Kannadaprabha The New Indian Express
ಚಂಡಮಾರುತಗಳ ತವರು ಈ ಬಂಗಾಳಕೊಲ್ಲ್ಲಿ 
By select 
13 Oct 2013 02:00:00 AM IST

ಭಾರತದ ಪೂರ್ವ ಕರಾವಳಿ ಅನಾಹುತಕಾರಿ ಚಂಡಮಾರುತಗಳಿಗೆ ಪದೇ ಪದೆ ತುತ್ತಾಗುತ್ತಲೇ ಇದೆ. ವಿಶ್ವದ ಅತಿ ವಿನಾಶಕಾರಿ 35 ಚಂಡಮಾರುತಗಳಲ್ಲಿ 26 ಬಂಗಾಳಕೊಲ್ಲಿ ಹಾಗೂ ಹಿಂದೂಮಹಾಸಾಗರದಲ್ಲೇ ಹುಟ್ಟುತ್ತವೆ. ಕಳೆದೆರಡು ದಶಕಗಳಲ್ಲಿ ಉಷ್ಣವಲಯಕ್ಕೆ ಸಂಬಂಧಿಸಿದ ಚಂಡಮಾರುತಗಳಿಂದ ಬಾಂಗ್ಲಾದೇಶದಲ್ಲೇ ಅತಿ ಹೆಚ್ಚು ಸಾವು ಸಂಭವಿಸಿದೆ. ಒಟ್ಟು ಸಾವಿನಲ್ಲಿ ಶೇ. 42ರಷ್ಟು ಈ ದೇಶವೊಂದರಲ್ಲೇ ಸಂಭವಿಸಿದೆ. ಭಾರತದಲ್ಲಿ ಶೇ. 27ರಷ್ಟು ಸಾವು ಸಂಭವಿಸಿದೆ.
ಪೂರ್ವ ಸಮುದ್ರದ ಚಂಡಮಾರುತಗಳ ವಿವರ
-ಮೇ 2008: ಮ್ಯಾನ್ಮಾರ್‌ಗೆ ಅಪ್ಪಳಿಸಿದ ಚಂಡಮಾರುತ 'ನರ್ಗಿಸ್‌'ನಿಂದಾಗಿ 1.38 ಲಕ್ಷ ಮಂದಿ ಬಲಿಯಾದರು. ಸಾವಿರಾರು ಮನೆ, ಕಟ್ಟಡಗಳು ನೆರೆಯಲ್ಲಿ ಕೊಚ್ಚಿಹೋಗಿದ್ದವು. 6100 ಕೋಟಿ ನಷ್ಟವಾಗಿತ್ತು.
-ಅಕ್ಟೋಬರ್, 1999: ಒಡಿಶಾಗೆ ಅಪ್ಪಳಿಸಿದ ಪ್ರಚಂಡ ಚಂಡಮಾರುತದಿಂದಾಗಿ 10 ಸಾವಿರಕ್ಕೂ ಹೆಚ್ಚು ಮಂದಿ ಸಾವಿಗೀಡಾದರು. 10 ಲಕ್ಷಕ್ಕೂ ಹೆಚ್ಚು ಮಂದಿ ಮನೆ, ಮಠ ಕಳೆದುಕೊಂಡರು.
-ಏಪ್ರಿಲ್ 1991: ಬಾಂಗ್ಲಾದೇಶಕ್ಕೆ ಅಪ್ಪಳಿಸಿದ ಮಹಾ ಚಂಡಮಾರುತದಿಂದಾಗಿ 1.39 ಲಕ್ಷ ಮಂದಿ ಸಾವು.
-ನವೆಂಬರ್ 1977: ಆಂಧ್ರಪ್ರದೇಶಕ್ಕೆ ಅಪ್ಪಳಿಸಿದ ಚಂಡಮಾರುತದಿಂದಾಗಿ 14,204 ಮಂದಿ ಸಾವು.
-ನವೆಂಬರ್ 1970: ಬಾಂಗ್ಲಾದೇಶಕ್ಕೆ ಗಂಟೆಗೆ 224 ಕಿ.ಮೀ. ವೇಗದಲ್ಲಿ ಅಪ್ಪಳಿಸಿದ ಚಂಡಮಾರುತದಿಂದಾಗಿ 3 ಲಕ್ಷಕ್ಕೂ ಹೆಚ್ಚು ಮಂದಿ ಸಾವು.

ರಾಷ್ಟ್ರಪತಿ ಭೇಟಿ ಮೊಟಕು
ಪಶ್ಚಿಮ ಬಂಗಾಳದಲ್ಲಿರುವ ತಮ್ಮ ಪೂರ್ವಜರ ಮನೆಯಲ್ಲಿ ದಸರಾ ಹಬ್ಬದ ಸಂಭ್ರಮ ಆಚರಿಸುತ್ತಿದ್ದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಶನಿವಾರ ನವದೆಹಲಿಗೆ ಹಿಂತಿರುಗಿದ್ದಾರೆ. ಫೈಲಿನ್ ಚಂಡಮಾರುತ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಗೂಗಲ್ ಪರ್ಸನ್ ಫೈಂಡರ್ ನೆರವು
ಫೈಲಿನ್ ಚಂಡಮಾರುತ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ನೆರವು ನೀಡಲು ಇಂಟರ್ನೆಟ್ ಹುಡುಕುತಾಣ ಗೂಗಲ್ ಕೂಡ ಸಜ್ಜಾಗಿದೆ. ವಿಶ್ವದ ನಂ.1 ಸರ್ಚ್‌ಎಂಜಿನ್ ಆಗಿರುವ ಗೂಗಲ್ ವಿಪತ್ತು ನಿರ್ವಹಣಾ ತಂಡವನ್ನು ರಚಿಸಿದೆ. ಈ ತಂಡ ಸರ್ಕಾರಕ್ಕೆ ಪರಿಹಾರ ಮತ್ತು ಪುನರ್ವಸತಿ ಕಾರ್ಯದಲ್ಲಿ ನೆರವಾಗಲಿದೆ. ಇದಕ್ಕಾಗಿ ಗೂಗಲ್ 'ಪರ್ಸನ್ ಫೈಂಡರ್‌' ಸೇವೆಯನ್ನು ಆರಂಭಿಸಿದೆ.  ಉತ್ತರಾಖಂಡ ಪ್ರವಾಹದ ವೇಳೆಯೂ ಗೂಗಲ್ ಇದೇ ರೀತಿಯ ನೆರವು ನೀಡಿತ್ತು.

Copyright � 2012 Kannadaprabha.com