Kannadaprabha The New Indian Express
ಆಧುನಿಕತೆಯ ಭರಾಟೆಯಲ್ಲಿ ಕಳೆದು ಹೋಗುತ್ತಿರುವ ಮೌಲ್ಯಗಳು 
By select 
20 Apr 2014 02:00:00 AM IST

ಹಣ ಸಂಪಾದನೆಯ ನಂತರವೂ ಜೀವನವನ್ನು ಅನುಭವಿಸಲಾಗದ ಸ್ಥಿತಿಯಲ್ಲಿ ನಮ್ಮಲ್ಲನೇಕರು ಇದ್ದಾರೆ. ಜೀವನದಲ್ಲಿ ಸಕಲ ಸೌಕರ್ಯಗಳಿದ್ದರೂ ಅವುಗಳನ್ನು ಅನುಭವಿಸಲು ಸಾಧ್ಯವಾಗುತ್ತಿಲ್ಲ. ಬದುಕಿನಲ್ಲಿ ನೆಮ್ಮದಿಯಿಲ್ಲ.
ವಿದ್ಯೆ ಬಂದು, ವಿನಯ ಹೋಯ್ತು
ಬುದ್ದಿ ಬಂದು, ಶ್ರದ್ಧೆ ಹೋಯ್ತು
ಶ್ರದ್ಧೆ ಬಂತು, ವಿವೇಚನೆ ಹೋಯ್ತು
ಸಮೃದ್ಧಿ ಬಂತು, ಸಂಸ್ಕೃತಿ ಹೋಯ್ತು
 - ಸಿದ್ದಯ್ಯ ಪುರಾಣಿಕ

ಕಳೆದ ಒಂದು ನೂರು ವರ್ಷಗಳಲ್ಲಿ ಮನುಕುಲ ಹಿಂದೆಂದೂ ಕಂಡಿರದ ಅನೇಕ ಬದಲಾವಣೆಗಳನ್ನು ಕಂಡಿದೆ. ಕೈಗಾರೀಕರಣ, ನಗರೀಕರಣ, ಜಾಗತೀಕರಣ ಉದಾರೀಕರಣ, ಖಾಸಗೀಕರಣ, ಆಧುನೀಕರಣ ಮುಂತಾದವು ನಮ್ಮ ಬೌದ್ಧಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೇಲೆ ದೊಡ್ಡ ಪರಿಣಾಮವನ್ನು ಬೀರಿವೆ.
ಶಿಕ್ಷಣ ಪಡೆಯುವುದು ಜ್ಞಾನಾಭಿವೃದ್ಧಿಗಾಗಿ ಹಾಗೂ ಜೀವನದ ಮೂಲಭೂತ ಅಗತ್ಯಗಳನ್ನು ಪೂರೈಸುವ ಒಂದು ಉದ್ಯೋಗಕ್ಕಾಗಿ ಎಂಬುದು ಶಿಕ್ಷಣಕ್ಕೆ ನಮ್ಮ ಹಿರಿಯರು ನೀಡಿದ ವ್ಯಾಖ್ಯಾನ. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಹಣ ಗಳಿಸುವುದೇ ಶಿಕ್ಷಣ ಪಡೆಯುವುದರ ಮುಖ್ಯ ಉದ್ದೇಶವಾಗಿದೆ. ಇದನ್ನೇ ಇಂದಿನ ವಿದ್ಯಾರ್ಥಿ ಸಮುದಾಯದ ಮೆದುಳಿನಲ್ಲಿ ತುಂಬಿಸಲಾಗುತ್ತಿದೆ. ಇದಕ್ಕೆ ಹೆತ್ತವರು- ಶಿಕ್ಷಕರು ಮಾತ್ರವಲ್ಲ, ಈ ದೇಶವನ್ನು ಆಳುವ ರಾಜಕೀಯ ಶಕ್ತಿಗಳೂ ಕಾರಣ. ಇಂದು ವಿದ್ಯಾಕೇಂದ್ರಗಳು ವ್ಯಾಪಾರ ಕೇಂದ್ರಗಳಾಗಿವೆ. ಸಾರ್ವಜನಿಕ ವಿದ್ಯಾಸಂಸ್ಥೆಗಳು ಕ್ಷೀಣಿಸಿ, ಖಾಸಗಿ ವಿದ್ಯಾಸಂಸ್ಥೆಗಳು ಹೆಚ್ಚಿವೆ. ಖಾಸಗಿ ಶಿಕ್ಷಣ ಕೇಂದ್ರಗಳು ಆಧುನಿಕ ಈಸ್ಟ್ ಇಂಡಿಯಾ ಕಂಪನಿಗಳಿದ್ದಂತೆ. ಕಡಿಮೆ ಬಂಡವಾಳ ಹೂಡಿ ಹೆಚ್ಚು ಲಾಭ ಗಳಿಸುವುದೇ ಅವುಗಳ ಗುರಿ. ಇವು ತಮ್ಮದೇ ಕಾನೂನುಗಳನ್ನು ರೂಪಿಸಿಕೊಂಡು ಸರ್ಕಾರಕ್ಕೆ ಸೆಡ್ಡು ಹೊಡೆಯುತ್ತಿರುವುದನ್ನು ಕಾಣುತ್ತೇವೆ.
