Kannadaprabha The New Indian Express
ಬೆಳ್ಳಾರೆ ಕೋಟೆಯಲ್ಲಿ ಸ್ಮಾರಕ ನಿರ್ಮಾಣ ಎಂದು? 
By select 
07 Nov 2013 02:00:00 AM IST

ಸುಳ್ಯ: ಸುಳ್ಯ ತಾಲೂಕು ಅನೇಕ ಐತಿಹಾಸಿಕ ಸಂಗತಿಗಳ ನೆಲೆವೀಡು. ಈ ಐತಿಹಾಸಿಕ ಹಾಗೂ ಚಾರಿತ್ರಿಕ ಕೇಂದ್ರಗಳನ್ನು ಅಭಿವೃದ್ಧಿಪಡಿಸಿದ್ದರೆ ಸುಳ್ಯವೊಂದು ಪ್ರವಾಸಿ ಕೇಂದ್ರವಾಗಿರುತ್ತಿತ್ತು. ಆದರೆ, ಮುಖ್ಯ ಸಂಗತಿಗಳತ್ತಲೇ ಲಕ್ಷ್ಯವಹಿಸದ ಕಾರಣ ಈ ಕ್ರಾಂತಿಯ ಕಥೆಯೇ ಜನರಿಂದ ದೂರವಾಗುವಂತಾಗಿದೆ.
ತುಳುನಾಡಿನ ದಕ್ಷಿಣ ಭಾಗವಾಗಿ ಬೆಳ್ಳಾರೆ ಒಂದು ಕಾಲದಲ್ಲಿ ಬಹಳ ಐತಿಹಾಸಿಕ ಮಹತ್ವವನ್ನು ಪಡೆದಿತ್ತು. ಈ ಸೀಮೆ ಜೈನ ಬಲ್ಲಾಳರ ಆಳ್ವಿಕೆಗೆ ಒಳಗಾಗಿತ್ತು. ಬೆಳ್ಳಾರೆಯಲ್ಲಿ ಬಲ್ಲಾಳರ ಬೀಡಿತ್ತು ಮತ್ತು ಅವರು ಆದೀಶ್ವರ ಬಸದಿಯನ್ನು ನಿರ್ಮಿಸಿದ್ದರು. ಬೆಳ್ಳಾರೆ ಸೀಮೆಯು 21 ಗ್ರಾಮಗಳನ್ನು ಒಳಗೊಂಡಿದ್ದು, ಬೆಳ್ಳಾರೆಯು ಈ ಸೀಮೆಯ ರಾಜಧಾನಿಯಾಗಿತ್ತು.
ಬಲ್ಲಾಳ ಸಂತತಿ ನಿರ್ನಾಮವಾಗಿ ಹೋದ ಮೇಲೆ ಬೆಳ್ಳಾರೆಯನ್ನು ಇಕ್ಕೇರಿಯ ನಾಯಕ ವಂಶಸ್ಥರು ಆಳಿದರು. ಇಕ್ಕೇರಿ ವೆಂಕಟಪ್ಪ ನಾಯಕ ಕ್ರಿ.ಶ. 1608ರಲ್ಲಿ ಬೆಳ್ಳಾರೆಯಲ್ಲಿ ಒಂದು ಕೋಟೆ ಕಟ್ಟಿಸಿದ. ಈಗಲೂ ಆ ಕೋಟೆಯ ಪಳೆಯುಳಿಕೆಗಳನ್ನು ಕಾಣಬಹುದು. ಇಕ್ಕೇರಿಯ ಸೋಮಶೇಖರ ನಾಯಕನು ಬೆಳ್ಳಾರೆ ಸೀಮೆಯನ್ನು ಕೊಡಗಿನ ರಾಜ ದೊಡ್ಡ ವೀರಪ್ಪನಿಗೆ ಬಿಟ್ಟುಕೊಟ್ಟನು. ಬೆಳ್ಳಾರೆ ಸೀಮೆಯೊಂದಿಗೆ ಪಂಜ ಸೀಮೆ, ಅಮರ ಸೀಮೆ ಮತ್ತು ಸುಳ್ಯ ಸೀಮೆ ಕೂಡಾ ಕೊಡಗಿನ ಆಡಳಿತಕ್ಕೆ ಒಳಪಟ್ಟವು. ಈ ನಾಲ್ಕೂ ಸೀಮೆಗಳ ರಾಜಧಾನಿಯಾಗಿ ಬೆಳ್ಳಾರೆ ಪಟ್ಟಣ ಇನ್ನಿಲ್ಲದ ಮಹತ್ವವನ್ನು ಪಡೆದುಕೊಂಡಿತ್ತು.
