Kannadaprabha The New Indian Express
ಸಮ್ಮತಿ ಸೆಕ್ಸ್ ವಯೋವುತಿ ಇಳಿಕೆ ಬೇಕಾ? 
By select 
19 Mar 2013 02:00:00 AM IST

ಹುಚ್ಚು ಖೋಡಿ ಮನಸ್ಸು ಅದು ಹದಿನಾರರ ವಯಸ್ಸು
ಮಾತು ಮಾತಿಗೇಕೋ ನಗು ಮರು ಗಳಿಗೆಯಲ್ಲೇ ಮೌನ
ಕನ್ನಡಿಯ ಮುಂದಷ್ಟು ಹೊತ್ತು ಬರೆಯದಿರುವ ಕವನ...

ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅವರ ಈ ಭಾವಗೀತೆ ತುಂಬಾ ಅರ್ಥಪೂರ್ಣ. ಹದಿಹರೆಯದ ಮನಸ್ಸಿನೊಳಗಾಗುವ ತುಮುಲ, ಗೊಂದಲಗಳನ್ನು ಬಹಳ ಅದ್ಭುತವಾಗಿ ಹಿಡಿದಿಟ್ಟಿದ್ದಾರೆ. 16ರ ವಯಸ್ಸಿನಲ್ಲಿ ಮನಸ್ಸು ಇಂಗು ತಿಂದ ಮಂಗನಂತೆ ಆಡುತ್ತಿರುತ್ತದೆ.. ಯಾವುದೇ ಒಂದು ಸ್ಪಷ್ಟ ನಿಲುವು ತೆಗೆದುಕೊಳ್ಳಲು ಅವರಿಂದ ಸಾಧ್ಯವಾಗಲ್ಲ. ಮನಸ್ಸು ಸದಾ ಚಂಚಲಚಿತ್ತ, ಗೊಂದಲದಿಂದ ಕೂಡಿರುತ್ತದೆ.. ತಾನು ಮಾಡುತ್ತಿರುವುದು ಸರಿಯೋ ತಪ್ಪೋ ತಿಳಿಯಲಾಗದ ಮನಸ್ಥಿತಿ.
ಈ ರೀತಿಯಾಗಿ ಗೊಂದಲದಗೂಡಿನಲ್ಲಿರುವ, ಪ್ರತಿಯೊಂದನ್ನು ಬೆರಗುಗಣ್ಣಿನಿಂದ ನೋಡುವ ವಯಸ್ಸಿನವರಿಗೆ ನೀವು ಲೈಂಗಿಕ ಕ್ರಿಯೆಗೆ ಸಮರ್ಥರು ಮತ್ತು ಅದಕ್ಕೆ ಕಾನೂನು ಕಾವಲಿದೆ ಎಂಬುದನ್ನು ಹೇಳಿಕೊಟ್ಟರೆ ಸಾಮಾಜಿಕ ಸ್ವಾಸ್ಥ್ಯ ಹೇಗಾಗಬೇಡ?