ಸಾಲ ಸೋಲ ಮಾಡಿಯಾದರೂ ತಮ್ಮ ಮಕ್ಕಳನ್ನು ದೊಡ್ಡ ದೊಡ್ಡ ಕಾಲೇಜುಗಳಲ್ಲಿ ಸೇರಿಸುವ ಹೆತ್ತವರು, ಅವರು ದೊಡ್ಡ ಉದ್ಯೋಗಕ್ಕೆ ಸೇರಿ ಎಲ್ಲ ಸೌಕರ್ಯಗಳನ್ನು ಪಡೆದು ತಮ್ಮ ಆರ್ಥಿಕ ಹೊರೆಯನ್ನು ಇಳಿಸುವರೆಂದು ನಂಬುವುದರಲ್ಲಿ ಅಥವಾ ಕನಸು ಕಾಣುವುದರಲ್ಲಿ ತಪ್ಪಿಲ್ಲ. ಆದರೆ ಹಣ ಸಂಪಾದನೆಯೇ ಶಿಕ್ಷಣದ ಗುರಿ ಎಂಬ ಚಿಂತನೆಯನ್ನು ವಿದ್ಯಾರ್ಥಿಗಳ ತಲೆಗೆ ತುರುಕುತ್ತಿರುವುದು ಎಷ್ಟು ಸರಿ?
ಜಾಗತೀಕರಣ ಮತ್ತು ಉದಾರೀಕರಣದ ಸಿದ್ಧಾಂತಗಳು ಸಾಮಾನ್ಯ ಜನರ ಜೀವನವನ್ನು ಅಸ್ತವ್ಯಸ್ಥಗೊಳಿಸಿದೆ ಎಂಬುದರಲ್ಲಿ ಮರು ಮಾತಿಲ್ಲ. ಸಾಲ ಮಾಡದೆ, ತನ್ನ ಸಂಪಾದನೆಯಲ್ಲೇ ನೆಮ್ಮದಿಯ ಬದುಕು ನಡೆಸುವುದು ನಮ್ಮ ಪೂರ್ವಜರ ಜೀವನ ಧೋರಣೆಯಾಗಿತ್ತು. ಆದರೆ ಸಾಲ ಮಾಡಿಯಾದರೂ ಜೀವನವನ್ನು ಅನುಭವಿಸಬೇಕು ಎಂಬುದು ಈಗಿನ ಸಮಾಜದ ಸಿದ್ಧಾಂತವಾಗಿದೆ. ಜೀವನವನ್ನು ಅನುಭವಿಸುವ ಭರಾಟೆಯಲ್ಲಿ ಹೆತ್ತವರು ತಮ್ಮ ಮಕ್ಕಳಿಗೆ ಆದರ್ಶವನ್ನಾಗಲಿ, ಸರಿದಾರಿಯಲ್ಲಿ ನಡೆಯಲು ಮಾರ್ಗದರ್ಶನವನ್ನಾಗಲಿ ನೀಡಲು ಸಾಧ್ಯವಾಗುತ್ತಿಲ್ಲ.