ಈ ಭಾಗದಲ್ಲಿ ನಡೆದ ಅಮರ ಕ್ರಾಂತಿ ಮತ್ತೊಂದು ರೋಚಕ ಕಥನ. 1837ರ ಮಾರ್ಚ್ 30ರಂದು  ಕಲ್ಯಾಣ ಸ್ವಾಮಿಯನ್ನು ಮುಂದಿಟ್ಟುಕೊಂಡು ಕೆದಂಬಾಡಿ ರಾಮಗೌಡ ಮತ್ತು ಹುಲಿಕಡಿದ ನಂಜಯ್ಯರ ನೇತೃತ್ವದ ರೈತಪಡೆ ಬೆಳ್ಳಾರೆ ಕೋಟೆಯನ್ನು ಆಕ್ರಮಿಸಿ ಟ್ರಜರಿಯನ್ನು ವಶಪಡಿಸಿಕೊಂಡಿತು.
ಕಾಲ್ನಡಿಗೆ ಜಾಥಾ: ದೇಶದ ಸುವರ್ಣ ಸ್ವಾತಂತ್ರ್ಯೋವದ ಸಂದರ್ಭದಲ್ಲಿ (1998)ರಲ್ಲಿ ಸುಳ್ಯದಲ್ಲಿ ಎನ್.ಎಸ್. ದೇವಿಪ್ರಸಾದರ ನೇತೃತ್ವದಲ್ಲಿ ಹುಟ್ಟಿಕೊಂಡ ಅಮರಕ್ರಾಂತಿ ಉತ್ಸವ ಸಮಿತಿ ಅಮರಸುಳ್ಯ ಬಂಡಾಯದ ನೈಜಕತೆಯನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಮಾರ್ಚ್ 30ರಂದು ಸುಳ್ಯದಿಂದ ಕಾಲ್ನಡಿಗೆ ಜಾಥಾ ಆರಂಭಿಸಿ ಅಮರ ಸುಳ್ಯದ ಕ್ರಾಂತಿವೀರರು ಎಂಬ ಬೀದಿನಾಟಕವನ್ನು ಅಲ್ಲಲ್ಲಿ ಪ್ರದರ್ಶಿಸುತ್ತಾ, ಬೆಳ್ಳಾರೆ, ಪುತ್ತೂರು, ನಂದಾವರ, ಪಾಣೆಮಂಗಳೂರು, ಬಿ.ಸಿ. ರೋಡ್, ಫರಂಗಿಪೇಟೆಗಾಗಿ ಏ. 5ರಂದು ಮಂಗಳೂರು ತಲುಪಿ ಬಾವುಟಗುಡ್ಡೆಯಲ್ಲಿ ಕೊಡಗು ಅರಸನ ವಿಜಯ ಧ್ವಜವನ್ನು ಆರೋಹಣ ಮಾಡಿತು. ಅದರ ಯಶಸ್ಸಿಗೆ ನಾಂದಿ ಹಾಡಿದ್ದು ಬೆಳ್ಳಾರೆಯವರು.