ಇಷ್ಟೆಲ್ಲಾ ಪೀಠಿಕೆ ಯಾಕೆಂದರೆ, ಕೇಂದ್ರ ಸರ್ಕಾರ ಸಮ್ಮತಿ ಸೆಕ್ಸ್ ವಯಸ್ಸನ್ನು 18ರಿಂದ 16ಕ್ಕೆ ಇಳಿಸುವ ಪ್ರಸ್ತಾಪ ಸೂಚಿಸಿ ನಂತರ ವಿರೋಧಗಳ ಹಿನ್ನೆಲೆಯಲ್ಲಿ ಆ ಪ್ರಕ್ರಿಯೆಯಿಂದ ಹಿಂದಕ್ಕೆ ಸರಿದಿದೆ. ಇಂಥ ಪ್ರಯತ್ನ ಮತ್ತೆ ಯಾವ ಕ್ಷಣಕ್ಕಾದರೂ ಮರುಕಳಿಸಬಹುದು. ಮೇಲ್ನೋಟಕ್ಕೆ ಪ್ರಯೋಜನದಂತೆ ಕಂಡರೂ ಇದರಿಂದಾಗುವ ಹಾನಿಗಳೇ ಹೆಚ್ಚು. ಹಾಗಾಗಿಯೇ, ದೇಶದ ಅನೇಕ ಮಹಿಳಾ ಸಂಘಟನೆಗಳ ವಿರೋಧಕ್ಕೆ ಕಾರಣವಾಗಿದೆ ಸರ್ಕಾರದ ಈ ನಿರ್ಧಾರ. 16ರ ವಯಸ್ಸಿನಲ್ಲಿ ಇನ್ನೂ ಎಸ್‌ಎಸ್‌ಎಲ್ಸೀನೂ ಪೂರೈಸಿರಲ್ಲ. ನೀವು ಪರಸ್ಪರ ಒಪ್ಪಿಗೆಯಿಂದ ಲೈಂಗಿಕ ಕ್ರಿಯೆ ನಡೆಸಲು ಅರ್ಹರು ಎಂದು ಗ್ರೀನ್‌ಸಿಗ್ನಲ್ ಕೂಡುತ್ತಿದೆ ಸರ್ಕಾರ. ಈ ಹಂತದ ಮಕ್ಕಳಲ್ಲಿ ಬೌದ್ಧಿಕ, ಮಾನಸಿಕ, ದೈಹಿಕ ಬೆಳೆವಣಿಗೆ ಪರಿಪೂರ್ಣವಾಗಿರುವುದಿಲ್ಲ. ಇನ್ನು ಅವರು ಪ್ರೌಢರಾಗಿಯೇ ಇರುತ್ತಾರೆಯೇ ಹೊರತು ಪ್ರಬುದ್ಧರಾಗಿರಲ್ಲ ಎಂದು ವೈದ್ಯಲೋಕ ಹೇಳುತ್ತದೆ. ಇಷ್ಟಾದರೂ ಸರ್ಕಾರ ಯಾಕೆ ಇಂಥ ನಿರ್ಧಾರಕ್ಕೆ ಕೈಹಾಕಿದೆ? ಅದ್ಯಾವ ಆ್ಯಂಗಲ್‌ನಿಂದ, ಅತ್ಯಾಚಾರ ತಡೆ ಮಸೂದೆಯಲ್ಲಿ ಸಮ್ಮತಿ ಸೆಕ್ಸ್ ವಯೋವುತಿಯನ್ನು 16ಕ್ಕೆ ಇಳಿಸಲು ಹೊರಟಿದೆಯೋ ಗೊತ್ತಾಗುತ್ತಿಲ್ಲ. ಅತ್ಯಾಚಾರ ತಡೆಯುವ ಬದಲು ಮತ್ತಷ್ಟು ಅತ್ಯಾಚಾರಗಳಿಗೆ ಆಸ್ಪದ ಮಾಡಿಕೊಟ್ಟಂತಾಗುತ್ತದೆ. ಒಂದು ವೇಳೆ ಈ ಕಾಯ್ದೆ ಜಾರಿಯಾದ್ರೆ ಮತ್ತಷ್ಟು ಘೋರ, ಕ್ರೂರ ಅತ್ಯಾಚಾರ, ಅಪರಾಧಗಳು ನಡೆಯೋದರಲ್ಲಿ ಅಚ್ಚರಿಯಿಲ್ಲ.