ಅಕ್ಷರ ಕಲಿಯುವ ಮೊದಲೇ ಮಕ್ಕಳ ಕೈಗೆ ಮೊಬೈಲ್ ಮತ್ತು ಕಂಪ್ಯೂಟರ್ ಸಾಧನಗಳನ್ನು ಖರೀದಿಸಿ ಕೊಡುವ ಹೆತ್ತುವರು ಅವುಗಳಿಂದ ತಮ್ಮ ಮಕ್ಕಳು ಉದ್ಧಾರವಾಗುತ್ತಿದ್ದಾರೆಯೇ ಅಥವಾ ದಾರಿ ತಪ್ಪುತ್ತಿದ್ದಾರೆಯೇ ಎಂದು ಗಮನಿಸುವುದಿಲ್ಲ. ಆಧುನಿಕ ಸೌಲಭ್ಯಗಳಿಗಾಗಿ, ಸಾಧನಗಳಿಗಾಗಿ ಅಡ್ಡ ಹಾದಿ ತುಳಿಯುವ ವಿದ್ಯಾರ್ಥಿಗಳೂ ಇದ್ದಾರೆ.
ಇಂದಿನ ಯುವಜನರಲ್ಲಿ ಬಹುತೇಕರು ಪಾಶ್ಚಾತ್ಯ ಸಂಸ್ಕೃತಿಯನ್ನು ಅಂಧಾನುಕರಣೆ ಮಾಡುತ್ತ, ಪಾಶ್ಚಾತ್ಯರು ಅನುಭವಿಸಿ ಬೇಡವೆಂದು ಕೈ ಬಿಟ್ಟ ಜೀವನ ಶೈಲಿಯ ಅನೇಕ ಅಂಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದಾರೆ. ಮದ್ಯ ಮತ್ತು ಮಾದಕ ವಸ್ತುಗಳು ನಾಗರಿಕತೆಯ ಲಕ್ಷಣಗಳಾಗಿಬಿಟ್ಟಿವೆ. ಆರ್ಥಿಕ ಬಿಕ್ಕಟ್ಟಿಗೆ ಮುನ್ನ ಅಮೆರಿಕ ಮತ್ತು ಪಾಶ್ಚಾತ್ಯ ರಾಷ್ಟ್ರಗಳು ಅಳವಡಿಸಿಕೊಂಡಿದ್ದ ಜೀವನ ಕ್ರಮಗಳನ್ನು ಈಗ ನಮ್ಮ ಭಾರತೀಯ ಸಮಾಜ ಅನುಸರಿಸತೊಡಗಿದೆ. ಗೌರವಸ್ಥ ಕುಟುಂಬದಲ್ಲಿ ಹುಟ್ಟಿದ, ಉನ್ನತ ಶಿಕ್ಷಣ ಪಡೆಯುತ್ತಿರುವ ಯುವಜನಾಂಗ ಕೂಡ ಆಡಂಬರದ ಜೀವನಕ್ಕೆ ಜೊತುಬಿದ್ದು ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ.
ಹಣ ಸಂಪಾದನೆಯ ನಂತರವೂ ಜೀವನವನ್ನು ಅನುಭವಿಸಲಾಗದ ಸ್ಥಿತಿಯಲ್ಲಿ ನಮ್ಮಲ್ಲನೇಕರು ಇದ್ದಾರೆ. ಜೀವನದಲ್ಲಿ ಸಕಲ ಸೌಕರ್ಯಗಳಿದ್ದರೂ ಅವುಗಳನ್ನು ಅನುಭವಿಸಲು ಸಾಧ್ಯವಾಗುತ್ತಿಲ್ಲ. ಬದುಕಿನಲ್ಲಿ ನೆಮ್ಮದಿಯಿಲ್ಲ. ಮಾನಸಿಕ ಒತ್ತಡಗಳು, ಗೊಂದಲಗಳು ಅವರ ಬೆನ್ನು ಹತ್ತಿವೆ. ರಾತ್ರಿಯನ್ನು ಹಗಲನ್ನಾಗಿಸಿಕೊಂಡು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವರು ದುಡಿಯುತ್ತಿದ್ದಾರೆ. ಆದರೆ ಶಿಸ್ತು ಮತ್ತು ಕಟ್ಟುಪಾಡುಗಳಿಲ್ಲದ ಜೀವನ ಶೈಲಿಯಿಂದಾಗಿ ಚಿಕ್ಕ ವಯಸ್ಸಿನಲ್ಲೇ ಅನೇಕ ಕಾಯಿಲೆಗಳಿಗೆ ತುತ್ತಾದವರಿದ್ದಾರೆ.
