Kannadaprabha The New Indian Express
ಭಕ್ತರ ಶ್ರದ್ಧಾಕೇಂದ್ರ ಮಂಜುಗುಣಿ 
By select 
09 Feb 2014 02:00:00 AM IST

-ವಿಶ್ವಾಮಿತ್ರ ಹೆಗಡೆ
ಕನ್ನಡಪ್ರಭ ವಾರ್ತೆ, ಶಿರಸಿ, ಫೆ. 8
ಶ್ರೀಕ್ಷೇತ್ರ ಮಂಜುಗುಣಿ ಭಕ್ತರ ಶ್ರದ್ಧಾಕೇಂದ್ರ. ಐತಿಹಾಸಿಕ ಕ್ಷೇತ್ರವೆನ್ನುವ ದಾಖಲೆಯೂ ಇದೆ. ಮಂಜುಗುಣಿಯಲ್ಲಿ ವೆಂಕಟರಮಣನ ದೇವಾಲಯವಿದ್ದು ವರ್ಷವಿಡೀ ಧಾರ್ಮಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳು ನಡೆಯುತ್ತವೆ.
ಮಂಜುಗುಣಿಯ ವೆಂಕಟರಮಣನ ಭಕ್ತರು ಜಿಲ್ಲೆಯಾದ್ಯಂತ ಇದ್ದಾರೆ. ಶಿರಸಿ, ಸಿದ್ದಾಪುರ, ಅಂಕೋಲಾಗಳಲ್ಲಿ ಮಂಜುಗುಣಿ ಕ್ಷೇತ್ರಕ್ಕೆ ಪೂಜೆ ಪುನಸ್ಕಾರಗಳ ಮೂಲಕ ಸೇವೆ ಸಲ್ಲಿಸುವ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವಾರ್ಷಿಕವಾಗಿ ನಡೆಯುವ ರಥೋತ್ಸವದಲ್ಲಂತೂ ಒಂದು ಲಕ್ಷಕ್ಕೂ ಮಿಕ್ಕಿದ ಭಕ್ತಸಾಗರ ಶ್ರೀದೇವರ ದರ್ಶನ ಪಡೆದು ಕೃತಾರ್ಥರಾಗುತ್ತಿರುವುದನ್ನು ಗಮನಿಸಿದಾಗ ಮಂಜುಗುಣಿ ಸ್ಥಳದ ಮಹಿಮೆ ಅನುಭವಕ್ಕೆ ಬರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಮಧ್ಯಾಹ್ನ ಸಾರ್ವತ್ರಿಕ ಪ್ರಸಾದ ಭೋಜನ ವ್ಯವಸ್ಥೆಯೂ ಆರಂಭಗೊಂಡಿದೆ.
ಮಂಜುಗುಣಿ ವೆಂಕಟರಮಣನ ಪ್ರವೇಶ ಮಹೋತ್ಸವ ಹಾಗೂ ಮಹಾರಥೋತ್ಸವ ನಿಮಿತ್ತ ಕಳೆದ ನಾಲ್ಕು ದಿನಗಳಿಂದ ವೈವಿಧ್ಯಮಯವಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಪ್ರವಚನ, ಸಂಕೀರ್ತನ ಹಾಗೂ ಸಾಂಸ್ಕೃತಿಕ ಕಲಾ ವೈಭವವೂ ರಾತ್ರಿಯವರೆಗೆ ನಡೆಯುತ್ತಿದ್ದು ಭಕ್ತರನ್ನು ಕೈಬೀಸಿ ಕರೆಯುವಂತಿದೆ. ವಿಶಿಷ್ಟವಾದ ಪ್ರಪಂಚ ಮಹಾಯಾಗ ಈಗಾಗಲೇ ಆರಂಭಗೊಂಡಿದೆ. ಭಾನುವಾರದ ದಿನ ರಥಾರೋಹಣದ ನಂತರ ಪ್ರಪಂಚ ಮಹಾಯಾಗದ ಹೋಮ ಮತ್ತು ಪೂರ್ಣಾಹುತಿ ನಡೆಯಲಿದೆ. ಈ ಭಾಗದಲ್ಲಿ ಪ್ರಪಂಚ ಮಹಾಯಾಗ ಅಪರೂಪವಾದ ಯಾಗ ಎಂದೇ ಹೇಳಲಾಗುತ್ತಿದೆ. ಕಳೆದ ಬುಧವಾರದಿಂದ ಆರಂಭಗೊಂಡ ಧಾರ್ಮಿಕ ಕಾರ್ಯಕ್ರಮದ ಸಂದರ್ಭದಿಂದ ಪ್ರತಿದಿನ ರಾತ್ರಿ ದೀಪಾರಾಧನೆಯೂ ನಡೆಯುತ್ತಿದೆ. ಇವೆಲ್ಲವುಗಳ ಜೊತೆ ತಿರುಪತಿಯ ತಿಮ್ಮಪ್ಪನಿಗೂ ಮಂಜುಗುಣಿಯ ವೆಂಕಟೇಶನಿಗೂ ಪೂರಕ ಸಂಬಂಧಗಳಿವೆ ಎನ್ನುವ ಮಾತು ಹಿಂದಿನ ತಲೆಮಾರಿನಿಂದಲೂ ಕೇಳಿಬರುತ್ತಲಿದೆ. ಮಂಜುಗುಣಿಯ ವೆಂಕಟರಮಣನ ಪೂಜಾ ಕೈಂಕರ್ಯದ ವೈಶಿಷ್ಟ್ಯತೆಗಳ ಸಂದರ್ಭದಲ್ಲಿ ತಿರುಪತಿಯಲ್ಲಿಯೂ ಪೂರಕ ಸ್ಪಂದನೆ ಸಾಂಪ್ರದಾಯಿಕವಾಗಿ ನಡೆಸಲಾಗುತ್ತದೆ ಎನ್ನುವುದು ಪ್ರಧಾನ ಅರ್ಚಕ ಶ್ರೀನಿವಾಸ ಭಟ್ಟರ ಅಂಬೋಣವಾಗಿದೆ.
ಮಂಜುಗುಣಿ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸುತ್ತಮುತ್ತಲ ಐದು ಪ್ರಮುಖ ದೇವಾಲಯಗಳಿವೆ. ಯಾಣದ ಭೈರವೇಶ್ವರ, ಪಂಚಲಿಂಗದ ಪಂಚಲಿಂಗೇಶ್ವರ, ಓಣಿವಿಘ್ನೇಶ್ವರದ ವಿಘ್ನೇಶ್ವರ, ದೇವಿಮನೆಯ ದೇವಿ ಹೀಗೆ ಐದು ಪ್ರಮುಖ ಆರಾಧ್ಯ ದೇವತೆಗಳು ಭಕ್ತರ ಸೇವೆ ಪಡೆಯುತ್ತಲಿವೆ. ಜೊತೆಯಲ್ಲಿ ಇಲ್ಲಿಯ ವೆಂಕಟೇಶ ಅರ್ಥಾತ್ ಶ್ರೀನಿವಾಸ ಪಾದುಕೆ ಧರಿಸಿ ನಿಂತಿದ್ದಾನೆ. ಕೈಯಲ್ಲಿ ಬಿಲ್ಲು, ಬಾಣ ಹಿಡಿದ ಸಂಕೇತವಿದೆ. ಇದು ಅಪರೂಪದಲ್ಲಿ ಅಪರೂಪ ಎಂದೇ ಪರಿಗಣಿಸಲ್ಪಡುವ ಮೂರ್ತಿಯಾಗಿದೆ. ದೇಗುಲದ ಸುತ್ತಮುತ್ತಲೂ ಐದು ಪ್ರಮುಖ ಕೆರೆಗಳಿರುವುದು ವಿಶೇಷ. ಅಘನಾಶಿನಿ ನದಿಯ ಮೂಲ ಮಂಜುಗುಣಿ ಎನ್ನುವುದು ಮತ್ತೊಂದು ವಿಶೇಷ. ಅಘನಾಶಿನಿ ಎಂದರೆ ಪಾಪ ನಾಶಿನಿ ಎಂದರ್ಥ. ಅಘನಾಶಿನಿ ಮೂಲಸ್ಥಾನದ ಕೆರೆಯಲ್ಲಿ ಸ್ನಾನ ಮಾಡಿದರೆ ಪಾಪ ಪರಿಹಾರವಾಗಿ ಕೃತಾರ್ಥರಾಗುತ್ತೇವೆ ಎನ್ನುವ ಭಾವನೆ ಭಕ್ತ ಜನಗಳದ್ದು.
