Kannadaprabha The New Indian Express
ಉತ್ತಮ ಬೆಳೆಗೆ ಸಾವಯವ ಗೊಬ್ಬರ ಬಳಸಿ 
By select 
28 Sep 2013 02:00:00 AM IST

ಕ.ಪ್ರ.ವಾರ್ತೆ ಟಿ ಹೊಳಲ್ಕೆರೆ ಟಿ  ಸೆ.27
ಪ್ರತಿಯೊಬ್ಬ ರೈತರೂ ಬೆಳೆಗೆ ರಾಸಾಯನಿಕ ಗೊಬ್ಬರ ಕಡಮೆ ಮಾಡಿ, ಸಾವಯವ ಗೊಬ್ಬರ ಬಳಕೆಗೆ ಹೆಚ್ಚು ಗಮನ ಹರಿಸಿ ಉತ್ತಮ ಬೆಳೆ ಬೆಳೆಯಲು ಮುಂದಾಗಬೇಕು ಎಂದು ಧಾರವಾಡ ಪ್ರಾದೇಶಿಕ ಕಚೇರಿ ನಿರ್ದೇಶಕ ಜಯಶಂಕರ ಶರ್ಮ ಹೇಳಿದರು.
ತಾಲೂಕಿನ ತಾಳ್ಯ ಮಾರುತಿ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಕೃಷಿ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ತಂಡರಚನೆ: ಆಸಕ್ತ ರೈತರು ಒಗ್ಗಟ್ಟಾಗಿ ಪ್ರಗತಿ ಬಂದು ತಂಡ ರಚನೆ ಮಾಡಿ, ತಮ್ಮ ಜ್ಞಾನ ಹೆಚ್ಚಿಸಿಕೊಂಡು ವಿಜ್ಞಾನ, ತಂತ್ರಜ್ಞಾನ ಬೆಳೆಸಿಕೊಳ್ಳಬೇಕು. ಇತರೆ ಇಲಾಖಾ ಅಧಿಕಾರಿಗಳ ಮೂಲಕ ಹಾಗೂ ಸಂಪನ್ಮೂಲ ವ್ಯಕ್ತಿಗಳ ಮೂಲಕ ಪ್ರಾತ್ಯಕ್ಷಿಕವಾಗಿ ಮಾಹಿತಿ ಪಡೆದುಕೊಳ್ಳಬೇಕು ಎಂದು ಅವರು ಮಾಹಿತಿ ನೀಡಿದರು.
ರೈತರು ಕಾಂಪೋಸ್ಟ್ ಗೊಬ್ಬರದ ಬಗ್ಗೆ ಯೋಜನೆ ಮೂಲಕ ತರಬೇತಿ ಹಾಗೂ ಮಾಹಿತಿ ಪಡೆದುಕೊಂಡು ಅನುಷ್ಠಾನ ಮಾಡುವುದು. ಪರಸ್ಪರ ಹೊಂದಾಣಿಕೆಯಿಂದ ಕೃಷಿ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡು ತರಕಾರಿ ಕೃಷಿ, ಹೂವಿನ ಕೃಷಿ, ಹಣ್ಣು- ಹಂಪಲು ಕೃಷಿ ಹಾಗು ಅಲ್ಪಾವಧಿ ಬೆಳೆಗಳನ್ನು ಶ್ರಮಿ ವಿನಿಮಯದ ಮೂಲಕ ಅನುಷ್ಠಾನ ಮಾಡಬೇಕು ಎಂದು ಸಲಹೆ ನೀಡಿದರು.