ಹಣಕ್ಕಾಗಿ ಬದುಕೇ ಅಥವಾ ಬದುಕಿಗಾಗಿ ಹಣವೇ ಎಂಬ ಗೊಂದಲಗಳ ನಡುವೆ ಜೀವನ ಹಾದಿ ತಪ್ಪಿ ಸಾಗುತ್ತಿದೆ. ಇಂದಿನ ಯುವ ಜನಾಂಗದ ಬಹುತೇಕ ಸ್ಥಿತಿ ಇದು. ಫೇಸ್‌ಬುಕ್, ಟ್ವಿಟರ್‌ಗಳಲ್ಲಿ ಪರಿಚಯಕ್ಕಾಗಿ ಹೊಸ ಮುಖಗಳನ್ನು ಹುಡುಕುವ ಅನೇಕರಿಗೆ ನೆರೆಮನೆಯವರ ಪರಿಚಯವೇ ಇರುವುದಿಲ್ಲ. ದಾರಿಯಲ್ಲಿ ತೊಂದರೆಗೀಡಾದವನು ಎದುರಾದರೂ ಅವನ ಮೊರೆ ಕೇಳುವ ಸಮಯವಿಲ್ಲವೆಂದು ಕಾಲದ ಜೊತೆಗೆ ವೇಗವಾಗಿ ಓಡುತ್ತಿದ್ದೇವೆ. ಅತಿವೇಗ ಅಪಘಾತಕ್ಕೆ ಕಾರಣ. ಇದು ಜೀವನಕ್ಕೂ ಅನ್ವಯವಾಗುತ್ತದೆ.
ವೈಯಕ್ತಿಕ ಬದುಕಿನಲ್ಲಿ ಸ್ವಚ್ಛವಿರದ ಕೆಲ ಸಿನಿಮಾ ಸ್ಟಾರ್‌ಗಳು, ರಾಜಕಾರಣಿಗಳು ಮತ್ತು ಕ್ರೀಡಾಪಟುಗಳು ಇಂದಿನ ಯುವ ಜನಾಂಗಕ್ಕೆ ಆದರ್ಶವಾಗಿ ಕಂಡುಬರುತ್ತಾರೆ. ಕ್ರೌರ್ಯ ಮತ್ತು ಅಶ್ಲೀಲತೆಯೇ ಇಂದಿನ ಚಲನಚಿತ್ರಗಳ ಬಂಡವಾಳವಾಗಿದೆ. ಸಾಮಾಜಿಕ ಮೌಲ್ಯಗಳ ಕುರಿತು ಚಿಂತಿಸುವವರು ಕಡಿಮೆ. ಬದುಕನ್ನು ಸಿಕ್ಕಷ್ಟು ಅನುಭವಿಸಬೇಕೆಂಬ ಧೋರಣೆ ಹೆಚ್ಚಾಗಿದೆ. ಒಂದು ರಾಷ್ಟ್ರದ ಅಭಿವೃದ್ಧಿಗೆ ಕೇವಲ ಅರ್ಥವ್ಯವಸ್ಥೆ ಕಾರಣವಾಗುವುದಿಲ್ಲ, ಶಿಸ್ತುಬದ್ಧ ಜೀವನ ಮತ್ತು ಉತ್ತಮ ಆಲೋಚನೆಗಳನ್ನು ಹೊಂದಿದ ಆರೋಗ್ಯಪೂರ್ಣ ಸಮಾಜ ದೇಶದ ತಳಹದಿಯಾಗಿದೆ. ಅಂತಹ ಸಮಾಜವನ್ನು ರೂಪಿಸುವ ಶಿಕ್ಷಣ ವ್ಯವಸ್ಥೆ ನಮ್ಮದಾಗಬೇಕು.

-ಐ. ಸೇಸುನಾಥನ್, ಕನ್ನಡ ಉಪ್ಯಾಸಕರು
ಸರ್ಕಾರಿ ಪದವಿ ಪೂರ್ವ ಕಾಲೇಜು
ಚಿನಕುರಳಿ, ಪಾಂಡವಪುರ ತಾ.
ಮಂಡ್ಯ ಜಿಲ್ಲೆ.
sesunathagmail.com


Copyright � 2012 Kannadaprabha.com