆಂಬ ಜಾತಿ ತಾರತಮ್ಯ, ಗಂಡು ಹೆಣ್ಣಿನ ನಡುವಿನ ಲಿಂಗ ತಾರತಮ್ಯ, ನಗರ ಮತ್ತು ಹಳ್ಳಿಗಳ ನಡುವಿನ ಅಸಮಾನ ನೆಲೆಗಳು ಸಾಮಾಜಿಕ ವ್ಯವಸ್ಥೆಯನ್ನು ಅಸಹನೀಯವಾಗಿಸಿವೆ ಎಂದು ತಿಳಿಸಿದರು.
ಸಹಕರಿಸಿ: ಭಾರತೀಯ ಸಮಾಜದೊಳಗಿನ ಈ ತಾರತಮ್ಯಗಳು ಭಾರತೀಯ ಸಂವಿಧಾನದ ಆಶಯಗಳನ್ನು ನಿರರ್ಥಕಗೊಳಿಸುತ್ತಿವೆ. ಇಂದಿನ ಯುವ ಸಮುದಾಯವು ಸಮಾಜವಾದಿ ರಾಷ್ಟ್ರದ ಪರಿಕಲ್ಪನೆಗಳನ್ನು ಅರ್ಥಮಾಡಿಕೊಂಡು ತಮ್ಮ ಬದುಕಿನಲ್ಲಿ ಅನುಷ್ಠಾನಗೊಳಿಸುವ ಮೂಲಕ ಭಾರತವನ್ನು ಸಮಾಜವಾದಿ ಗಣರಾಜ್ಯವನ್ನಾಗಿಸಲು ಸಹಕರಿಸಬೇಕಿದೆ ಎಂದ ಅವರು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ಸಮಾನತೆ ಇಲ್ಲದ ಸ್ವಾತಂತ್ರ್ಯ ಅರ್ಥಶೂನ್ಯ, ಸಹೋದರ ಭಾವವಿಲ್ಲದಿರುವ ಬರೀ ಸ್ವಾತಂತ್ರ್ಯ ಅಸಹನೀಯ, ಸಮಾನತೆಯು ಸಮಾಜವಾದದ ಕೇಂದ್ರ ತತ್ವ ಈ ಆಶಯಗಳನ್ನು ಬಿಂಬಿಸುವ ದೃಶ್ಯ ಪ್ರದರ್ಶನವನ್ನು ಈ ಸಂದರ್ಭದಲ್ಲಿ ಏರ್ಪಡಿಸಲಾಗಿತ್ತು.
ಸ್ವಾತಂತ್ರ, ಸಮಾನತೆ, ಸಹೋದರತ್ವ ಸಮಾಜವಾದದ ತಿರುಳಾಗಿದ್ದು ಇವುಗಳನ್ನು ಭಾರತೀಯರೆಲ್ಲರಿಗೂ ಸಮಾನವಾಗಿ ನೀಡುವ ಸಂಕಲ್ಪ ನಮ್ಮದಾಗಬೇಕು. ಭಾರತದಲ್ಲಿ ಸಮಾಜವಾದದ ಸಂಪೂರ್ಣ ಅನುಷ್ಠಾನ ಸಾಧ್ಯವಾಗಿಲ್ಲ ಎಂದು ಸಮಾಜವಾದಿ ಅಧ್ಯಯನ ಕೇಂದ್ರದ ಸದಸ್ಯರು ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರು ಆದ ಬಾಪು ಹೆದ್ದೂರ ಶೆಟ್ಟಿ ಅವರು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಟಿ.ಎನ್. ಹರಿಪ್ರಸಾದ್ ಅವರು ಮಾತನಾಡಿ ರಚನಾತ್ಮಕ  ಬದುಕಿನಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ ಸಾಧ್ಯವಿದೆ. ಈ ನಿಟ್ಟಿನಲ್ಲಿ ಪ್ರಾಜ್ಞರಿಂದ ರಚನಾತ್ಮಕ ವಿಷಯಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಮಾನವಿಕ ವೇದಿಕೆಯನ್ನು ಕಾಲೇಜಿನಲ್ಲಿ ಅಸ್ತಿತ್ವಕ್ಕೆ ತರಲಾಗಿದೆ. ವಿದ್ಯಾರ್ಥಿಗಳನ್ನು ಸಮಾಜಮುಖಿಯಾಗಿಸಿ ಅವರಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸುವುದು ಈ ವೇದಿಕೆಯ ಮುಖ್ಯ ಕಾಳಜಿಯಾಗಿದೆ ಎಂದರು.
ಡಾ. ಮೌನೇಶ್ವರ ಶ್ರೀನಿವಾಸರಾವ್ ಸ್ವಾಗತಿಸಿದರು. ಶ್ರೀಪಾದ ಕುಲಕರ್ಣಿ ವಂದಿಸಿದರು. ಕೆ.ಎಸ್. ಗಿರಿಜಾ ನಿರೂಪಿಸಿದರು.

Copyright � 2012 Kannadaprabha.com