ಸೆಕ್ಸ್ ಅ 16 ಅಂದ್ರೆನೇ ಬೆಚ್ಚಿ ಬೀಳುವ ಹಾಗಾಗಿದೆ. ಈ ಕಾಯ್ದೆ ಅನುಷ್ಠಾನಗೊಂಡರೆ ಯುವ ಪೀಳಿಗೆ ಮೇಲೆ ಭಾರೀ ದುಷ್ಪಾರಿಣಾಮ ಬೀರಲಿದೆ. ಇನ್ನೂ ಕಾಲೇಜು ಮೆಟ್ಟಿಲು ಹತ್ತಿಲ್ಲದ, ಇತ್ತ ಬಾಲಕು ಅಲ್ಲದ ಅತ್ತ ಯುವಕರೂ ಅಲ್ಲದ ಮಕ್ಕಳಿಗೆ ಸೆಕ್ಸ್ ಅವಶ್ಯಕತೆಯಾದರೂ ಏನಿದೆ? ಭವಿಷ್ಯವನ್ನು ಸುಂದರವಾಗಿ ರೂಪಿಸಿಕೊಳ್ಳಲು ಬುನಾದಿಯಾಗುವುದೇ ಎಸ್‌ಎಸ್‌ಎಲ್‌ಸಿ. ಇದು ಎಲ್ಲರ ಜೀವನದಲ್ಲೂ ಅತ್ಯಂತ ಮಹತ್ವದ ಘಟ್ಟ. ಜೀವನಕ್ಕೆ ಹೊಸ ತಿರುವು ಸಿಗುವುದು ಇಲ್ಲಿಂದಲೇ. ಈ ಹಂತದ ಮಕ್ಕಳಿಗೆ ನಮಗೂ ಸಹಮತದ ಸೆಕ್ಸ್ ನಡೆಸಲು ಕಾನೂನಿನ ನೆರವಿದೆ ಎಂಬುದು ಗೊತ್ತಾದರೆ ಏನೆಲ್ಲಾ ಅನಾಹುತಗಳಾಗಬಹುದು ಊಹಿಸಿ. ಉದ್ದೇಶಿತ ಹೊಸ ಕಾಯ್ದೆಯಿಂದ ನಕಾರಾತ್ಮಕ ಪರಿಣಾಮಗಳೇ ಹೆಚ್ಚು.
16ರ ವಯಸ್ಸಿನಲ್ಲಿ ವಿಶೇಷವಾಗಿ ಹೆಣ್ಣುಮಕ್ಕಳ ದೇಹದಲ್ಲಿ ಭಾರೀ ಬದಲಾವಣೆಗಳಾಗುತ್ತಿರುತ್ತವೆ. ಈ ಹಂತದಲ್ಲಿ ಅವರಿಗೆ ಸೆಕ್ಸ್ ಬಗ್ಗೆ ಮಾರ್ಗದರ್ಶನ, ಲೈಂಗಿಕ ಶಿಕ್ಷಣ ಅತ್ಯಗತ್ಯವೇ ಹೊರತು, ಸೆಕ್ಸ್ ಮಾಡೋದಕ್ಕೆ ಲೈಸೆನ್ಸ್ ನೀಡುವುದಲ್ಲ. ಈ ಹಂತದಲ್ಲಿ ಹುಡುಗರಲ್ಲೂ ಕೂಡಾ ಕೆಲವೊಂದು ಬದಲಾವಣೆಗಳು ಆಗುತ್ತಿರುತ್ತವೆ.  ಹದಿಹರೆಯದವರಲ್ಲಿ ಪ್ರೇಮ ಕಲ್ಪನೆಗಳು ಮತ್ತು ಅದರೆಡೆಗಿನ ಆಸಕ್ತಿ ಹೆಚ್ಚು. ಆಕರ್ಷಣೆಯನ್ನು ಲವ್ ಎಂದುಕೊಂಡು ಸಿಕ್ಕಿರುವ ಲೈಸೆನ್ಸ್ ಬಳಸಿಕೊಂಡು ಅನಾಹುತ ಮಾಡಿಕೊಳ್ಳುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ?
ಸೆಕ್ಸ್ ಅ 16ನಿಂದಾಗಿ ಸಾಮಾಜಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಅಪಾಯವಿದೆ. ನಮ್ಮ ಭಾರತೀಯ ಸಂಸ್ಕೃತಿಗೆ ಸಂಪೂರ್ಣ ತದ್ವಿರುದ್ಧ ಇದು. ಕಾನೂನೇ ನೆರವು ನೀಡೋದರಿಂದ ಕಾಮ ಕುತೂಹಲ ತಣಿಸಿಕೊಳ್ಳಲು ಲೈಂಗಿಕ ಮೊರೆ ಹೋಗುವ ಮಕ್ಕಳ ಸಂಖ್ಯೆ ಹೆಚ್ಚಾಗಬಹುದು. ಹಾಗಾಗಿ, ಚಿಕ್ಕ ವಯಸ್ಸಿನಲ್ಲಿ ತಂದೆ- ತಾಯಿಗಳಾಗಬಹುದು. ಈ ತರಹದ ಪ್ರಕ್ರಿಯೆ ಪಾಶ್ಚಿಮಾತ್ಯ ದೇಶಗಳಲ್ಲಿ ನಡೆಯುವುದನ್ನು ನಾವು ಪೇಪರ್‌ಗಳಲ್ಲಿ ಓದುತ್ತಿದ್ದೆವು. ಇನ್ನು ಮುಂದೆ ಭಾರತೀಯ ಪೇಪರ್‌ಗಳಲ್ಲಿ ಪ್ರತಿನಿತ್ಯ ಸಿಂಗಲ್ ಕಾಲಂ ನ್ಯೂಸ್‌ಗಳಾಗಬಹುದು!
ಹೆಸರಿಗಷ್ಟೇ ಸಮ್ಮತಿ ಸೆಕ್ಸ್. ಆದರೆ ಇದು ಒಂಥಾರ ಅತ್ಯಾಚಾರವೇ.  ಎಲ್ಲ ರೀತಿಯಲ್ಲೂ ಕಾಮುಕರು ಬಚಾವ್ ಆಗಿ ಬಿಡಬಹುದಾದ ಅಪಾಯವೂ ಇದೆ. ಬಾಲಕಿಯರ ಮೇಲೆ ಅತ್ಯಾಚಾರವೆಸಗಿ ಬೆದರಿಸಿ, ಸುಳ್ಳು ಹೇಳಿಸಿ ತಾನೂ ಬಚಾವ್ ಆಗುವ ಸಾಧ್ಯತೆಗಳು ದಟ್ಟವಾಗಿವೆ. ಆದರೆ, ನಿಜವಾದ ಸಮಸ್ಯೆಗೆ ಸಿಲುಕೋದು ಮಾತ್ರ ಹುಡುಗಿ. ಸಮಾಜದಲ್ಲಿ ಆ ಹುಡುಗಿ ತಲೆ ಎತ್ತಿ ತಿರುಗಲು ಆಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಮತ್ತೊಂದು ಮಗ್ಗಲಿನಿಂದ ನೋಡುವುದಾದರೆ, 16ಕ್ಕೆ ಸೆಕ್ಸ್‌ಗೆ ಅನುಮತಿ ಸಿಕ್ಕಿ ಬಿಟ್ಟರೆ ಹುಡುಗ- ಹುಡುಗಿಯರಲ್ಲಿ ಭಂಡ ಧೈರ್ಯ ಬಂದು ಬಿಡಬಹುದು. ನಾವು ಸೆಕ್ಸ್ ಮಾಡುತ್ತೇವೆ. ನಮ್ಮನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದು ಅನಾಹುತ ಕೆಲಸಕ್ಕೆ ಕೈ ಹಾಕಬಹುದು. ಹಣದ ಅಗತ್ಯವುಳ್ಳ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆಗೆ ಸೆಳೆಯಲು ಇದು ದಾರಿ ಮಾಡಿಕೊಡುತ್ತದೆ.
ಭಾರತೀಯ ಕೌಟುಂಬಿಕ ವ್ಯವಸ್ಥೆಗಂತೂ ಈ ಉದ್ದೇಶಿತ ಕಾಯ್ದೆ ಮಾರಕವಾಗಿದೆ. 16ರವರೆಗೂ ಮಕ್ಕಳ ಶ್ರೇಯೋಭಿಲಾಷೆಗಾಗಿ ದುಡಿದ ಪೋಷಕರನ್ನು ಮಕ್ಕಳು ಕಡೆಗಣಿಸಬಹುದು. ಈ ಕಾನೂನಿನ ಬಲದಿಂದಾಗಿ ಸ್ವೆಚ್ಛಾಚಾರಿಗಳಾಗಿ ವರ್ತಿಸಲಾರಂಭಿಸಬಹುದು. ತಾವು ಪ್ರಬುದ್ಧರಾಗುವ ಮೊದಲೇ ಪ್ರೇಮದ ಬಲೆಗೆ ಬಿದ್ದು ಓಡಿಹೋಗೋರ ಸಂಖ್ಯೆ ಹೆಚ್ಚಾಗುತ್ತವೆ. 9ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಹೀಗೆ ತಪ್ಪು ಮಾಡಿ ಮಗುವಿಗೆ ಜನ್ಮನೀಡಿದ ಪ್ರಕರಣ, ಇನ್ನು ಯಾರನ್ನೋ ನಂಬಿ ಅವನೇ ತನ್ನ ಪ್ರೇಮಿಯೆಂದು ಭ್ರಮಿಸಿ ಹೆತ್ತವರನ್ನು ಬಿಟ್ಟು ಓಡಿಹೋಗೋ ಪ್ರಸಂಗ- ಹೀಗೆ ಸಾಲು ಸಾಲು ನಿದರ್ಶನಗಳು ಕಣ್ಮುಂದಿವೆ. ಇನ್ನು ಈ ಹಂತದಲ್ಲಿ ಓಡಿಹೋದವರಲ್ಲಿ ಅದೆಷ್ಟು ಮಂದಿ 'ನಿರ್ಭಯಾ'ಗಳಾಗಿದ್ದಾರೋ?