ವೆಂಕಟೇಶನ ಆಲಯವನ್ನು ಪುನರ್ ನವೀಕರಣ ಮಾಡಲಾಗಿದೆ. ಈ ಸಂದರ್ಭದಲ್ಲಿ ದೇಗುಲಕ್ಕೆ ತಾಮ್ರದ ಹೊದಿಕೆ ಹಾಕಲಾಗಿದೆ. ಉಪಗುಡಿಗಳಿಗೆ ಸುಸಜ್ಜಿತ ಕಟ್ಟಡ, ಪ್ರದಕ್ಷಿಣಾ ಪಥಕ್ಕೆ ನೆಲಹಾಸು, ಅಗತ್ಯವಾದ ಬೆಳಕು, ಬಣ್ಣ ಮುಂತಾದ ಹಲವಾರು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ. ಸರ್ಕಾರದ ಅನುದಾನ ಪಡೆಯದೇ, ಜನಸಾಮಾನ್ಯರಿಂದ ದೇಣಿಗೆಯನ್ನು ಕೇಳಿ ಪಡೆಯದೇ # 4 ಕೋಟಿಗೂ ಮಿಕ್ಕ ಅಭಿವೃದ್ಧಿ ಕಾರ್ಯಗಳು ಸಂಪೂರ್ಣಗೊಂಡಿದೆ. ಭಕ್ತಾದಿಗಳ ಸ್ವಯಂಪ್ರೇರಿತ ದಾನ-ಧರ್ಮಗಳಿಂದಲೇ ಈ ಎಲ್ಲ ಮೂಲಭೂತ ಸೌಕರ್ಯಗಳ ಮತ್ತು ಅಗತ್ಯವಿರುವ ಕಟ್ಟಡ ಪುನರ್ ನವೀಕರಣದ ಕೆಲಸ ಕಾರ್ಯಗಳನ್ನು ನೆರವೇರಿಸಲಾಗಿದೆ ಎಂದು ದೇವಸ್ಥಾನದ ಮೊಕ್ತೇಸರರು ಹೇಳುತ್ತಾರೆ.