2004ರಲ್ಲಿ ಬೆಳ್ಳಾರೆಯಲ್ಲಿ ಹುಟ್ಟಿಕೊಂಡ ಸಮಿತಿ ಬೆಳ್ಳಾರೆ ಕೋಟೆ ಪ್ರದೇಶದಲ್ಲಿ ಶಿವಪುರ ಸ್ವಾತಂತ್ರ್ಯ ಸದನದ ಮಾದರಿಯಲ್ಲಿ ಶಾಶ್ವತ ಸ್ಮಾರಕವೊಂದನ್ನು ರಚಿಸುವುದಾಗಿ ಪ್ರತಿಜ್ಞೆ ಮಾಡಿತು. ವಿಪರ್ಯಾಸವೆಂದರೆ ಅದಿನ್ನೂ ಈಡೇರಿಲ್ಲ. ಡಾ. ಕುರುಂಜಿ ವೆಂಕಟ್ರಮಣ ಗೌಡರ ಶೈಕ್ಷಣಿಕ ಕ್ರಾಂತಿಯಿಂದಾಗಿ ವಿಶ್ವ ಭೂಪಟದಲ್ಲಿ ಸ್ಥಾನ ಪಡೆದುಕೊಂಡ ಸುಳ್ಯ ತಾಲೂಕಿಗೆ ಒಂದೇ ಒಂದು ಐತಿಹಾಸಿಕ ಸ್ಮಾರಕವಿಲ್ಲ. ಸುಳ್ಯಕ್ಕೊಂದು ಇತಿಹಾಸ ಇತ್ತು ಎನ್ನುವುದು ಮುಂದಿನ ಪೀಳಿಗೆಗೆ ಗೊತ್ತಾಗುವಂತೆ ಮಾಡಲು ಈ ಕಾರ್ಯ ನಡೆಯಲೇಬೇಕಿದೆ.
ಸ್ವಾತಂತ್ರ್ಯ ಸೌಧ ನಿರ್ಮಾಣವಾಗಲಿ: ಬೆಳ್ಳಾರೆ ಗುಡ್ಡೆಯಲ್ಲಿ ತಾಲೂಕಿನ ಸಮಸ್ತ ಜನರ ಅಭಿಮಾನದ ಸಂಕೇತವಾಗಿ ಅಮರಸುಳ್ಯ ಸ್ವಾತಂತ್ರ್ಯ ಸೌಧ ತಲೆ ಎತ್ತಿ ನಿಲ್ಲಬೇಕು. ಅದರಲ್ಲಿ ಒಂದು ಅದ್ಭುತ ಮ್ಯೂಸಿಯಂ ಮತ್ತು ಗ್ರಂಥಾಲಯಗಳಿರಬೇಕು. 1837ರ ಕ್ರಾಂತಿಗೆ ಸಂಬಂಧಿಸಿದ ಸಲಕರಣೆಗಳು, ಪುಸ್ತಕಗಳು, ಆಯುಧಗಳು, ಪಾತ್ರೆ- ಪರಡಿಗಳು ಮಾತ್ರವಲ್ಲದೆ ಕನ್ನಡದ ಪ್ರಮುಖ ಬರಹಗಾರರ ಮತ್ತು ಸುಳ್ಯ ತಾಲೂಕಿನ ಸಮಸ್ತ ಸಾಹಿತಿಗಳ ಎಲ್ಲಾ ಕೃತಿಗಳು ಅಲ್ಲಿ ಓದಲು ಲಭ್ಯವಾಗಬೇಕು. ಪ್ರತಿವರ್ಷ ಮಾರ್ಚ್ 30ರಂದು ಬೆಳ್ಳಾರೆ ಕೋಟೆಯಲ್ಲಿ ಕ್ರಾಂತಿಧ್ವಜ ಏರಿಸಿ ಕ್ರಾಂತಿಯನ್ನು ಸಂಸ್ಮರಿಸಬೇಕು ಎಂದು ಬೆಳ್ಳಾರೆಯಲ್ಲಿ ನಡೆದ 3- 4 ವರ್ಷದ ಹಿಂದೆ ನಡೆದ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷ ಡಾ. ಪ್ರಭಾಕರ ಶಿಶಿಲ ಪ್ರತಿಪಾದಿಸಿದ್ದರು.

Copyright � 2012 Kannadaprabha.com