ಸಬಲೀಕರಣ: ಜಿಲ್ಲಾ ನಿರ್ದೇಶಕ ಸುಬ್ರಹ್ಮಣ್ಯ ಪ್ರಸಾದ್ ಮಾತನಾಡಿ, ಆಧುನಿಕ ಕೃಷಿ ಪದ್ಧತಿ ರೂಪಿಸಿಕೊಳ್ಳುವುದರ ಮೂಲಕ ರೈತರು ಹಾಗೂ ಮಹಿಳೆಯರು ಸಬಲೀಕರಣಗೊಳ್ಳಬೇಕು. ಪ್ರತಿ ಗ್ರಾಮದಲ್ಲಿ ಕೂಲಿಕಾರರ ಸಮಸ್ಯೆಯಿಂದ ರೈತರು ವಲಸೆ ಹೋಗುತ್ತಿರುವುದನ್ನು ಕಂಡಿದ್ದು, ಮುಯ್ಯಾಳು ಪದ್ಧತಿ ಮುಖಾಂತರ ಪ್ರಗತಿ ಬಂಧು ತಂಡ ರಚನೆ ಮಾಡಿ ಶ್ರಮ ವಿನಿಮಿಯ ಮಾಡಬೇಕು ಎಂದರು. ರೈತರ ಮಕ್ಕಳು ಕೃಷಿ ಕಾರ್ಯಕ್ರಮಗಳಲ್ಲಿ ಹಾಗೂ ಕೃಷಿಯಲ್ಲಿ ತೊಡಗಿಸಿಕೊಂಡು ತಾಂತ್ರಿಕ ಬೆಳೆಗಳನ್ನು ಬೆಳೆಯಬೇಕು. ಜೊತೆಗೆ ರೈತರು ಮನೆಯ ಸುತ್ತ ಮುತ್ತ ಮನೆಯ ಕೈತೋಟಗಳನ್ನು ಮಾಡುವ ಬಗ್ಗೆ ಮಾಹಿತಿ ನೀಡಿದರು.
ಮಾಜಿ ಶಾಸಕ ಜಿ.ಸಿ. ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂತಹ ಕೃಷಿ  ವಿಚಾರ ಸಂಕಿರಣಗಳಲ್ಲಿ ಹೆಚ್ಚು ರೈತರ ಭಾಗವಹಿಸುವ ಮೂಲಕ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಮತ್ತು ಸಹಾಯಕ ತೋಟಗಾರಿಕೆ ಅಧಿಕಾರಿ ಶ್ರೀನಿವಾಸ ದಾಳಿಂಬೆ ಮತ್ತು ಗುಲಾಬಿ ಬೇಸಾಯ ಕ್ರಮ ಹಾಗೂ ನಿರ್ವಹಣೆ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ರಂಗಸ್ವಾಮಿ ಮತ್ತು ಡಿ.ಎಂ. ಪ್ರದೀಪ್ ಕುಮಾರ್ ಕುಟುಂಬ ನಿರ್ವಹಣೆಯಲ್ಲಿ ಹೈನುಗಾರಿಕೆ ಪಾತ್ರದ ಬಗ್ಗೆ ಉಪನ್ಯಾಸ ನೀಡಿದರು.
ತಾಳ್ಯ ಗ್ರಾಪಂ ಅಧ್ಯಕ್ಷ ಎಂ.ಟಿ. ರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಉಪಾಧ್ಯಕ್ಷ ಸಿ.ಎಂ. ಅಶೋಕ ಮಾತನಾಡಿದರು. ತಾಪಂ ಮಾಜಿ ಅಧ್ಯಕ್ಷ ಎಂ.ಕೆ. ಲೋಕೇಶ್ವರಪ್ಪ, ವಿ.ಎಸ್,ಎಸ್.ಎನ್. ಅಧ್ಯಕ್ಷ ಉಮೇಶ್, ಯೋಜನಾಧಿಕಾರಿ ಎಸ್. ಜನಾರ್ದನ್, ನಟರಾಜ್, ಹನುಮಂತಪ್ಪ, ಅನ್ನಪೂರ್ಣ, ಮಹಾಂತೇಶ್, ಮಂಜುನಾಥ್ ಹಾಗೂ ತಾಳ್ಯ ವಲಯ ಸೇವಾ ಪ್ರತಿನಿಧಿಗಳು ಇದ್ದರು.

Copyright � 2012 Kannadaprabha.com