ಮಂಜುಗುಣಿಗೆ ಸನಿಹದಲ್ಲಿ ಆದಿ ಮಂಜುಗುಣಿ ಎನ್ನುವ ಎನ್ನುವ ಪ್ರದೇಶವಿದ್ದು, ಅಲ್ಲಿ ಸೋಮೇಶ್ವರ ದೇವಾಲಯವಿದೆ. ವೆಂಕಟೇಶ್ವರ ಮಂಜುಗುಣಿಗೆ ಬಂದು ನೆಲೆ ನಿಲ್ಲುವ ಪೂರ್ವದಲ್ಲೇ ಆದಿ ಮಂಜುಗುಣಿ ಎನ್ನುವ ಊರಿತ್ತು ಮತ್ತು ಅಲ್ಲಿ ಸೋಮೇಶ್ವರ ದೇವಸ್ಥಾನವಿದೆ ಎನ್ನುವುದು ಸರ್ಕಾರದ ದಾಖಲೆಯಲ್ಲಿ ನಮೂದಾಗಿದೆ. ಆದಿ ಮಂಜುಗುಣಿಯ ವಿಶೇಷವೆಂದರೆ ಸೋಮತೀರ್ಥ ಕೆರೆ. ಇದರ ಮೂಲ ಹೆಸರು ಸೋಮಾಘನಾಶಿನಿ. ಹುಲಿದೇವರು, ಮಹಾಸತಿ, ಅಧೋಮುಖ ನಾಗ, ಗರುಡ ಇವೆಲ್ಲವೂ ಸೋಮೇಶ್ವರನ ಗಣಂಗಗಳಾಗಿದ್ದು ಆದಿ ಮಂಜುಗುಣಿಯಲ್ಲಿವೆ. ಧಾರ್ಮಿಕವಾಗಿ ಈಶ್ವರನ ಗಣವೆನ್ನುವ ದೇವಗಣಗಳು ಎಂದು ಭಕ್ತಾದಿಗಳು ಭಾವಿಸುವ ಸೋಮತೀರ್ಥ ನೀರಿನ ಮೂಲವಾಗಿದೆ. ಮಹಾಸತಿ ಅರಣ್ಯ ರಕ್ಷಣೆಯ ದ್ಯೋತಕವಾಗಿದೆ. ಹುಲಿದೇವರು ಎಂದು ಪೂಜಿಸುವ ಆದಿ ಮಂಜುಗುಣಿ ಹುಲಿಯ ಪ್ರಾಮುಖ್ಯತೆಯನ್ನು ಪ್ರತಿನಿಧಿಸುತ್ತದೆ. ನಾಗ ಮತ್ತು ಗರುಡ ಇವು ತಮ್ಮ ತಮ್ಮ ಇರುವಿಕೆಯ ಅಗತ್ಯವನ್ನು ಸಾರುತ್ತವೆ. ಕೇವಲ ಧಾರ್ಮಿಕತೆಗೆ ಸೀಮಿತವಾಗಿಲ್ಲ. ಬದಲಾಗಿ ಇಂದಿನ ನಶಿಸುತ್ತಿರುವ ಪರಿಸರಕ್ಕೆ ಪೂರಕವಾಗಿ ಅಭಿವೃದ್ಧಿ ಹೊಂದಬೇಕಾದರೆ ಈ ಎಲ್ಲ ಪಕ್ಷಿ-ಪ್ರಾಣಿಗಳ ಅಗತ್ಯವಿದೆ ಎನ್ನುವುದನ್ನು ಈ ಪ್ರದೇಶ ಮನವರಿಕೆ ಮಾಡಿಕೊಡುವ ಸಂಕೇತವಾಗಿದೆ.
ಮಂಜುಗುಣಿಯ ವೆಂಕಟರಮಣ, ಆದಿ ಮಂಜುಗುಣಿಯ ಸೋಮೇಶ್ವರ ಪೂರಕವಾಗಿದ್ದು, ಧಾರ್ಮಿಕ ಹಾಗೂ ಪರಿಸರದ ಮಹತ್ವವನ್ನು ಸಾರಿ ಹೇಳುತ್ತಿವೆ. ದೇವಾಲಯಗಳು ಸಮೃದ್ಧವಾಗಿವೆ ಎಂದರೆ ಸುತ್ತಮುತ್ತಲ ಪ್ರದೇಶದ ಜನರು ಶಾಂತಿ, ನೆಮ್ಮದಿಯಿಂದ ಸಮೃದ್ಧಿಯ ಪಥದಲ್ಲಿದ್ದಾರೆ ಎಂದೇ ಅರ್ಥೈಸಲಾಗುತ್ತದೆ. ಈಗಂತೂ ಮಂಜುಗುಣಿ ತಿರುಪತಿಯ ಇನ್ನೊಂದು ಪ್ರತಿರೂಪ ಎನ್ನುವಂತೆ ಭಾಸವಾಗುತ್ತಿದ್ದು ಭಕ್ತರ ದಂಡೇ ಹರಿದುಬರುತ್ತಿದೆ.

Copyright � 2012 Kannadaprabha.com