ಭಾರತೀಯ ಸಂಸ್ಕೃತಿಯ ಪ್ರಕಾರ ಮೊದಲು ಮದುವೆ. ಆನಂತರ ಲೈಂಗಿಕಕ್ರಿಯೆ ಹೊರತು ವಿವಾಹಪೂರ್ವ ಸೆಕ್ಸ್‌ಗೆ ಸಮ್ಮತಿಯಿಲ್ಲ. ಆದರೆ, ಈ ಸಮ್ಮತಿ ಸೆಕ್ಸ್ ವಯಸ್ಸು 16ಕ್ಕಿಳಿದರೆ, ಬಾಲ್ಯವಿವಾಹಕ್ಕೆ ಮರುಜೀವ ಕೊಟ್ಟಂತಾಗುತ್ತದೆ. ಶತಮಾನಗಳಿಂದ ನಡೆದು ಬಂದಿದ್ದ ಬಾಲ್ಯ ವಿವಾಹ ಈಗಷ್ಟೇ ಸಮಾಜದಿಂದ ತೊಲಗುವ ಅಂಚಿನಲ್ಲಿತ್ತು, ಇದೀಗ ಅದಕ್ಕೆ ಮತ್ತೆ ಮರುಜೀವ ಬರುವ ಸಾಧ್ಯತೆಗಳಿವೆ.
ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ನಮ್ಮಲ್ಲೂ ಲಿವಿಂಗ್ ಟುಗೆದರ್ ಗರಿಬಿಚ್ಚುತ್ತಿದೆ. ಆದರೆ, ಕಾನೂನಲ್ಲಿ ಅವಕಾಶವಿಲ್ಲ. ಟೀನೇಜ್‌ನಲ್ಲೂ ಲಿವಿಂಗ್ ಟುಗೆದರ್ ಮಾಡ್ತೀವಿ. ನಾವು ಪರಸ್ಪರ ಒಪ್ಪಿಯೇ ಲೈಂಗಿಕ ಕ್ರಿಯೆ ನಡೆಸುತ್ತೇವೆ ಅನ್ನಬಹುದು. ಆಗ ಯಾರು ಏನೂ ಮಾಡಲು ಆಗುವುದಿಲ್ಲ. ಕಾನೂನು ಅವರ ನೆರವಿಗಿರುತ್ತದೆ.
ಜೀವನದ ಹಾದಿಯನ್ನು ರೂಪಿಸುವುದು ಮತ್ತು ತಪ್ಪಿಸೋದು ಟೀನೇಜೇ. ಕೊಂಚ ಎಡವಿದ್ರೂ ಜೀವನದ ಹಳಿ ತಪ್ಪಿ, ಬದಕು ಬರ್ಬಾದ್ ಆಗುತ್ತದೆ. ಅಷ್ಟಕ್ಕೂ ಈ ಸಮ್ಮತಿ ಸೆಕ್ಸ್ ಇಳಿಕೆಯಿಂದ ಭವ್ಯ ಭಾರತ ಭಾವಿ ಪ್ರಜೆಗಳನ್ನು ಸರ್ಕಾರವೇ ಹಾಳು ಮಾಡುತ್ತಿದೆ ಎಂದನಿಸುವುದಿಲ್ಲವೇ?

-ಶೋಭಾ ಎಸ್., ಸುವರ್ಣನ್ಯೂಸ್
anisikeprabha@gmail.com

Copyright � 2012 Kannadaprabha.com